ಬೆಂಗಳೂರು: ಕರ್ನಾಟಕದಲ್ಲಿ ಹೆದ್ದಾರಿಗೆ ಸಂಬಂಧಿಸಿದ ಯಾವುದೇ ಯೋಜನೆಗಳಿಗೆ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡ 2 ದಿನಗಳ “ಮಂಥನ್’ಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಗಳು ನೀಡುವ ವಾರ್ಷಿಕ ಹೆದ್ದಾರಿ ಯೋಜನೆಗಳ ಮೇಲೆ ಯಾವುದೇ ಮಿತಿ ಅಥವಾ ನಿರ್ಬಂಧ ವಿಧಿಸಿಲ್ಲ. ಎಷ್ಟು ಯೋಜನೆಗಳಿದ್ದರೂ ಪ್ರಸ್ತಾವನೆ ಸಲ್ಲಿಸಲಿ. ಅವುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಾವು ಸಿದ್ಧ. ಆದರೆ, ಹೀಗೆ ಸಲ್ಲಿಸುವ ಪ್ರಸ್ತಾವನೆಗಳು ಪರಿಪೂರ್ಣವಾಗಿರಬೇಕು’ ಎಂದು ಹೇಳಿದರು.
ಹೆದ್ದಾರಿ ಯೋಜನೆಗಳಿಗೆ ತೊಡಕಾಗಿರುವ ಭೂಸ್ವಾಧೀನದಂತಹ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಆಯಾ ರಾಜ್ಯಗಳದ್ದಾಗಿದೆ. ಆದರೆ, ಇದು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೀವೇ ಪರಿಹಾರ ಕಂಡುಕೊಳ್ಳಿ:
ಭೂಸ್ವಾಧೀನ ಅಥವಾ ಅರಣ್ಯ ಮತ್ತು ಪರಿಸರ ಅನುಮೋದನೆ ದೊರೆಯದೆ ಹಲವು ವರ್ಷಗಳಿಂದ ಯೋಜನೆಗಳು ಅಡಕತ್ತರಿಯಲ್ಲಿ ಸಿಲುಕಿರುತ್ತವೆ. ಹೀಗೆ ಆಯಾ ರಾಜ್ಯಗಳಲ್ಲಿ ಎದುರಾದ ತೊಡಕುಗಳನ್ನು ನಿವಾರಿಸುವ ಹೊಣೆ ಯಾರದ್ದು? ನಾನೇನಾದರೂ ರಸ್ತೆ ನಿರ್ಮಾಣ ಮಾಡುತ್ತಿದ್ದೀನಾ? ನನಗೆ ತಂತ್ರಜ್ಞಾನವೂ ಗೊತ್ತಿಲ್ಲ. ವರ್ಷಗಳು ಕಳೆದರೂ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಆಗಿರುವುದಿಲ್ಲ. ಯುಟಿಲಿಟಿ ಸ್ಥಳಾಂತರದ ಸಮಸ್ಯೆ ಉಂಟಾಗಿರುತ್ತದೆ. ಹೀಗೆ ಒಂದಿಲ್ಲೊಂದು ಕಾರಣಗಳಿಂದ ನನೆಗುದಿಗೆ ಬಿದ್ದಿರುತ್ತವೆ. ನೀವೇ ಸರ್ಕಾರ (ಸಚಿವರು) ಆಗಿರುತ್ತೀರಿ. ಪರಿಶೀಲನಾ ಸಭೆ ಕರೆದು ಪ್ರತಿ ಬಗೆಯ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕು. ಇದು ನಿಮ್ಮ ಜವಾಬ್ದಾರಿ ಎಂದು ತೀಕ್ಷ್ಣವಾಗಿ ಹೇಳಿದರು.
ಕೇಂದ್ರ ರಸ್ತೆ ನಿಧಿ ಅಡಿ ನೂರರಷ್ಟು ಅನುದಾನದೊಂದಿಗೆ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಅವಕಾಶ ಇದೆ. ಆದರೆ, ಇದುವರೆಗೆ ಕೇವಲ ಆರು ರಾಜ್ಯಗಳು ಈ ಸಂಬಂಧ ಒಡಂಬಡಿಕೆ ಮಾಡಿಕೊಂಡು ಪ್ರಸ್ತಾವನೆ ಸಲ್ಲಿಸಿವೆ. ಉಳಿದ ರಾಜ್ಯಗಳು ಯಾಕೆ ಮುಂದೆಬರುತ್ತಿಲ್ಲ ಎಂದು ಕೇಳಿದರು.