Advertisement
ಅಕ್ಟೋಬರ್ 31 ಭಾರತದ ಮೊದಲ ಗೃಹಮಂತ್ರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ 143ನೇ ಜನ್ಮ ದಿನೋತ್ಸವ. ಈ ಸಲದ ಜನ್ಮ ದಿನ ಪ್ರತಿ ವರ್ಷಕ್ಕಿಂತ ಭಿನ್ನವಾಗಿದೆ. ಉಕ್ಕಿನ ಮನುಷ್ಯನಿಗೆ ನಿರ್ಮಿಸಿದ ಉನ್ನತ ಪ್ರತಿಮೆಯನ್ನು ಕೇಂದ್ರ ಸರಕಾರ ದೇಶಕ್ಕೆ ಅರ್ಪಿಸಲಿದೆ. ಸರ್ದಾರ್, ಉಕ್ಕಿನ ಮನುಷ್ಯ, ಭಾರತ ಒಕ್ಕೂಟ ನಿರ್ಮಾಪಕ ಮೊದಲಾದವುಗಳು ಇವರ ವ್ಯಕ್ತಿತ್ವ ಹಾಗೂ ಕಾರ್ಯಶೈಲಿಯನ್ನು ಕೊಂಡಾಡಿ ಕೊಟ್ಟ ಬಿರುದುಗಳು. ಸರ್ದಾರರಿಗೆ 16ನೇ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿತು. ಅವರ ಮಡದಿ ಜವೇರ್‌ಬಾ. ಕರುಳಿನಲ್ಲಿ ಕಾಣಿಸಿಕೊಂಡ ರೋಗದಿಂದ ಶಸ್ತ್ರಚಿಕಿತ್ಸೆ ವಿಫಲವಾಗಿ 1909 ಜನವರಿ 11 ರಂದು ಇಹಲೋಕ ಯಾತ್ರೆಗೆ ವಿದಾಯ ಹೇಳಿದರು. ಮಡದಿ ತೀರಿಕೊಳ್ಳುವಾಗ ಪಟೇಲರು ಕೋರ್ಟಿನಲ್ಲಿ ಗಹನವಾದ ದಾವೆಯೊಂದರಲ್ಲಿ ವಾದಿಸುತ್ತಿದ್ದರು. ಈ ನಡುವೆ ಮಡದಿ ಕೊನೆ ಉಸಿರೆಳೆದ ಮಾಹಿತಿ ಪಟೇಲರಿಗೆ ತಲುಪಿತು. ಒಂದು ಕ್ಷಣ ವಿಚಲಿತರಾದರೂ ಕರ್ತವ್ಯ ವಿಮುಖರಾಗದ ಪಟೇಲರು ದಾವೆಯಲ್ಲಿ ಸೂಕ್ತ ವಾದ ಮಂಡಿಸಿ ಯಶಸ್ಸನ್ನು ಸಾಧಿಸಿದರು. ಮಡದಿಯ ಮರಣದ ವೇಳೆ ಪಟೇಲರ ವಯಸ್ಸು 34. ಮರು ಮದುವೆಯಾಗುವ ಸಾಧ್ಯತೆಗಳಿದ್ದಾಗ್ಯೂ ಮಕ್ಕಳ ಮೇಲಿನ ಮಮತೆಯಿಂದ ಕೊನೆಯವರೆಗೂ ಮರುಮದುವೆಯಾಗದೇ ಉಳಿದರು.
ನೆಹರೂ, ಗಾಂಧಿ, ಪಟೇಲರು ತ್ರಿಮೂರ್ತಿಗಳಿದ್ದಂತೆ. ಆಗಾಗ ಸೈದ್ಧಾಂತಿಕ ಭಿನ್ನಮತ ಇವರ ನಡುವೆ ಕಾಣಿಸುತ್ತಿತ್ತು. ಆದರೆ ಪಟೇಲರು ಅವುಗಳನ್ನು ಅರಗಿಸಿಕೊಂಡು ಸಾಗುತ್ತಿದ್ದರು. ಆರಂಭದಲ್ಲಿ ಪಟೇಲರಿಗೆ ಗಾಂಧಿಯವರ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಒಮ್ಮೆ ರಾಷ್ಟ್ರೀಯ ಶಿಕ್ಷಣ ಶಾಲೆ ಸ್ಥಾಪಿಸುವ ನಿಮಿತ್ತ ಸಹಾಯ ಯಾಚಿಸಿ ಗಾಂಧಿಯವರು ಗುಜರಾತ್ ಕ್ಲಬ್ಬಿಗೆ ಆಗಮಿಸಿದ್ದರು. ಮಹಾತ್ಮರು ಬಂದರು ಎಂದು ಯಾರೋ ಹೇಳಿದಾಗ “ಅನೇಕ ಮಹಾತ್ಮರಿದ್ದಾರೆ’ ಎಂದು ಉದಾಸೀನ ತೋರಿಸಿದ್ದರು. ಆದರೆ ಚಂಪಾರಣ್ಯ ಚಳವಳಿಯಲ್ಲಿ ಗಾಂಧೀಜಿಯವರ ಹೋರಾಟ ಸರ್ದಾರರ ಅಭಿಪ್ರಾಯಗಳನ್ನು ಬದಲಿಸಿತು. ಅಂದಿನಿಂದ ಗಾಂಧೀಜಿಯವರ ಬಗ್ಗೆ ವಿಶೇಷ ಗೌರವ ಹೊಂದಿದರು. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಗುಜರಾತ್ ಸಭಾವನ್ನು ಆರಂಭಿಸಿ, ಪಟೇಲರು ಅದರ ಕಾರ್ಯದರ್ಶಿಗಳಾದರು. ಉಪ್ಪಿನ ಸತ್ಯಾಗ್ರಹದಲ್ಲಿಯೂ ಗಾಂಧೀಜಿಯವರ ಮಾರ್ಗ ದರ್ಶನದಲ್ಲಿ ಭಾಗವಹಿಸಿದರು. ಆದರೆ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗುವ ವಿಚಾರ ಬಂದಾಗ, ನೆಹರೂ ಅಥವಾ ಗಾಂಧಿಯವರನ್ನು ಅಷ್ಟೇ ಕಠಿಣವಾದ ಮಾತಿನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಪಟೇಲರಿಗೆ ಭಾರತದ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ದರೂ, ಅದರಿಂದ ವಂಚಿತರಾದರೆಂಬ ನೋವು ಪಟೇಲರ ಅಭಿಮಾನಿಗಳಲ್ಲಿ ಇಂದಿಗೂ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಲು ಪ್ರದೇಶ ಕಾಂಗ್ರೆಸ್‌ಗಳ ಅಭಿಪ್ರಾಯ ಸಂಗ್ರಹಿಸಲಾಯಿತು. 15ರಲ್ಲಿ 12 ಅಧ್ಯಕ್ಷರು ಪಟೇಲರ ಪರ ನಿಂತರು. ಈಗ ಆಗುವ ಅಧ್ಯಕ್ಷರಿಗೇ ಮುಂದೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಅದೃಷ್ಟವು ನೆಹರೂರವರತ್ತ ಒಲವು ತೋರಿಸಿತು. ಗಾಂಧೀಜಿಯವರೂ ನೆಹರೂರವರನ್ನು ಬೆಂಬಲಿಸಿದರು. ತಮ್ಮ ಉಮೇದುವಾರಿಕೆಯಿಂದ ಹಿಂದೆ ಸರಿದ ಪಟೇಲರು ಈ ಬಗ್ಗೆ ಯಾವುದೇ ಅಪಸ್ವರ ಎತ್ತದೆ ಗಾಂಧಿಯವರ ಮಾತಿಗೆ ಮನ್ನಣೆ ನೀಡಿದರು. ಗಾಂಧೀಜಿಯವರು ಅಗಲಿದಾಗ ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂ ಮತ್ತು ಪಟೇಲರಿಗೆ ಹೇಳಿದ ಮಾತು ಇಲ್ಲಿ ಗಮನಾರ್ಹ. “ಗಾಂಧೀಜಿಯವರು ತಮ್ಮ ಅತ್ಯಂತ ಪ್ರಿಯವಾದ ಬಯಕೆ ನೆಹರೂ ಮತ್ತು ಪಟೇಲರ ನಡುವೆ ಹೊಂದಾಣಿಕೆ ತರುವುದು ಎಂದು ನನಗೆ ಹೇಳಿದ್ದರು.’ (ಮನ್ನಾರ್ ಕೃಷ್ಣರಾವ್ ಬರೆದ ಸರ್ದಾರ್ ವಲ್ಲಭಭಾಯ್ ಪಟೇಲ್ ಜೀವನ ಚರಿತ್ರೆ ). ಈ ಮಾತನ್ನು ಕೇಳಿ ತತ್‌ಕ್ಷಣ ನೆಹರೂ ಮತ್ತು ಪಟೇಲರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡರಂತೆ.
Related Articles
ಸ್ವತಂತ್ರ ಭಾರತಕ್ಕೆ ಪಟೇಲರ ಬಹುದೊಡ್ಡ ಕೊಡುಗೆ ಭಾರತ ಒಕ್ಕೂಟ ನಿರ್ಮಾಣ. ಆದರೆ ಎಲ್ಲಾ ಪ್ರಾಂತ್ಯಗಳನ್ನೂ ಒಕ್ಕೂಟದೊಳಗೆ ತರುವುದು ಸುಲಭದ ಕೆಲಸವಾಗಿರಲಿಲ್ಲ. ಒಕ್ಕೂಟಕ್ಕೆ ಸೇರಲು ಪ್ರಬಲ ಸವಾಲನ್ನು ಒಡ್ಡಿದವನು ಹೈದರಾಬಾದಿನ ನಿಜಾಮ. ಪಟೇಲರು ನಿಜಾಮನ ನಿಲುವು ಹಾಗೂ ಧೋರಣೆಗಳನ್ನು ಉಗ್ರವಾಗಿ ಖಂಡಿಸಿದರು. ಹೈದರಾಬಾದಿನ ಹಿಂದುಗಳಿಗೆ ಈತನು ನೀಡುವ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಿದರು. ಪಾಕಿಸ್ಥಾನದ ಪರವಾದ ಈತನ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. “ಭಾರತ ಎಂಬ ಶರೀರದ ಉದರವೇ ಹೈದರಾಬಾದ್. ಅದನ್ನು ಕತ್ತರಿಸಲು ಬಿಡಲಾರೆ. ಅದು ಹೋದರೆ ಉಸಿರೇ ಹೋದಂತೆ’. ಇದು ಪಟೇಲರ ದಿಟ್ಟ ನುಡಿ. ಕೊನೆಗೂ ಶಸ್ತ್ರ ಸಜ್ಜಿತ ಸೈನ್ಯವನ್ನು ಹೈದರಾಬಾದಿಗೆ ನುಗ್ಗಿಸಿ ನಿಜಾಮನ ಅಟ್ಟಹಾಸವನ್ನು ಕೊನೆಗಾಣಿಸಿದರು. ಈ ಸೈನಿಕ ಕಾರ್ಯಾಚರಣೆಯನ್ನು “ಆಪರೇಷನ್ ಪೋಲೋ’ ಎಂದು ಅಂದು ಕರೆಯಲಾಗಿತ್ತು.
Advertisement
ಜಮ್ಮು ಮತ್ತು ಕಾಶ್ಮೀರ ಸಮಸ್ಯೆಜಮ್ಮು – ಕಾಶ್ಮೀರದ ಸಮಸ್ಯೆಯ ಕುರಿತು ನೆಹರೂ ಹಾಗೂ ಪಟೇಲರು ತೆಗೆದುಕೊಂಡ ಭಿನ್ನ ನಿಲುವುಗಳು ಇಂದಿಗೂ ಚರ್ಚೆಗೊಳಗಾಗುತ್ತವೆ. ಒಕ್ಕೂಟ ನಿರ್ಮಾಣದ ಸಂದರ್ಭದಲ್ಲೂ ಜಮ್ಮು ಹಾಗೂ ಕಾಶ್ಮೀರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ನೆಹರೂರವರ ಅಭಿಪ್ರಾಯಕ್ಕೆ ಪಟೇಲರ ವಿರೋಧವಿತ್ತು. ಜುನಾಗಢವನ್ನು ವಶಪಡಿಸಿಕೊಂಡಂತೆ ಸೇನೆಯ ಮೂಲಕ ಜಮ್ಮು ಹಾಗೂ ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಇಂಗಿತ ಪಟೇಲರದ್ದಾಗಿತ್ತು. ಆದರೆ ಪಟೇಲರ ಮಾತಿಗೆ ಮನ್ನಣೆ ಸಿಗಲಿಲ್ಲ. ಈ ಹೊಣೆಯನ್ನು ಪಟೇಲರ ಹೆಗಲಿನಿಂದ ಜಾರಿಸಿ ಗೋಪಾಲಸ್ವಾಮಿ ಅಯ್ಯಂಗಾರ್ ಎಂಬುವರಿಗೆ ವಹಿಸಿಕೊಡಲಾಯಿತು. ಇದು ಪಟೇಲರಿಗೆ ನುಂಗಲಾರದ ತುತ್ತಾಯಿತು. ವಿಪರೀತ ಮುಜುಗರಕ್ಕೆ ಪಟೇಲರು ಒಳಗಾದರು. ವಿಶ್ವಸಂಸ್ಥೆಗೆ ಈ ವಿವಾದವನ್ನು ಕೊಂಡೊಯ್ಯುವ ವಿಚಾರದಲ್ಲೂ ಪಟೇಲರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಶ್ವಸಂಸ್ಥೆಗೆ ವಿವಾದ ತಲುಪಿ ಜಮ್ಮು ಹಾಗೂ ಕಾಶ್ಮೀರದ ಸಮಸ್ಯೆ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಸಮಸ್ಯೆಯಾಗಿಯೇ ಬೆಳೆಯಿತು. ಬಿಡದ ಬಾಂಧವ್ಯ ಬೆಸುಗೆ
ಪಟೇಲರು ತೀವ್ರ ಅನಾರೋಗ್ಯಕ್ಕೊಳಗಾಗಿದ್ದರು. ತಮ್ಮ ಜೀವನ ಸಂಜೆಯಲ್ಲಿ ಕಾಲ ಕಳೆಯುತ್ತಿದ್ದರು. ಆಗ ಅವರನ್ನು ಭೇಟಿಯಾಗಲು ಅಂದಿನ ಸಚಿವ ವಿ.ಎನ್.ಗಾಡ್ಗಿಲ್ ಆಗಮಿಸಿದರು. ಪಟೇಲರು ಅವರಲ್ಲಿ, ನಾನು ಬದುಕುವುದಿಲ್ಲ. ನನಗೊಂದು ವಚನ ಕೊಡು ಎಂದರು. ಗಾಡ್ಗಿಲರು ಏನೆಂದು ಕಾತರದಿಂದ ಕೇಳಿದಾಗ, “ಪಂಡಿತ್‌ಜೀ ಜೊತೆ ನಿನ್ನ ಭಿನ್ನಾಭಿಪ್ರಾಯ ಏನೇ ಇರಲಿ ಅವರನ್ನು ಕೈ ಬಿಡಬೇಡ’.(ಮನ್ನಾರ್ ಕೃಷ್ಣ ರಾವ್ ಅವರ ಪುಸ್ತಕದಿಂದ). ಅಸ್ವಸ್ಥರಾಗಿದ್ದ ಪಟೇಲರನ್ನು ನೆಹರೂ ನೋಡಲು ಬಂದರು. ನೆಹರೂ ಪಟೇಲರ ಸಮ್ಮುಖದಲ್ಲಿ ಆಡಿದ ಮಾತುಗಳು ಗಮನಾರ್ಹ. “ನೋಡಿ ನಾವು ಮನಬಿಚ್ಚಿ ಮಾತನಾಡಬೇಕು. ನೀವು ಚಿಂತಿಸಬೇಡಿ. ನೀವು ನಿಮ್ಮ ಬಗೆಗೆ ಎಚ್ಚರ ವಹಿಸಬೇಕು ಮತ್ತು ಜಾಗೃತರಾಗಬೇಕು.’ ಪಟೇಲರಿಗೆ ರಾಜಕೀಯವಾಗಿ ಯಾವುದೇ ಪ್ರತಿಷ್ಠಿತ ಮನೆತನದ ಹಿನ್ನೆಲೆಗಳಿರಲಿಲ್ಲ. ಸಂಪತ್ತಿನಲ್ಲೂ ಅಷ್ಟಕ್ಕಷ್ಟೆ. ಒಬ್ಬ ಸಾಮಾನ್ಯ ಕೃಷಿಕನ ಮಗ. ಆದರೆ ಸಂಘಟನಾ ಶಕ್ತಿ, ಅಚಲ ದೇಶಪ್ರೇಮ, ಆತ್ಮಸಾಕ್ಷಿಗನುಗುಣವಾದ ಬದುಕು ಅವರ ದೊಡ್ಡ ಆಸ್ತಿ. ಅದರಲ್ಲಿ ಅಡಗಿತ್ತು ನಾಯಕತ್ವದ ಗುಣ, ರಾಜಕೀಯ ಭಿನ್ನತೆಗಳನ್ನು ಮರೆತು ಕ್ಷಮಿಸುವ ಉದಾರತೆ. ಅವರ ಗೌರವಾರ್ಥ ಅರ್ಪಿಸುತ್ತಿರುವ ಏಕತಾ ಪ್ರತಿಮೆ ಪಟೇಲರಿಗೆ ಸಂದ ಶಾಶ್ವತ ಗೌರವ. ಡಾ| ಶ್ರೀಕಾಂತ್ ಸಿದ್ದಾಪುರ