ಪಿರಿಯಾಪಟ್ಟಣ: ರಾಜ್ಯದಲ್ಲಿರುವ ಪೌರ ಕಾರ್ಮಿಕರ ನಿಖರ ಮಾಹಿತಿಯನ್ನು ಸಂಗ್ರಹಿ ಸುವುದಕ್ಕಾಗಿ ರಾಜ್ಯದಾಧ್ಯಂತ ಪೌರ ಕಾರ್ಮಿಕರ ಸಮೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದರು.
ಪಟ್ಟಣದ ಮಹದೇಶ್ವರ ಬಡಾವಣೆಯ ಪೌರ ಕಾರ್ಮಿಕರ ಬಡಾವಣೆಗೆ ಬೇಟಿ ನೀಡಿ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಅಂದಾಜು 1.5 ಲಕ್ಷ ಪೌರ ಕಾರ್ಮಿಕರಿದ್ದು, ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಅಂಕಿ ಅಂಶಗಳನ್ನು ಕಲೆ ಹಾಕಲಾಗುತ್ತಿದೆ. ಇದಲ್ಲದೆ ಅಪಾರ್ಟ್‌ಮೆಂಟ್, ಆಸ್ಪತ್ರೆಗಳು, ಮಾಲ್‌ಗಳು ಸೇರಿದಂತೆ ಅನೇಕ ಖಾಸಗಿ ಕ್ಷೇತ್ರಗಳಲ್ಲೂ ಸಾವಿರಾರು ಮಂದಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಗುರುತಿಸುವ ಉದ್ದೇಶದಿಂದ ಸಮೀಕ್ಷೆ ನಡೆಸಲು ತೀರ್ಮಾನಿಸಿ, ಆಯೋಗದ ವತಿಯಿಂದ ಸಮೀಕ್ಷೆಯನ್ನು ನಡೆಸಲು ಚಿಂತನೆ ಮಾಡಿ ಇದಕ್ಕೆ ಪೂರಕವಾಗಿ ಮೊದಲಿಗೆ ಮೈಸೂರು, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲು ತೀರ್ಮಾನಿಸಿ ಸರ್ವೆ ಆಫ್ ಇಂಡಿಯಾ ಸಂಸ್ಥೆಗೆ ವಹಿಸಲಾಗಿದೆ ಎಂದರು.
ಬರಿಗೈಯಲ್ಲಿ ಮ್ಯಾನ್‌ಹೋಲ್ ಸ್ವಚ್ಛತೆ ತಡೆಯದಿದ್ದರೆ ಕ್ರಮ:
ಸುರಕ್ಷಿತ ಸಲಕರಣೆಗಳಿಲ್ಲದೇ ಮ್ಯಾನ್‌ಹೋಲ್‌ಗಳಿಗೆ ಇಳಿದು ಬರಿಗೈಯಲ್ಲಿ ಸ್ವಚ್ಛ ಮಾಡುವುದನ್ನು (ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್) ನಿಷೇಧ ಹೇರಿ ಎಂಟು ವರ್ಷಗಳಾದರೂ ಇನ್ನೂ ಈ ಪದ್ಧತಿ ಚಾಲ್ತಿಯಲ್ಲಿದೆ. 2013ರಲ್ಲಿ ನಿಷೇಧ ಕಾಯ್ದೆ ಜಾರಿಗೆ ಬಂದಾಗ ರಾಜ್ಯದಲ್ಲಿ 403 ಮಾನ್ಯುವಲ್ ಸ್ಕ್ಯಾವೆಂಜರ್‌ಗಳಿದ್ದರು. ಈಗ ಆ ಸಂಖ್ಯೆ ಸಾವಿರಕ್ಕೂ ಅಧಿಕವಾಗಿದೆ. ಇವುಗಳ ತಡೆಗೆ ಎಲ್ಲ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗುವುದು. ಆದೇಶ ಪಾಲನೆಯಲ್ಲಿ ತಾರತಮ್ಯ ತೋರುವ ಅಧಿಕಾರಿಗಳಿಗೆ ದಂಡ ವಿಧಿಸಿ ಶಿಕ್ಷೆ ಕೊಡಿಸಲು ಕ್ರಮವಹಿಸಲಾಗುವುದು. ಯಾವುದೇ ಅನಾಹುತಗಳು ಸಂಭವಿಸಿದರೂ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದರು.
ಪೌರಕಾರ್ಮಿಕರ ಸಬಲೀಕರಣವೇ ಗುರಿ:
ಕಡು ಬಡತನದಲ್ಲಿ ಸೌಕರ್ಯಗಳಿಲ್ಲದೇ ಜೀವನ ನಡೆಸುತ್ತಿರುವ ಪೌರ ಕಾರ್ಮಿಕರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸದೃಢಗೊಳಿಸುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಸೇವೆ ಕಾಯಂಗೊಂಡವರಿಗೆ ನಿವೇಶನ, ಮನೆ, ಪರಿಹಾರ ಸೇರಿದಂತೆ ಸರ್ಕಾರದ ಕೆಲವು ಸೌಲಭ್ಯಗಳಾದರೂ ಸಿಗುತ್ತವೆ. ಆದರೆ ಗುತ್ತಿಗೆ ಆಧಾರದಲ್ಲಿ ನೇರ ಪಾವತಿ ವ್ಯವಸ್ಥೆಗೆ ಒಳಪಟ್ಟವರಿಗೆ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ. ಇದನ್ನು ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮೃತನ ಕುಟುಂಬಕ್ಕೆ ಸರ್ಕಾರದ ರೂ 4.25 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಆಯೋಗದ ಕಾರ್ಯದರ್ಶಿ ರಮಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಮಾಲತಿ, ಡಿವೈಎಸ್ಪಿ ರವಿಪ್ರಸಾದ್, ತಹಶೀಲ್ದಾರ್, ಕೆ.ಚಂದ್ರಮೌಳಿ, ತಾಪಂ ಇಒ ಕೃಷ್ಣಕುಮಾರ್, ಪುರಸಭಾ ಮುಖ್ಯಾಧಿಕಾರಿ ಪ್ರಸನ್ನ,ಅಧ್ಯಕ್ಷ ಮಂಜುನಾಥ್ ಸಿಂಗ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸಿದ್ದೇಗೌಡ, ಸಿಡಿಪಿಒ ಕುಮಾರ್, ಕರ್ನಾಟಕ ನವ ನಿರ್ಮಾಣ ವೇದಿಕೆ ಮುಖಂಡ ಸೀಗೂರು ವಿಜಯಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.