ಹೊಸದಿಲ್ಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಸೇರಿ ಇತರ ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಕಾಂಗ್ರೆಸ್ ರಾಷ್ಟ್ರ ರಾಜಧಾನಿ ದೆಹಲಿ ಸೇರಿ ದೇಶದ ವಿವಿಧೆಡೆ ಬುಧವಾರ(ಸೆ18) ಬೀದಿಗಿಳಿದು ಪ್ರತಿಭಟನೆ ನಡೆಸಿದೆ.
ಐಸಿಸಿ ಖಜಾಂಚಿ ಅಜಯ್ ಮಕೇನ್ ಅವರು ರಾಹುಲ್ ಗಾಂಧಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕರಾದ ತರ್ವಿಂದರ್ ಸಿಂಗ್ ಮರ್ವ, ರವನೀತ್ ಬಿಟ್ಟು, ರಘುರಾಜ್ ಸಿಂಗ್ ಮತ್ತು ಬಿಜೆಪಿ ಮಿತ್ರಪಕ್ಷ ಶಿಂಧೆ ಬಣದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ದೆಹಲಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಸಚಿವ ಬಿಟ್ಟು ಪ್ರತಿಕ್ರಿಯೆ
ಕಾಂಗ್ರೆಸ್ ಪ್ರತಿಭಟನೆ ಕುರಿತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಪ್ರತಿಕ್ರಿಯಿಸಿದ್ದು “ನಾನು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಲು ಬಯಸುತ್ತೇನೆ, ನೀವು ಗಾಂಧಿ ಕುಟುಂಬವನ್ನು ಸಂತುಷ್ಟಗೊಳಿಸಲು ನನ್ನ ವಿರುದ್ಧ ಸಂತೋಷದಿಂದ ಪ್ರತಿಭಟಿಸಬಹುದು”ಎಂದಿದ್ದಾರೆ.
ರಾಹುಲ್ ಗಾಂಧಿ ಸಿಖ್ಖರ ವಿರುದ್ಧ ಹೇಳಿಕೆ ನೀಡಿದ್ದು, ಖಲಿಸ್ಥಾನಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸುತ್ತಿರುವ ದೇಶದ ದೊಡ್ಡ ಶತ್ರು ಗುರುಪತ್ವಂತ್ ಸಿಂಗ್ ಪನ್ನೂನ್ ಅವರನ್ನು ಬೆಂಬಲಿಸಿದರು. ಕಾಂಗ್ರೆಸ್ ಪಕ್ಷ ಅಥವಾ ಕಾಂಗ್ರೆಸ್ ಅಧ್ಯಕ್ಷರು ಇದನ್ನು ಖಂಡಿಸಬಹುದು ಎಂದು ನಾನು ಎರಡು ದಿನ ಕಾದಿದ್ದೆ. ಅವರು ಏನನ್ನೂ ಹೇಳದಿದ್ದಾಗ, ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕರು ಪನ್ನೂನ್ ಜತೆ ನಿಂತಿರುವುದು ಸ್ಪಷ್ಟವಾಯಿತು ಎಂದು ನಾನು ಹೇಳಿಕೆ ನೀಡಿದೆ” ಎಂದಿದ್ದಾರೆ.