Advertisement

ಕಾರ್ಮಿಕರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪಾಸ್

05:09 PM Dec 11, 2021 | Team Udayavani |

ಬೆಂಗಳೂರು: ರಾಜ್ಯದ ಶ್ರಮಿಕ ವರ್ಗದ ಸಂಕ್ಷೇಮಕ್ಕೆ ಶ್ರಮಿಸುತ್ತಿರುವ ಕಾರ್ಮಿಕ ಇಲಾಖೆಯು ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಮುಂದಡಿ ಇರಿಸಿದೆ.

Advertisement

ಕೋವಿಡ್ 1 ಮತ್ತು 2ನೇ ಅಲೆ ವೇಳೆ ಸಹಾಯಧನ, ಆಹಾರಕಿಟ್, ಲಸಿಕೆ, ತಮ್ಮೂರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದ ಇಲಾಖೆಯು ಇದೀಗ ಕಾರ್ಮಿಕರು ತಮ್ಮ ಕೆಲಸದ ಪ್ರದೇಶಗಳಿಗೆ ತೆರಳಲು ಅನುವಾಗುವಂತೆ ಉಚಿತ ಸಾರಿಗೆ ಸೇವೆ ಒದಗಿಸಲು ಮುಂದಡಿ ಇರಿಸಿದೆ.
ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಈ ಉಚಿತ ಸೇವೆಯನ್ನು ಜಾರಿ ಮಾಡಿರುವ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯು ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಮುಂದಡಿ ಇರಿಸಿದೆ.

ಬಿಎಂಟಿಸಿಯಿಂದ ಜಾರಿ
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ಪ್ರಯತ್ನ ಫಲವಾಗಿ ಈ ಸಂಬAಧ ಸಾರಿಗೆ ಇಲಾಖೆ ಜತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಿದೆ.

ದಿನ ನಿತ್ಯ ಕೂಲಿಗಾಗಿ ತೆರಳುವ ಕಟ್ಟಡ ಕಾರ್ಮಿಕರಿಗೆ ಈ ಯೋಜನೆ ಲಾಭಕಾರಿಯಾಗಿದ್ದು, ಪ್ರತಿ ನಿತ್ಯ ಅವರು ಕೆಲಸ ನಿರ್ವಹಣೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಕನಿಷ್ಠ 150 ರಿಂದ 200 ರೂ. ವ್ಯಯಿಸಬೇಕಾದ ಪರಿಸ್ಥಿತಿ ಇದೆ, ಇದರಿಂದ ಅವರು ಪಡೆಯುವ ಕೂಲಿ ಮೊತ್ತದ ಬಹುಭಾಗವನ್ನು ಸಾರಿಗೆಗೆ ವ್ಯಯಿಸುತ್ತಿದ್ದರು. ಇದನ್ನು ಮನಗಂಡ ಸಚಿವ ಶಿವರಾಂ ಹೆಬ್ಬಾರ್, ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆಯ ಯೋಜನೆಗೆ ಚಾಲನೆ ನೀಡಿದರು.

ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರು ಈ ಯೋಜನೆ ಲಾಭ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದಾದ್ಯಂತ ವಿಸ್ತರಣೆಗೆ ಸಿದ್ಧತೆ: ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಜಾರಿ ಆಗಿರುವ ಉಚಿತ ಸಾರಿಗೆ ಸೇವೆಯನ್ನು ರಾಜ್ಯದಾದ್ಯಂತ ವಿಸ್ತರಣೆ ಮಾಡಲು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮುಂದಡಿ ಇರಿಸಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ, ಕೆಎಸ್‌ಆರ್‌ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ಹೀಗೆ ಎಲ್ಲ ಸಾರಿಗೆ ಸಂಸ್ಥೆಗಳೊಂದಿಗೆ ಯೋಜನೆ ತ್ವರಿತ ಜಾರಿಗೆ ಸಂಬಂಧ ಮಹತ್ವದ ಸಭೆಗಳನ್ನು ನಡೆಸಲಾಗಿದೆ.

Advertisement

ಅಸಾಧ್ಯವೆಂದ ಸಾರಿಗೆ ಸಂಸ್ಥೆಗಳು- ಶ್ರಮಿಕರ ಕೈಹಿಡಿದ ಕಲ್ಯಾಣ ಮಂಡಳಿ

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬಸ್ ಸೇವೆ ಜಾರಿಗೆ ಕಾರ್ಮಿಕ ಇಲಾಖೆ ಮುಂದಡಿ ಇರಿಸಿತ್ತು. ಈ ಸಂದರ್ಭದಲ್ಲಿ ಇಲಾಖೆಯು ಶೇ.80ರಷ್ಟನ್ನು ತಾನು ಭರಿಸುವ ಭರವಸೆ ನೀಡಿತ್ತಲ್ಲದೆ, ಇನ್ನುಳಿದ ಶೇ.20ರಷ್ಟನ್ನು ರಿಯಾಯ್ತಿ ನೀಡುವುದು ಅಥವಾ ಸಾರಿಗೆ ಇಲಾಖೆಯೇ ಭರಿಸುವ ಪ್ರಸ್ತಾವನೆಯನ್ನು ಇರಿಸಿತ್ತು.
ಆರಂಭಿಕ ಹಂತದಲ್ಲಿ ಈ ಪ್ರಸ್ತಾವನೆಗೆ ಮೌಖಿಕ ಸಮ್ಮತಿ ಸೂಚಿಸಿದ್ದ ಸಾರಿಗೆ ಇಲಾಖೆ ಇದೀಗ “ತನ್ನ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಶೇ.20 ರಿಯಾಯ್ತಿ ಅಥವಾ ತಾನು ಭರಿಸುವುದು ಅಸಾಧ್ಯ” ಎಂದು ತಿಳಿಸಿದೆ. ಹೀಗಾಗಿ ಶ್ರಮಿಕ ವರ್ಗದ ಏಳಿಗೆಯ ಏಕಮೇವ ಉದ್ದೇಶದಿಂದ ಜಾರಿ ಮಾಡಲಾಗುತ್ತಿರುವ ಈ ಯೋಜನೆ ಅನುಷ್ಠಾನದ ಕಡಕ್ ನಿರ್ಧಾರ ಕೈಗೊಂಡಿರುವ ಕಾರ್ಮಿಕ ಸಚಿವರು, ಶೇ.100ರಷ್ಟು ಮೊತ್ತವನ್ನು ಪಾವತಿಸಿಯಾದರೂ ರಾಜ್ಯದಾದ್ಯಂತ ಜಾರಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರವೇ ರಾಜ್ಯದಾದ್ಯಂತ ಶ್ರಮಿಕ ವರ್ಗಕ್ಕೆ ಉಚಿತ ಬಸ್ ಪಾಸ್ ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ವೇದಿಕೆ ಸಿದ್ಧಗೊಂಡಿದೆ.

ಜಾಗತಿಕ ಸಾಂಕ್ರಾಮಿಕ ಕೋವಿಡ್-19 ಎರಡೂ ಅಲೆಗಳ ಸಂದರ್ಭದಲ್ಲಿ ಸಂಘಟಿತ- ಅಸಂಘಟಿತ ಸೇರಿದಂತೆ ಎಲ್ಲ ಶ್ರಮಿಕವರ್ಗಕ್ಕೆ ಹಲವು ಯೋಜನೆಗಳ ಮೂಲಕ ಸಾಂತ್ವನ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಕೋವಿಡ್ ನಂತರ ಕಾರ್ಮಿಕ ಅದಾಲತ್‌ನಂತಹ ಐತಿಹಾಸಿಕ ಕಾರ್ಯಕ್ರಮ ಜಾರಿ ಮಾಡಿ ಇಲಾಖೆಯು ಶ್ರಮಿಕನಿಗೆ ಇನ್ನಷ್ಟು ಹತ್ತಿರವಾಯಿತು, ಇಲಾಖೆಯು ತನ್ನ ಇದೇ ಧೋರಣೆಯನ್ನು ಮುಂದುವರೆಸಿದ್ದು, ಶ್ರಮಿಕರ ಏಳಿಗೆಗೆ ಅನುವಾಗುವಂತೆ ಉಚಿತ ಸಾರಿಗೆ ಸೇವೆ ಯೋಜನೆ ಜಾರಿಗೆ ಮುಂದಡಿ ಇರಿಸಿದೆ.
– ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವರು.

ಬಿಎಂಟಿಸಿ ಉಚಿತ ಪಾಸ್ ಪಡೆಯುವುದು ಹೇಗೆ?

ಅರ್ಹತೆ
* ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ನೊಂದಾಯಿಸಿಕೊಂಡಿರಬೇಕು.
* ಮಂಡಳಿ ಗುರುತಿನ ಚೀಟಿ
* ಎರಡು ಸ್ಟಾಂಪ್ ಅಳತೆಯ ಭಾವಚಿತ್ರ
* ಆಧಾರ್ ಕಾರ್ಡ್ ಪ್ರತಿ

ಎಲ್ಲೆಲ್ಲಿ ಲಭ್ಯ?
ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ವೈಟ್‌ಫೀಲ್ಡ್ ಟಿಟಿಎಂಸಿ, ಯಶವಂತಪುರ, ಬನಶಂಕರಿ, ವಿಜಯನಗರ, ಶಾಂತಿನಗರ, ದೊಮ್ಮಲೂರು, ಕೋರಮಂಗಲ ಬಿಎಂಟಿಸಿ ಘಟಕಗಳು, ಕೆಂಗೇರಿ ಟಿಟಿಎಂಸಿ, ಯಲಹಂಕ ಹಳೆಯ ಬಸ್ ನಿಲ್ದಾಣ, ಹೊಸಕೋಟೆ ಬಸ್ ನಿಲ್ದಾಣ, ಸುಮನಹಳ್ಳಿ ಡಿಪೋ, ಕೆ.ಆರ್.ಪುರ, ಹೆಚ್‌ಎಸ್‌ಆರ್ ಲೇಔಟ್, ಹೆಬ್ಬಾಳ ಬಿಎಂಟಿಸಿ ಘಟಕಗಳು, ನಾಗಮಂಗಲ ಡಿಪೋ, ಬಾಗಲಗುಂಟೆಯಲ್ಲಿ ಕಾರ್ಮಿಕ ಇಲಾಖೆ, ಡೈರಿ ಸರ್ಕಲ್ ಬಳಿಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗಳನ್ನು ದಾಖಲೆಗಳನ್ನು ಸಲ್ಲಿಸಿ ಪಾಸ್‌ಗಳನ್ನು ಪಡೆದುಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next