ನವದೆಹಲಿ: ಅಯೋಧ್ಯೆ ರಾಮಮಂದಿರದ ಹೊರಭಾಗದ ಪ್ರದೇಶವು ರಾಮ ಜನ್ಮಸ್ಥಾನ ಎಂಬ ಈ ಹಿಂದಿನ ಹೇಳಿಕೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಮುಸ್ಲಿಂ ದಾವೆದಾರರು ಹಿಂಪಡೆದಿದ್ದಾರೆ. ಅಲ್ಲದೆ, ವಿವಾದಿತ 2.77 ಎಕರೆ ಭೂಮಿಯು ರಾಮ ಜನ್ಮಸ್ಥಾನ ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂಬ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. 1886 ಮೇ 18 ರಂದು ರಾಮ್ ಚಬೂತರಾ ರಾಮನ ಜನ್ಮಸ್ಥಾನ ಎಂಬುದಾಗಿ ಕೋರ್ಟ್ ನೀಡಿದ್ದ ತೀರ್ಪಿಗೆ ಮೇಲ್ಮನವಿ ಸಲ್ಲಿಸಿರಲಿಲ್ಲವಷ್ಟೇ. 1828 ರಲ್ಲಿ ವಾಲ್ಟರ್ ಹ್ಯಾಮಿಲ್ಟನ್ ವರದಿಯಲ್ಲೂ ಅಯೋಧ್ಯೆಯು ರಾಮನ ಜನ್ಮಸ್ಥಾನ ಎಂಬ ಕುರಿತು ಯಾವುದೇ ಪುರಾವೆಯಿಲ್ಲ ಎಂದಿದ್ದಾರೆ. 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ನೀಡಿದ ವರದಿಯ ಪ್ರಕಾರ ಬಾಬ್ರಿ ಮಸೀದಿಗೂ ಮುನ್ನ ಮಂದಿರವಿತ್ತು ಎಂಬುದಕ್ಕೆ ಸೂಕ್ತ ಪುರಾವೆ ಇಲ್ಲ ಎಂದೂ ಸುನ್ನಿ ವಕ್ಫ್ ಮಂಡಳಿ ಪರ ವಾದಿಸಿದ ಹಿರಿಯ ವಕೀಲ ಜಫರ್‌ಯಾಬ್ ಜಿಲಾನಿ ಹೇಳಿದರು. ಆದರೆ ಎಎಸ್‌ಐ ವರದಿಗೆ ನೀವು ಹೈಕೋರ್ಟ್‌ನಲ್ಲೇ ಆಕ್ಷೇಪ ಸಲ್ಲಿಸಬೇಕಿತ್ತು. ನಾವು ಇದನ್ನು ಪರಿಗಣಿಸಲಾಗದು ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು.