Advertisement

ಪಕ್ಷದಲ್ಲಿ ಡಿ.ಕೆ.ಶಿ, ಸಿದ್ದರಾಮಯ್ಯ ಬಣ ಇರುವುದು ಸತ್ಯ: ಸತೀಶ್ ಜಾರಕಿಹೊಳಿ‌

09:58 AM Mar 14, 2020 | Suhan S |

ಬೆಳಗಾವಿ : ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿ, ಸಿದ್ದರಾಮಯ್ಯ ಬಣ ಇರುವುದು ಸತ್ಯ ಆದರೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದರು.

Advertisement

ಕೆಪಿಸಿಸಿ ಕಾರ್ಯಾದ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸಿದ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಡಿ.ಕೆ.ಶಿವಕುಮಾರ ಕಾಂಗ್ರೆಸ್ ಅಧ್ಯಕ್ಷರು. ಸಿದ್ದರಾಮಯ್ಯನವರು ಪ್ರಭಾವಿ ನಾಯಕರು. ಪಕ್ಷದಲ್ಲಿ ಈಗ ಮೂವರು ಕಾರ್ಯಾದ್ಯಕ್ಷರು ಇದ್ದಾರೆ ದಲಿತ ಸಮುದಾಯದ ನಾಯಕರೊಬ್ಬರು ಕಾರ್ಯಾದ್ಯಕ್ಷರಾಗಬೇಕು ಎಂಬ ಬೇಡಿಕೆ ಇದೆ. ಎಲ್ಲರ ಸಮ್ಮುಖದಲ್ಲಿಯೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುತ್ತೇವೆ ಎಂದು  ಹೇಳಿದರು.

ಮನೆ ಎಂದ ಮೇಲೆ ಕೆಲವರಲ್ಲಿ ವೈಮನಸ್ಸು ಇರುವುದು ಸಹಜ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಗಾಗಿ ಗುಂಪುಗಾರಿಕೆ ನಡೆಯುತ್ತದೆ. ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ ಬಣ ಇರುವುದು ಸತ್ಯ. ಆದರೆ ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದು ಹೇಳಿದರು.  ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ ಅಲ್ಲಿಯವರೆಗೆ ಪಕ್ಷವನ್ನು ಸಂಘಟಿಸಿ ಮರಳಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.

ಎಲ್ಲರಲ್ಲೂ ಬಹುದಿನಗಳ ಕಾತುರತೆಯಿತ್ತು. ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಚರ್ಚೆ ನಡೆದಿತ್ತು. ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿ ಒಬ್ಬ ಅಧ್ಯಕ್ಷ ಹಾಗೂ ಮೂವರನ್ನು ಕಾರ್ಯಾಧ್ಯಕ್ಷರ ನೇಮಕ ಮಾಡಿದೆ ಎಂದರು. ಹುದ್ದೆಗೆ ಸಹಕಾರ ನೀಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ನವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.  ಡಿ.ಕೆ.ಶಿವಕುಮಾರ ಅವರಲ್ಲಿ ಉತ್ಸಾಹ ಇದೆ. ಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೂವರು ಕಾರ್ಯಾಧ್ಯಕ್ಷರು ಕೆಪಿಸಿಸಿ ಅದ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ನೀಡಬೇಕೆಂಬ ಆಸೆ ನಮಗೂ ಇದೆ. ಇನ್ನೂ ಒಂದು ಹುದ್ದೆ ಖಾಲಿ ಇದೆ. ಹೈಕಮಾಂಡ್ ಯಾವ ರೀತಿ ತೀರ್ಮಾನ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದರು .ಜಿಲ್ಲೆಯಲ್ಲಿ ಗೋಕಾಕ ಸೇರಿದಂತೆ ‌ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್  ಪಕ್ಷಕ್ಕೆ ನಷ್ಟವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಡೆ ‌ಮುಖಮಾಡಿದ್ದಾರೆ. ಅದರಿಂದ ಯಾವುದೇ ನಷ್ಟವಾಗಿಲ್ಲ. ಉಪಚುನಾವಣೆಯಲ್ಲಿ ನಮ್ಮ‌ಶಕ್ತಿ ಪ್ರದರ್ಶನ ಮಾಡಿದ್ದೇವೆ. ಇನ್ನೂ ಮೂರು ವರ್ಷ ಕಾಲಾವಕಾಶವಿದೆ. ಪಕ್ಷ ಬಲಪಡಿಸುವ ತಂತ್ರ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆಯ ಮೇಲೆ ಚುನಾವಣೆ ಎದುರಿಸುವ ಕುರಿತು ಸ್ಥಳೀಯ ನಾಯಕರ,ಕಾರ್ಯಕರ್ತರ ಅಭಿಪ್ರಾಯ ಆಲಿಸಿ ನಂತರ ತೀರ್ಮಾಣ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next