ಕುದೂರು: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಹಲವು ಸಮುದಾಯಗಳಿಗೆ ಸಂಕಷ್ಟದ ಪರಿಸ್ಥಿತಿ ಬಂದಿರುವಂತೆ ಮಣ್ಣಿನ ಗಣಪತಿಯನ್ನು ತಯಾರಿಸುವ ಕುಂಬಾರರಿಗೂ ಆರ್ಥಿಕ ಹೊಡೆತ ಬಿದ್ದಿದೆ. ಪ್ರತಿವರ್ಷ ಗಣೇಶ ಹಬ್ಬದಲ್ಲಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಬದುಕು ಕಟ್ಟಿಕೊಳ್ಳುತ್ತಿದ್ದ ಕಲಾವಿದರ ಬದುಕು ಮೂರಾಬಟ್ಟೆ ಯಾಗಿದೆ.
ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಸರ್ಕಾರ ಆದೇಶ ಹೊರಡಿಸಿದ್ದರಿಂದ ರಾಮನಗರ ಜಿಲ್ಲೆಯ, ಮಾಗಡಿ, ಬಾನುವಾಡಿ, ಕುದೂರು, ಬಿಸ್ಕೂರು ಸೇರಿದಂತೆ ನೂರಾರು ಗಣೇಶ ತಯಾರಕ ಕಲಾವಿದರ ಬದುಕಿನ ಮೇಲೆ ಪರಿಣಾಮ ಬೀರಿದೆ.
ನಮ್ಮ ಕಷ್ಟ ಯಾರಿಗೆ ಹೇಳ್ಳೋಣ?: ಪ್ರತಿ ವರ್ಷ ಹತ್ತಾರು ಜನ ಕಲಾವಿದರು ನಮ್ಮಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಇರುವುದರಿಂದ ದೊಡ್ಡ ಗಾತ್ರದ ಮೂರ್ತಿ ಖರೀದಿ ಆಗುವುದಿಲ್ಲ. ಭಕ್ತರು ಮನೆಯಲ್ಲಿಯೇ ಇಟ್ಟು ಪೂಜೆ ಮಾಡುವುದರಿಂದ 2-3 ಅಡಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಅನೇಕ ಕಲಾವಿದರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಬಾರಿ ಕೆಲಸವಿಲ್ಲ. ಹಣವೂ ಇಲ್ಲ ಎಂಬಂತಾಗಿದೆ. ಕೆಲವರು ಊರು ಬಿಟ್ಟು ಬೇರೆಡೆ ಹೋಗಿದ್ದಾರೆ. ಈ ವೃತ್ತಿಯನ್ನೇ ನಂಬಿದ್ದ ಕಲಾವಿದರು, ಹಣ ಕಾಸಿನ ಸಮಸ್ಯೆ ಎದುರಿಸುತ್ತಿದ್ದು. ಸರ್ಕಾರ ನಮ್ಮಂತವರ ಸಮಸ್ಯೆ ಎಲ್ಲಿ ಕೇಳುತ್ತದೆ ಎಂದು ಬೇಸರದಿಂದ ಹೇಳುತ್ತಾರೆ.
ಒಟ್ಟಾರೆ ಈ ಬಾರಿ ಗಣೇಶ ಹಬ್ಬ ಸಂಭ್ರಮದಿಂದ ದೂರವಾದ ನೋವು ಒಂದೆಡೆಯಾದರೆ ಹಬ್ಬದಲ್ಲಿ ಖರೀದಿಯಾಗುತ್ತಿದ್ದ ಗಣೇಶ ಮೂರ್ತಿಗಳನ್ನೇ ಆಶ್ರಯಿಸಿದ ಕಲಾವಿದರು ಪಾಡು ಹೇಳ ತೀರದಾಗಿದೆ.
ಈ ಬಾರಿ ಗಣೇಶ ಮೂರ್ತಿ ಗಳಿಗೆ ಬೇಡಿಕೆ ಇಲ್ಲ. ದೊಡ್ಡ ಗಾತ್ರದ ಮೂರ್ತಿಗಳನ್ನು ಯಾರೂ ಮಾಡುತ್ತಿಲ್ಲ. ಮನೆಯಲ್ಲಿ ಪೂಜೆ ಮಾಡುವ ಒಂದರಿಂದ ಎರಡೂ ವರೆ ಅಡಿ ಎತ್ತರದ ಗಣೇಶನ ಮೂರ್ತಿ ಗಳನ್ನು ಮಾತ್ರ ತಯಾರಿಸುತ್ತಿದ್ದೇವೆ.
–ಭಾನುಪ್ರಕಾಶ್, ಮಾಗಡಿ ಗಣೇಶ ಮೂರ್ತಿ ತಯಾರಕ