ಬೆಂಗಳೂರು: ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಕೆಲ ಮಂದಿ ಡಿಜೆ ಹಳ್ಳಿ ಘಟನೆ ನಂತರ ಸಿಕ್ಕಿ ಬಿದ್ದಿದ್ದರು. ಹೀಗಾಗಿ ನಮ್ಮ ಟೀಕೆ ಉಗ್ರರ ವಿರುದ್ಧ ಇರಬೇಕು. ಆದರೆ, ಕೋಟ್ಯಂತರ ಜನರಿಗೆ ಅನ್ನ, ಆಶ್ರಯ, ಜೀವನ ನೀಡುತ್ತಿರುವ ತಾಯಿಯಂಥ ಊರಿನ ಬಗ್ಗೆ ಅಲ್ಲ. ಬೆಂಗಳೂರಿನಲ್ಲಿ ಉಗ್ರರು ಸಿಕ್ಕಿಬಿದ್ದ ಮಾತ್ರಕ್ಕೆ ಬೆಂಗಳೂರು ಅವರದ್ದಲ್ಲ. ಬೆಂಗಳೂರು ನಮ್ಮದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಉಗ್ರರ ಕೇಂದ್ರವಾಗಿದೆ ಎಂಬ ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ. ಇಂಥ ಹೇಳಿಕೆಯನ್ನು ಸಮರ್ಥಿಸಲಾಗದೇ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಕಟ ಅನುಭವಿಸಿದ್ದನ್ನು ನಾನು ಮಾಧ್ಯಮದ ಮೂಲಕ ನೋಡಿದೆ. ಈ ಅಪ್ರಬುದ್ಧ ಹೇಳಿಕೆ ಬಿಜೆಪಿಯ ಹಿರಿಯರಿಗೆ ಮಾಡಿದ ಅಪಮಾನವೂ ಹೌದು ಎಂದು ಹೇಳಿದ್ದಾರೆ.
ಬೆಂಗಳೂರು ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ, ಬೆಂಗಳೂರು 28 ವಿಧಾನಸಭೆ ಕ್ಷೇತ್ರ ಮಾತ್ರ ಅಲ್ಲ, ಬೆಂಗಳೂರು ನಾಲ್ಕು ಲೋಕಸಭೆ ಕ್ಷೇತ್ರ ಮಾತ್ರವಲ್ಲ. ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಮತ ಧೃವೀಕರಣಕ್ಕಾಗಿ ಬೆಂಗಳೂರನ್ನೇ ಅಪಮಾನಿಸುವ ಈ ಕ್ಷುಲ್ಲಕ ಹೇಳಿಕೆ ಅಪರಾಧವೇ ಸರಿ. ಈ ಹೇಳಿಕೆ ಸಂಬಂಧ ಬಿಜೆಪಿ ಸಂಬಂಧಿಸಿದವರಿಂದ ಕ್ಷಮೆ ಕೇಳಿಸಬೇಕು ಎಂದು ಎಚ್ ಡಿಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಸಂಪುಟ ಸರ್ಕಸ್: ದಿಲ್ಲಿ ನಡೆ ನಿಗೂಢ; ಮೂವರನ್ನು ಕೈ ಬಿಡಲು ಬಿಎಸ್‌ವೈ ಚಿಂತನೆ
ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ ಎಂದಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಕಳೆದ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತದ ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿಯ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರ ಕೇಂದ್ರ ಸ್ಥಾನವಾಗಿದೆ ಎಂದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ