Advertisement
ನಿಮ್ಹಾನ್ಸ್‌ನಲ್ಲಿ ವಿಶ್ವ ಮೆದುಳು ಆರೋಗ್ಯ ದಿನ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ʼಬ್ರೈನ್ ಹೆಲ್ತ್ ಕ್ಲಿನಿಕ್ʼ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಮಾಡಿದ ವೈದ್ಯರಿದ್ದಾರೆ. ಮಾನಸಿಕ ರೋಗಿಗಳು ಇವರ ಬಳಿ ಬಂದಾಗ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಬೇಕು. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಿಮ್ಹಾನ್ಸ್‌ನ ತಜ್ಞರು ಈಗಾಗಲೇ 100 ವೈದ್ಯರಿಗೆ ತರಬೇತಿ ನೀಡಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮಾನಸಿಕ ರೋಗಿಗಳು ನೇರವಾಗಿ ನಿಮ್ಹಾನ್ಸ್‌ಗೆ ಬರದೇ ಸ್ಥಳೀಯ ಮಟ್ಟದಲ್ಲೇ ಸೇವೆ ಪಡೆಯಬಹುದು ಎಂದು ತಿಳಿಸಿದರು.
Related Articles
Advertisement
ಒಬ್ಬ ವ್ಯಕ್ತಿಗೆ ಕೇವಲ ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಲುವುದಿಲ್ಲ. ಮಾನಸಿಕ ಆರೋಗ್ಯ ಕೂಡ ಮುಖ್ಯವಾಗುತ್ತದೆ. ಮೆದುಳಿನ ಆರೋಗ್ಯ ನಮ್ಮ ನಡವಳಿಕೆ, ಅಭಿಪ್ರಾಯ ವ್ಯಕ್ತಪಡಿಸುವುದು, ನಗುವುದು, ಅಳುವುದು, ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ಮೆದುಳು ಅಗತ್ಯ. ನೆನಪು ಎನ್ನುವುದು ಸುಂದರವಾದ ಅನುಭವ. ಆ ನೆನಪನ್ನು ಹಿಡಿದಿಟ್ಟುಕೊಳ್ಳುವುದೇ ಮೆದುಳು. ನೆನಪಿನ ಶಕ್ತಿ ಇಲ್ಲದಿದ್ದರೆ ಭವಿಷ್ಯ ಸಂಪೂರ್ಣ ಮಂಕಾಗಿಬಿಡುತ್ತದೆ. ದೇಹದ ಎಲ್ಲಾ ಅಂಗಗಳು ಉತ್ತಮವಾಗಿರಲು ಮೆದುಳು ಮುಖ್ಯ. ಇದಕ್ಕಾಗಿ ಸದಾ ಕ್ರೀಯಾಶೀಲವಾಗಿರಬೇಕು. ಆಹಾರ ಸೇವನೆ, ವ್ಯಾಯಾಮ ಮೊದಲಾದವುಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಕನಿಷ್ಠ 6-8 ಗಂಟೆ ನಿದ್ದೆ ಮಾಡಬೇಕಾಗುತ್ತದೆ. ನಿದ್ರಾಹೀನತೆ ಉಂಟಾದರೆ ಆರೋಗ್ಯವೂ ಕೆಡುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಅಗತ್ಯ ಎಂದರು.
ಮಾನಸಿಕ ರೋಗವನ್ನು ಜನರು ತಪ್ಪಾಗಿ ಭಾವಿಸುತ್ತಿದ್ದಾರೆ. ಮಾನಸಿಕ ಆರೋಗ್ಯ ತಜ್ಞರ ಬಳಿ ಹೋದರೆ, ಆ ವ್ಯಕ್ತಿಗೆ ತಲೆ ಸರಿ ಇಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಅನೇಕರು ವೈದ್ಯರ ಬಳಿ ಹೋಗುವುದೇ ಇಲ್ಲ. ಆರಂಭಿಕ ಹಂತದಲ್ಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದರೆ ರೋಗ ನಿವಾರಣೆ ಸಾಧ್ಯ. ಆದರೆ ಬಡತನ, ಸಮಾಜದ ಬಗ್ಗೆ ಆತಂಕ, ಅರಿವಿನ ಕೊರತೆ, ಸೌಲಭ್ಯಗಳ ಕೊರತೆ ಮೊದಲಾದ ಕಾರಣಗಳಿಂದ ಮಾನಸಿಕ ಅನಾರೋಗ್ಯಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಫಿಟ್ಸ್, ಪಾರ್ಶ್ವವಾಯು, ಡಿಮೆನ್ಶಿಯ, ಮೆದುಳು ಟ್ಯೂಮರ್ ಸೇರಿದಂತೆ ಹಲವಾರು ನರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಪಾರ್ಕಿನ್‌ಸನ್ ರೋಗಕ್ಕೂ ಅನೇಕರು ತುತ್ತಾಗುತ್ತಿದ್ದಾರೆ. ಈ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಉತ್ತಮವಾಗಿ ಚಿಕಿತ್ಸೆ ನೀಡಬಹುದು ಎಂದು ಸಲಹೆ ನೀಡಿದರು.
ಪ್ರಮುಖ ಅಂಶಗಳು
ನಿಮ್ಹಾನ್ಸ್ ಸಂಸ್ಥೆ ಇಡೀ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಜನರು ಕೂಡ ಇದೇ ಆಸ್ಪತ್ರೆಗೆ ಬರುತ್ತಿದ್ದಾರೆ. ಇಲ್ಲಿ ಟ್ರಾಮಾ ಸೆಂಟರ್ ಆರಂಭಿಸುವ ಕುರಿತು ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ʼನಮ್ಮ ಕ್ಲಿನಿಕ್ʼ ಮೂಲಕ ಎಲ್ಲರಿಗೂ ಪ್ರಾಥಮಿಕ ಆರೋಗ್ಯ ಸೇವೆ ನೀಡಲಿದೆ.
ಖಾಸಗಿ ಆಂಬ್ಯುಲೆನ್ಸ್ ದರ ಪರಿಷ್ಕರಣೆ ಮಾಡುವ ಅಧಿಕಾರ ಸಾರಿಗೆ ಇಲಾಖೆಗಿದೆ. ರೋಗಿಗಳಿಗೆ ದುಂದು ವೆಚ್ಚವಾದರೆ ಕಡಿವಾಣ ಹಾಕಲಾಗುವುದು. ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು. ಬೇಕಾಬಿಟ್ಟಿ ದರ ನಿಗದಿ ಮಾಡುವುದನ್ನು ಸರ್ಕಾರ ಒಪ್ಪುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು.