Advertisement

ಉಡುಪಿ ಜಿಲ್ಲಾಸ್ಪತ್ರೆ ರಾಜ್ಯದ ಮೊದಲ ಸರಕಾರಿ ಇ-ಆಸ್ಪತ್ರೆ

02:50 PM Feb 28, 2017 | Harsha Rao |

ಉಡುಪಿ: ಚಿಕಿತ್ಸೆಗಾಗಿ ಹೊರರೋಗಿಗಳು, ಒಳರೋಗಿಗಳ ಅಲೆದಾಟ, ಬಿಲ್ಲಿಂಗ್‌ಗಾಗಿ ಕಾದು ಕಾದು ಸುಸ್ತಾಗುವುದು, ಆಸ್ಪತ್ರೆಯಲ್ಲಿ ದಾಖಲಾತಿಗಾಗಿ ಗಂಟೆಗಟ್ಟಲೆ ಕಾಯುವ ತಾಪತ್ರಯ… ಇದು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ನಿತ್ಯ ಕಾಣುವ ಪರಿಸ್ಥಿತಿ. ಆದರೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇನ್ಮುಂದೆ ರೋಗಿಗಳಿಗೆ ಇದ್ಯಾವುದೇ ಸಮಸ್ಯೆ ಎದುರಾಗದು. ಯಾಕೆಂದರೆ ಅಜ್ಜರಕಾಡಿನ ಸರಕಾರಿ ಜಿಲ್ಲಾಸ್ಪತ್ರೆಯು ರಾಜ್ಯದಲ್ಲೇ ಮೊದಲ ಸರಕಾರಿ ಇ-ಆಸ್ಪತ್ರೆಯಾಗಿ ಮಾರ್ಪಾಡಾಗಲಿದೆ.

Advertisement

ಬೆಂಗಳೂರಿನಲ್ಲಿ ಸರಕಾರದ ಜತೆಗೆ ಖಾಸಗಿ ಸಹಭಾಗಿತ್ವ ಹೊಂದಿರುವ ಕೆ.ಸಿ. ಜನರಲ್‌ ಆಸ್ಪತ್ರೆ ಹಾಗೂ ಸಂಜಯ್‌ ಗಾಂಧಿ ಆಸ್ಪತ್ರೆ ಹೊರತುಪಡಿಸಿದರೆ ಸಂಪೂರ್ಣ ಸರಕಾರಿ ಆಸ್ಪತ್ರೆಗಳಲ್ಲಿ ಆನ್‌ಲೈನ್‌ ಮುಖಾಂತರ ವ್ಯವಹಾರ ನಡೆಸುವ ಯಾವುದೇ ಆಸ್ಪತ್ರೆಗಳು ರಾಜ್ಯದಲ್ಲಿ ಇಲ್ಲ. ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಯು ಮಾ. 13ರಂದು “ಪೇಪರ್‌ಲೆಸ್‌’ ಆಗಲಿದ್ದು, ಆ ಮೂಲಕ ರಾಜ್ಯದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿದೆ.

ಮೊದಲಿಗೆ ಮೂರು ಸೇವೆ
ಆಸ್ಪತ್ರೆಗಳಲ್ಲಿ ಲಭ್ಯವಿರುವ ಒಟ್ಟು 16 ವಿಭಾಗದಲ್ಲಿ ಮೊದಲಿಗೆ 3 ವಿಭಾಗಗಳಲ್ಲಿ ಆನ್‌ಲೈನ್‌ ಸೇವೆಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಒಳರೋಗಿ ವಿಭಾಗ, ಹೊರರೋಗಿ ವಿಭಾಗ, ಬಿಲ್ಲಿಂಗ್‌ ವಿಭಾಗವು ಸಂಪೂರ್ಣ ಪೇಪರ್‌ಲೆಸ್‌ ಆಗಲಿದೆ. ಮುಂಬರುವ ದಿನಗಳಲ್ಲಿ ದಾಖಲಾತಿ, ಲ್ಯಾಬ್‌, ಎಕ್ಸ್‌-ರೇ ಸಹಿತ ಎಲ್ಲ 16 ವಿಭಾಗಗಳಲ್ಲೂ ಆನ್‌ಲೈನ್‌ ಸೇವೆ ಒದಗಿಸಲಾಗುವುದು. ರಶೀದಿ ಶುಲ್ಕಕೂಡ ಶೀಘ್ರ ನಗದು ರಹಿತವಾಗಿಸುವ ಯೋಜನೆಯಿದೆ ಎಂದು ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ತಿಳಿಸಿದ್ದಾರೆ.

ಹೈದರಾಬಾದ್‌ ಮೂಲದ ಲ್ಯುಮಿನಸ್‌ ಕಂಪೆನಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಒಡಿಶಾದ ಅನಿಮೇಶ್‌ ನೇತೃತ್ವದಲ್ಲಿ ಕಾರ್ಯ ಪ್ರಗತಿಯಲ್ಲಿದೆ. ಕಂಪ್ಯೂಟರ್‌ಗಳಿಗೆ ಬೇಕಾದ ತಂತ್ರಜ್ಞಾನಗಳನ್ನೆಲ್ಲ ಅಭಿವೃದ್ಧಿಪಡಿಸುತ್ತಿದ್ದಾರೆ. ಅವರೊಂದಿಗೆ ಬಿಹಾರ ಮೂಲದ ಗೌತಮ್‌ ಕೂಡ ಸಾಫ್ಟ್ವೇರ್‌ ಅಳವಡಿಕೆಯಲ್ಲಿ ಸಹಕರಿಸುತ್ತಿದ್ದಾರೆ.

ಮಾ. 13: ಜನೌಷಧ ಮಳಿಗೆಗೆ ಚಾಲನೆ
ಜಿಲ್ಲಾಸ್ಪತ್ರೆಯಲ್ಲಿ ಜನೌಷಧ ಮಳಿಗೆಯು ಮಾ. 13ರಂದು ಉದ್ಘಾಟನೆಗೊಳ್ಳಲಿದ್ದು, ಅದೇ ದಿನ ಇ- ಆಸ್ಪತ್ರೆ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಚಾಲನೆ ನೀಡಲಿದ್ದಾರೆ.

Advertisement

ಏನು ಪ್ರಯೋಜನ?
ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು ಇ-ಆಸ್ಪತ್ರೆಗಳಾಗಿ ಅಭಿವೃದ್ಧಿ ಹೊಂದಿದರೆ ಮುಂದಿನ ದಿನಗಳಲ್ಲಿ ಒಬ್ಬ ರೋಗಿಯು ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ದಾಖಲಾದರೂ ಅವರ ಎಲ್ಲ ಮಾಹಿತಿ ಕಂಪ್ಯೂಟರ್‌ನಲ್ಲಿ ಲಭ್ಯವಿರುತ್ತದೆ. ಆ ರೋಗಿಯ ಆಧಾರ್‌ ನಂಬರ್‌ ಅಥವಾ ಮೊಬೈಲ್‌ ನಂಬರ್‌ ಮೂಲಕ ಅವರ ಬಗ್ಗೆ ಮಾಹಿತಿ ಪಡೆಯಬಹುದು.
ಉದಾಹರಣೆಗೆ ಉಡುಪಿಯ ವ್ಯಕ್ತಿ ಮೊದಲಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಯಾವುದಾದರೂ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಅನಂತರ ಮಂಗಳೂರು ಅಥವಾ ಬೇರೆ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಾದಾಗ ಅವರ ಮೊಬೈಲ್‌ ಅಥವಾ ಆಧಾರ್‌ ನಂಬರ್‌ ಹಾಕಿದಾಗ ಆ ವ್ಯಕ್ತಿಗೆ ಹಿಂದೆ ನೀಡಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಲಭಿಸುತ್ತದೆ. ಅದರ ಜತೆಗೆ ಆಸ್ಪತ್ರೆಗಳಲ್ಲಿ ದಿನವೊಂದಕ್ಕೆ ಬಳಕೆಯಾಗುವ ಅಪಾರ ಪ್ರಮಾಣದ ಕಾಗದವೂ ಉಳಿತಾಯವಾಗುವುದರಿಂದ ಇದರ ಹಿಂದೆ ಪರಿಸರ ಸಂಬಂಧಿ ಕಳಕಳಿಯೂ ಇದೆ ಎನ್ನಲಡ್ಡಿಯಿಲ್ಲ.

ಸುಲಭ ಸೇವೆ
ಜನರಿಗೆ ಸುಲಭವಾಗಿ ವೈದ್ಯಕೀಯ ಸೇವೆಗಳು ಲಭ್ಯವಾಗಲಿ ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರವು ಈ ಸೇವೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಉಡುಪಿಯನ್ನೇ ಕೇಂದ್ರವಾಗಿಟ್ಟುಕೊಂಡು ಆರೋಗ್ಯ ಇಲಾಖೆಯು ಈ ಯೋಜನೆಜಾರಿಗೆ ತರುತ್ತಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ, ರೋಗಿಗಳಿಗೆ ಯಾವುದೇ ರೀತಿಯ ಗೊಂದಲ, ತೊಂದರೆ ಉಂಟಾಗದಂತೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.
 – ಪ್ರಮೋದ್‌ ಮಧ್ವರಾಜ್‌ ,ಜಿಲ್ಲಾ  ಉಸ್ತುವಾರಿ ಸಚಿವ

ಜನರಿಗೆ ಹೆಚ್ಚಿನ ಅನುಕೂಲ
ಸಾರ್ವಜನಿಕರಿಗೆ ಇನ್ನಷ್ಟು ಸುಲಭವಾಗಿ ಆರೋಗ್ಯ ಸಂಬಂಧಿ ಸೇವೆಗಳು ಲಭ್ಯವಾಗಲಿ ಅನ್ನುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯನ್ನು ಇ-ಆಸ್ಪತ್ರೆಯಾಗಿ ಮಾರ್ಪಡು ಮಾಡಲಾಗುತ್ತಿದೆ. ಈಗಾಗಲೇ ಒಂದು ಖಾಸಗಿ ಸಂಸ್ಥೆಗೆ ಅದರ ಜವಾಬ್ದಾರಿ ವಹಿಸಿಕೊಟ್ಟಿದ್ದು, ಅವರು ಅದರ ಎಲ್ಲ ರೀತಿಯ ಸಾಧಕ-ಬಾಧಕಗಳನ್ನು ಪರಿಶೀಲಿಸುತ್ತಿದ್ದಾರೆ.
 – ಡಾ| ರೋಹಿಣಿ, ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next