Advertisement

ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕರ ಹೇಳಿಕೆ

02:01 AM Mar 25, 2019 | Sriram |

ನವದೆಹಲಿ: ಭೋಜ್‌ಪುರಿ ನಟಿ, ಗಾಯಕಿ ಹಾಗೂ ನೃತ್ಯಪಟು ಸಪ್ನಾ ಚೌಧರಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯು ಗೊಂದಲ ಮೂಡಿಸಿರುವ ಹೊತ್ತಲ್ಲೇ ಬಿಜೆಪಿ ಶಾಸಕರೊಬ್ಬರು ಆಡಿರುವಂಥ ಮಾತುಗಳು ತೀವ್ರ ವಿವಾದಕ್ಕೆ ಗ್ರಾಸವಾಗಿದೆ.

Advertisement

ಸಪ್ನಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಅದಕ್ಕೆ ಪ್ರತಿಕ್ರಿಯಿಸಿದ ಹರ್ಯಾಣದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌, “ಸೋನಿಯಾ ಗಾಂಧಿಯಂತೆಯೇ ಸಪ್ನಾ ಚೌಧರಿ ಕೂಡ ನೃತ್ಯಗಾತಿ. ರಾಹುಲ್‌ ಗಾಂಧಿಯವರೇ, ಇಟಲಿಯಲ್ಲಿ ನೃತ್ಯ ಮಾಡುತ್ತಿದ್ದ ಸೋನಿಯಾರನ್ನು ನಿಮ್ಮ ಅಪ್ಪ ರಾಜೀವ್‌ ಗಾಂಧಿ ಮದುವೆಯಾದಂತೆ, ಸಪ್ನಾ ಚೌಧರಿಯನ್ನು ನೀವು ಮದುವೆಯಾಗಿ’ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೇಶವು ಒಬ್ಬ ನೃತ್ಯಗಾತಿಯನ್ನು ಯಾವತ್ತೂ ಸ್ವೀಕರಿಸುವುದಿಲ್ಲ ಎಂದೂ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್‌ ಸೇರಿಲ್ಲ ಎಂದ ಸಪ್ನಾ: ಇನ್ನೊಂದೆಡೆ, ಸಪ್ನಾ ಕಾಂಗ್ರೆಸ್‌ ಸೇರ್ಪಡೆ ಸುದ್ದಿ ಹೊಸ ಗೊಂದಲಕ್ಕೆ ಕಾರಣವಾಗಿದೆ. ರವಿವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಪ್ನಾ, ನಾನು ಕಾಂಗ್ರೆಸ್‌ಗೆ ಸೇರ್ಪಡೆಯಾಗಿಲ್ಲ. ಪ್ರಿಯಾಂಕಾ ಅವರೊಂದಿಗೆ ತೆಗೆಸಿಕೊಂಡ ಹಳೇ ಫೋಟೋವನ್ನು ಬಳಸಿಕೊಂಡು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್‌, “ಶನಿವಾರ ರಾತ್ರಿ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಅರ್ಜಿಯನ್ನು ಸಪ್ನಾ ಅವರೇ ಸ್ವತಃ ಭರ್ತಿ ಮಾಡಿ, ಸಹಿ ಮಾಡಿ ಕೊಟ್ಟಿದ್ದಾರೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next