ಹೈದರಾಬಾದ್: ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದಿರುವುದು ಉತ್ತರಪ್ರದೇಶ ಸರ್ಕಾರದ ಪ್ರಾಯೋಜಿತ ಹಿಂಸಾಚಾರವಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಾಡಿ ಐಟಿಐ ಕಾಲೇಜಿಗೆ ಬೀಗ: ಬೀದಿಗೆ ಬಿದ್ದ ನೂರಾರು ವಿದ್ಯಾರ್ಥಿಗಳ ಬದುಕು
ಉತ್ತರಪ್ರದೇಶದ ಲಖಿಂಪುರ್ ನಲ್ಲಿ ನಡೆದ ಘಟನೆಯಲ್ಲಿ ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದಂತೆ ಅಸಾದುದ್ದೀನ್ ಒವೈಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಎಎನ್ ಐ ಜತೆ ಮಾತನಾಡಿದ ಒವೈಸಿ, ಇದೊಂದು ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರವಾಗಿದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರ ಪ್ರಚೋದನಕಾರಿ ಭಾಷಣ ಮಾಡಿದ್ದು, ಲಖಿಂಪುರ್ ಘಟನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ.
ಲಖಿಂಪುರ್ ಹಿಂಸಾಚಾರ ಪ್ರಕರಣದ ಬಗ್ಗೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಮುಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸುವುದಾಗಿ ರೈತ ಸಂಘಟನೆಗಳು ತಿಳಿಸಿವೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ವೇಗವಾಗಿ ಕಾರು ಚಲಾಯಿಸಿ, ರೈತರ ಮೇಲೆ ಹತ್ತಿಸಿದ ಪರಿಣಾಮ ನಾಲ್ವರು ರೈತರು ಸಾವನ್ನಪ್ಪಲು ಕಾರಣವಾಗಿತ್ತು ಎನ್ನಲಾಗಿದೆ.