ಚಾಮರಾಜನಗರ: ಕೆಲ ಸಂಘಟನೆಗಳು ಭಾರತ ಸಂವಿಧಾನದ ವಿರುದ್ಧ ಹೇಳಿಕೆ ನೀಡುವ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಆರೋಪಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ವತಿಯಿಂದ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಚನ ಚಳವಳಿ ಹುಟ್ಟಿರುವ ಕರ್ನಾಟಕದ ನೆಲದಲ್ಲೂ ಸಂವಿಧಾನದ ವಿರುದ್ಧ ಹೇಳಿಕೆ ಬರುತ್ತಿರುವುದು ದೇಶಕ್ಕೆ ದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ. ಮನುವಾದಿ ಸಂವಿಧಾನದಲ್ಲಿ ಹಿಂದುಳಿದ ವರ್ಗದವರು, ಶೋಷಿತರಿಗೆ ಸಮಾನತೆ ಸಿಕ್ಕಿರಲಿಲ್ಲ. ದೇಶದ ಚರಿತ್ರೆಯಲ್ಲಿ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಮನುಷ್ಯರ ಪರವಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇಂತಹ ಸರ್ವ ಶ್ರೇಷ್ಠ ಸಂವಿಧಾನವನ್ನು ಹೆಚ್ಚು ಹೆಚ್ಚು ಓದುವ ಮೂಲಕ ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡು ಸಂವಿಧಾನವನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ಸಂವಿಧಾನ ತಿರುಚುವ ಹುನ್ನಾರ: ಉದ್ದೇಶ ಪೂರ್ವಕವಾಗಿ ಭಾರತ ಸಂವಿಧಾನವನ್ನು ತಿರುಚುವ ಹುನ್ನಾರ ನಡೆಯುತ್ತಿದೆ. ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸುವಂತೆ ಹೊರಡಿಸಿರುವ ಸುತ್ತೋಲೆ ಕೈಪಿಡಿಯಲ್ಲಿ ಅಂಬೇಡ್ಕರ್ ಬಬ್ಬರೇ ಸಂವಿಧಾನ ಬರೆದಿಲ್ಲ ಎಂಬ ತಪ್ಪು ಸಂದೇಶ ಸಾರುವ ಕೆಲಸ ನಡೆದಿದೆ. ಸಂವಿಧಾನದ ವಿರುದ್ಧ ಹೇಳಿಕೆಗಳು ಬಂದಂತಹ ಸಂದರ್ಭಗಳಲ್ಲಿ ಕಠಿಣವಾಗಿ ಪ್ರತಿಕ್ರಿಯಿಸಬೇಕಿದೆ ಎಂದರು.
ಪ್ರತಿಯೊಬ್ಬರು ಸಂವಿಧಾನ ಗೌರವಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ನಾಗಯ್ಯ ಮಾತನಾಡಿ, ಸಂವಿಧಾನಕ್ಕೆ ಗಂಡಾಂತರ ಬಂದಿದೆ. ಅದನ್ನು ತಡೆಯಬೇಕಾದರೆ ಬಿಎಸ್‌ಪಿ ಅಧಿಕಾರ ಹಿಡಿದಾಗ ಮಾತ್ರ ಸಾಧ್ಯವಾಗುತ್ತದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕಿದೆ. ಸಂವಿಧಾನ ಆಶಯಗಳನ್ನು ಗೌರವಿಸುವುದು ಭಾರತ ದೇಶ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ ಕೃಷ್ಣಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಮಚವಾಡಿ, ಜಿಲ್ಲಾ ಕಾರ್ಯದರ್ಶಿ ದೌಲತ್ ಪಾಷ, ತಾಲೂಕು ಅಧ್ಯಕ್ಷ ಎಸ್.ಪಿ.ಮಹೇಶ್, ರಾಜೇಂದ್ರ, ಸಿದ್ದರಾಜು, ಶಾಂತರಾಜು, ಬಾಲರಾಜು, ರಂಗಸ್ವಾಮಿ, ಬೈರಲಿಂಗಸ್ವಾಮಿ ಇತರರು ಹಾಜರಿದ್ದರು.