ಮೈಸೂರು: ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಂಡರೆ ರಾಜ್ಯಕ್ಕೆ ಬಿಜೆಪಿಯಿಂದ ಮೂರನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಚಾರ್ಜ್ ಆದಮೇಲೆ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ. ಮತ್ತೆ ಹೇಳುತ್ತಿದ್ದೇನೆ, ಬಿಟ್ ಕಾಯಿನ್ ಪ್ರಕರಣದ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ ಮೂರನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದರು.
ಪಿಎಸ್ ಐ ಪರೀಕ್ಷೆ ಹಗರಣದ ತನಿಖೆ ಕಲಬುರ್ಗಿಗೆ ಮಾತ್ರ ಸೀಮಿತವಾಗಬಾರದು. ತನಿಖೆ ನಡೆಸದೆ ಸರ್ಕಾರ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಒಂದೇ ಪರೀಕ್ಷಾ ಕೇಂದ್ರದ ಬಗ್ಗೆ ಎಫ್ಐಆರ್ ಮಾಡಿದ್ದಾರೆ, ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು. ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು. ಪರೀಕ್ಷಾ ಅಭ್ಯರ್ಥಿಗಳು ಹಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಆದರೆ ತನಿಖೆ ಮಾತ್ರ ನಡೆಯುತ್ತಿಲ್ಲ ಎಂದರು.
ಇದನ್ನೂ ಓದಿ:ಬಿಜೆಪಿ ನಾಯಕರಲ್ಲಿ ‘ಸಂಕಟ’ ತಂದ ‘ಸಂತೋಷ’ ಹೇಳಿಕೆ; ಬಿಎಲ್ಎಸ್ ನೀಡಿದ ಮಹತ್ವದ ಸುಳಿವೇನು?
ಮರು ಪರೀಕ್ಷೆ ಮಾಡಬೇಕೆಂದಿರುವ ಸರ್ಕಾರ 545 ಮಂದಿಯ ವೈಎಂಆರ್ ಶೀಟ್ ತರಿಸಿಕೊಂಡಿದ್ದಾದರೂ ಯಾಕೆ? ಇಲ್ಲಿ ಸರ್ಕಾರದ ದಡ್ಡತನ ಎದ್ದು ಕಾಣುತ್ತಿದ್ದೆ. 300 ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ. ಆದರೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಜನರನ್ನು ಬಂಧಿಸಿದೆ? ಒಂದೆರಡು ಕಿಂಗ್ ಪಿನ್ ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.