ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ನಂತರ ಮುಂದಿನ 15 ದಿನಗಳಲ್ಲಿ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ಬಲಪಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾರಣದಿಂದ ರಾಜ್ಯ ಪ್ರವಾಸ ಕೈಗೊಳ್ಳುವುದು ತಡವಾಗಿದೆ. ಸೋಂಕಿನ ತೀವ್ರತೆ ಕಡಿಮೆಯಾದ ನಂತರ ರಾಜ್ಯಾದ್ಯಂತ ಜಿಲ್ಲಾ ಪ್ರವಾಸ ಆರಂಭಿಸಲಾಗುವುದು ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಕನಿಷ್ಠ 130ರಿಂದ 140 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ತರಲು ವಿಶೇಷ ಪ್ರಯತ್ನ ಮಾಡಬೇಕು ಎಂದುಕೊಂಡಿದ್ದೇನೆ. ಸೋಂಕು ಕಡಿಮೆಯಾಗುತ್ತಿದ್ದಂತೆ ಪ್ರವಾಸ ಶುರುವಾಗಲಿದೆ ಎಂದರು.
ಇದನ್ನೂ ಓದಿ:ಉತ್ತರ ಕನ್ನಡದ ಭಾಸ್ಕರ ಪಟಗಾರ ಕಾಂಗ್ರೆಸ್ ಸೇರ್ಪಡೆ: ಇನ್ನೂ ಹಲವರು ಬರಲಿದ್ದಾರೆ; ಡಿಕೆಶಿ
ನಾವು ಮಾಡಿದ ಒಳ್ಳೆಯ ಕೆಲಸಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈಗೊಂಡಿರುವ ಯೋಜನೆಗಳು ಜನರನ್ನು ತಲುಪಿವೆ. ಅವರೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆಂಬುದು ನೂರಕ್ಕೆ ನೂರು ವಿಶ್ವಾಸವಿದೆ.
ಕಾರ್ಯಕರ್ತರಲ್ಲಿಯೂ ಇದೇ ವಿಶ್ವಾಸ ತುಂಬುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸ ಆರಂಭಿಸುತ್ತೇನೆ ಎಂದು ತಿಳಿಸಿದರು.