Advertisement

ವ್ಯವಹಾರ ಜ್ಞಾನದಿಂದ ಬದುಕು ಸ್ಥಿರ

09:20 AM Aug 30, 2017 | Team Udayavani |

ಉಡುಪಿ: ಅಕ್ಷರ ಜ್ಞಾನವಿದ್ದರೆ ಮಾತ್ರ ಶಿಕ್ಷಣವಲ್ಲ. ಮುಖ್ಯವಾಗಿ ವ್ಯವಹಾರ ಜ್ಞಾನ ಇರಬೇಕು. ವ್ಯವಸ್ಥಿತವಾಗಿ ವ್ಯವಹಾರವನ್ನು ನಿರ್ವಹಿಸಬೇಕು. ಇದರಿಂದ ಬದುಕು ಸ್ಥಿರ ವಾಗಿರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಉಡುಪಿ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟಗಳ ನೂತನ ಕೇಂದ್ರ ಸಮಿತಿ ಉಡುಪಿ (4,050 ಸ್ವಸಹಾಯ ಸಂಘಗಳನ್ನು ಒಳಗೊಂಡ 139 ಒಕ್ಕೂಟಗಳ) ಇದರ ಪದಗ್ರಹಣ ಸಮಾರಂಭವನ್ನು ಆ. 29ರಂದು ಬನ್ನಂಜೆಯ ನಾರಾಯಣಗುರು ಸಭಾ ಗೃಹದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 

ಧರ್ಮಸ್ಥಳದಿಂದ ಸೇವಾ ಕಾರ್ಯ, ಎಲ್ಲ ದಾನಗಳಂತೆ ಪರಂಪರಾಗತ ಅಭಯ ದಾನ ಮುಂದುವರಿಯುತ್ತದೆ. 35 ಲಕ್ಷ ಮಂದಿ ಸ್ವಸಹಾಯ ಸಂಘದ ಸದಸ್ಯರು ಇದ್ದಾರೆ. ಅವರಿಗೆಲ್ಲರಿಗೂ ಜವಾಬ್ದಾರಿ ಇದೆ. ಮಹಿಳೆ ಯರು ಇಂದು ಸ್ವಾಭಿಮಾನಿಗಳಾಗಿದ್ದಾರೆ. ನಾಯಕತ್ವ ಗುಣ ಬೆಳೆಸಿಕೊಂಡಿದ್ದಾರೆ. ಸಂಸಾರ ದೊಂದಿಗೆ ಸಮಾಜಮುಖೀ ಜೀವನದಲ್ಲಿ ತೊಡ ಗಿಸಿಕೊಳ್ಳುವ ಜವಾಬ್ದಾರಿಯೂ ಮಹಿಳೆಯರ ಮೇಲಿದೆ ಎನ್ನುವುದನ್ನು ಸ್ವಸಹಾಯ ಸಂಘ ಮಾಡಿ ತೋರಿಸಿದೆ ಎಂದು ಹೆಗ್ಗಡೆಯವರು ತಿಳಿಸಿದರು.

ಸಂಘಗಳಿಗೆ ಲಾಭಾಂಶ ಮತ್ತು ಮಳೆ ಕೊಯ್ಲು  ಅನುದಾನವನ್ನು ವಿತರಿಸಲಾಯಿತು. ನೂತನ ಸಮಿತಿಯ ಪದಗ್ರಹಣವನ್ನು  ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು. ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ರಮೇಶ್‌ ಕಾಂಚನ್‌, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಐಡಿಬಿಐ ಬ್ಯಾಂಕಿನ ಉಡುಪಿ ಮ್ಯಾನೇಜರ್‌ ಪರಶುರಾಮ ರಾವ್‌, ಎಸ್‌ಕೆಡಿಆರ್‌ಡಿಪಿ ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಮಹಾವೀರ ಅಜ್ರಿ., ಕೇಂದ್ರ ಸಮಿತಿ ನೂತನ ಅಧ್ಯಕ್ಷ ಗಜಾನನ ಎಸ್‌. ಕುಂದರ್‌, ನಿಕಟಪೂರ್ವಾಧ್ಯಕ್ಷ ಬಿ. ಗಣೇಶ್‌ ಆಚಾರ್ಯ ಉಪಸ್ಥಿತರಿದ್ದರು.

ಎಸ್‌ಕೆಡಿಆರ್‌ಡಿಪಿ ನಿರ್ದೇಶಕ ಪುರುಷೋ ತ್ತಮ ಪಿ.ಕೆ. ಸ್ವಾಗತಿಸಿದರು. ಯೋಜನಾಧಿಕಾರಿ ಮಾಲತಿ ದಿನೇಶ್‌ ವರದಿ ಮಂಡಿಸಿದರು. ಮೇಲ್ವಿಚಾರಕ ಸತೀಶ್‌ ಕಾರ್ಯಕ್ರಮ ನಿರ್ವಹಿಸಿದರು. ಅಚ್ಯುತ ವಂದಿಸಿದರು.

Advertisement

ಧರ್ಮಸ್ಥಳದಿಂದ ಸಮಾಜಕ್ಕೆ  ಬೆಳಕು: ಸೊರಕೆ
ಮಾಜಿ ಸಚಿವ, ಶಾಸಕ ವಿನಯ ಕುಮಾರ್‌ ಸೊರಕೆ ಯವರು ಮಾತನಾಡಿ, ರಾಜ್ಯದಲ್ಲಿಯೇ ಸ್ವಸಹಾಯ ಸಂಘಗಳ ಉಡುಪಿ ಒಕ್ಕೂಟವು ಪ್ರಥಮ ಸ್ಥಾನದಲ್ಲಿದೆ. ಧರ್ಮಸ್ಥಳವು ಧಾರ್ಮಿಕತೆಯೊಂದಿಗೆ ಸಮಾಜಕ್ಕೆ ಬೆಳಕು ಕೊಟ್ಟಿದೆ. 
ಎಸ್‌ಕೆಡಿಆರ್‌ಡಿಪಿಯು ದೇಶದಲ್ಲಿಯೇ ಮಾದರಿ ಕಾರ್ಯ ನಡೆಸುತ್ತಿದೆ ಎಂದರು.

ಸರಕಾರಿ ಯೋಜನೆ- ಧರ್ಮಸ್ಥಳ ಪ್ರಭಾವ: ಪ್ರಮೋದ್‌
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮಾತನಾಡಿ, ರಾಜ್ಯದಲ್ಲಿನ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿ ಸರ್ವೇ ನಡೆಸಿದಾಗ ಬೆಂಗಳೂರು ನಗರ ಬಿಟ್ಟರೆ ಉಳಿದೆರಡು ಸ್ಥಾನದಲ್ಲಿ ದ.ಕ. ಮತ್ತು ಉಡುಪಿ ಪಡೆದುಕೊಂಡಿತ್ತು. ಇಲ್ಲಿನ ಗ್ರಾಮಾಭಿವೃದ್ಧಿಗೆ ಮುಖ್ಯ ಕಾರಣ ಧರ್ಮಸ್ಥಳದ ಧರ್ಮಾಧಿಕಾರಿಗಳು ಅನುಷ್ಠಾನಕ್ಕೆ ತಂದಿರುವ ಗ್ರಾಮೀಣಾಭಿವೃದ್ಧಿ ಯೋಜನೆಗಳು. ಸರಕಾರಿ ಯೋಜನೆಗಳ ಮೇಲೂ ಧರ್ಮಸ್ಥಳದ ಯೋಜನೆಗಳು ಪರಿಣಾಮವನ್ನು ಬೀರಿದೆ ಎನ್ನುವುದು ಮನದಟ್ಟಾಗಿದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next