Advertisement

ಕಿತ್ತೂರು ಉತ್ಸವಕ್ಕೆ ಸಿಗಲಿ ರಾಜ್ಯಮಟ್ಟದ ಮಾನ್ಯತೆ

11:25 AM Oct 23, 2021 | Team Udayavani |

ಬೆಳಗಾವಿ: ಸತತವಾಗಿ ಕಾಡುತ್ತಲೇ ಇರುವ ಕೊರೊನಾ ಹಾವಳಿ ನಡುವೆ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಇಡೀ ಕಿತ್ತೂರು ಸಂಸ್ಥಾನ ಸಜ್ಜಾಗಿದ್ದು, ಜಿಲ್ಲಾಡಳಿತ ಕೊರೊನಾ ಮಾರ್ಗಸೂಚಿ ಅನ್ವಯ ಎರಡು ದಿನಗಳ ಉತ್ಸವದ ಅರ್ಥಪೂರ್ಣ ಆಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಉತ್ಸವದ ಈ ಬಾರಿಯ ವಿಶೇಷ ಆಕರ್ಷಣೆ ಎಂದರೆ ಬಹಳ ವರ್ಷಗಳ ನಂತರ ಮುಖ್ಯಮಂತ್ರಿಗಳು ಉತ್ಸವದ ಉದ್ಘಾಟನೆಗೆ ಬರುತ್ತಿದ್ದಾರೆ.

Advertisement

ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢ ನಂಬಿಕೆ ಮಾತುಗಳಿಗೆ ಕಿವಿಗೊಡದೆ ಸಿಎಂ ಬಸವರಾಜ ಬೊಮ್ಮಾಯಿ ಉತ್ಸವದ ಉದ್ಘಾಟನೆಗೆ ಬರುತ್ತೇನೆಂದು ಹೇಳಿರುವುದು ವಿಶೇಷ. 2012ರಲ್ಲಿ ಜಗದೀಶ ಶೆಟ್ಟರ ಉತ್ಸವ ಉದ್ಘಾಟನೆ ಮಾಡಿದ ಕೊನೆಯ ಮುಖ್ಯಮಂತ್ರಿ. ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಭಯದಿಂದ ಹಿಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಬಂದಿರಲಿಲ್ಲ.

ಹೀಗಾಗಿ ಸಹಜವಾಗಿಯೇ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಆಗಮನದ ಬಗ್ಗೆ ಅನುಮಾನಗಳಿದ್ದವು. ಆದರೆ ಬೊಮ್ಮಾಯಿ ಅವರೇ ಉತ್ಸವಕ್ಕೆ ಬರುವುದಾಗಿ ಹೇಳುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದ ಜತೆ ಕಿತ್ತೂರಿನ ಜನತೆ ಸಹ ಅದ್ಧೂರಿ ಸ್ವಾಗತ ನೀಡಲು ಸಜ್ಜಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ 3 ದಿನಗಳ ಬದಲಾಗಿ ಎರಡು ದಿನಗಳಿಗೆ ಉತ್ಸವ ಸೀಮಿತವಾಗಿರುವುದರಿಂದ ಈ ಎರಡು ದಿನಗಳನ್ನೇ ಅರ್ಥ ಪೂರ್ಣ ಹಾಗೂ ಅವಿಸ್ಮರಣೀಯವಾ ಗಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಿತ್ತೂರಿಗೆ ಅಲಂಕಾರದ ಮೂಲಕ ಹೊಸ ರೂಪ ನೀಡಲಾಗಿದೆ. ಮುಖ್ಯಮಂತ್ರಿಗಳಿಗೆ ಸವಾಲು: ಈ ಬಾರಿಯ ಕಿತ್ತೂರು ಉತ್ಸವ ಎರಡು ಅಂಶಗಳಿಂದ ಹೆಚ್ಚು ಗಮನ ಸೆಳೆದಿದೆ. ಈ ಎರಡೂ ಅಂಶಗಳು ಮುಖ್ಯಮಂತ್ರಿಗಳ ಭಾಷಣದ ಮೇಲೆ ಅವಲಂಬಿತ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಒಂದು ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಹಾಗೂ ಇನ್ನೊಂದು ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕು ಎಂಬ ಬೇಡಿಕೆ.

ಈ ಎರಡೂ ಅಂಶಗಳು ಮುಖ್ಯಮಂತ್ರಿಗಳಿಗೆ ಒಂದು ರೀತಿಯ ಸವಾಲು ಇದ್ದಂತೆ. ಕಿತ್ತೂರು ಕರ್ನಾಟಕ ಮರುನಾಮಕರಣ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕೆಂದು ಈಗಾಗಲೇ ಹೇಳಿರುವ ಸಿಎಂ, ಉತ್ಸವದಲ್ಲಿ ಇದರ ಬಗ್ಗೆ ಯಾವ ರೀತಿ ಪ್ರಸ್ತಾಪ ಮಾಡುತ್ತಾರೆ. ಭರವಸೆ ಯಾವ ರೀತಿ ಇರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಕಿತ್ತೂರು ಕರ್ನಾಟಕ ಮರುನಾಮಕರಣ ವಿಷಯದಲ್ಲಿ ಮುಖ್ಯಮಂತ್ರಿಗಳು ದೃಢ ನಿರ್ಧಾರ ತಾಳಿ ಖಚಿತ ಭರವಸೆ ಕೊಟ್ಟಿದ್ದೇ ಆದರೆ ಈ ಬಾರಿಯ ಕಿತ್ತೂರು ಉತ್ಸವ ಈ ಹಿಂದಿನ ಉತ್ಸವಗಳಿಗಿಂತ ಹೆಚ್ಚು ಬೆಳಗಲಿದೆ.

Advertisement

ಇದನ್ನೂ ಓದಿ:- ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ : ಬಿ.ವೈ.ವಿಜಯೇಂದ್ರ

ಚನ್ನಮ್ಮನ ಅರಮನೆ ಆವರಣದಲ್ಲಿ ಹೊಸ ಬೆಳಕು ಕಾಣಲಿದೆ. ಇನ್ನು 1996ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಜನತಾದಳದ ಜೆ.ಎಚ್‌.ಪಟೇಲ್‌ ಅವರು ಜನರ ಒತ್ತಾಸೆಗೆ ಸ್ಪಂದಿಸಿ ಕಿತ್ತೂರು ಉತ್ಸವವನ್ನು ಸರ್ಕಾರದ ಉತ್ಸವವನ್ನಾಗಿ ಘೋಷಣೆ ಮಾಡಿದ್ದರು. ಆದರೆ ಇದು ಈಗಲೂ ಕಿತ್ತೂರಿಗೆ ಮಾತ್ರ ಸೀಮಿತವಾಗಿರುವ ಉತ್ಸವವಾಗಿದೆ ಎಂಬ ಕೊರಗು ಜನರಲ್ಲಿದೆ. ಅದನ್ನು ದೂರ ಮಾಡಿ ರಾಜ್ಯಮಟ್ಟದ ಉತ್ಸವವನ್ನಾಗಿ ಮಾಡುವ ಜವಾಬ್ದಾರಿ ಈಗಿನ ಸಿಎಂ ಮೇಲಿದೆ. ಬೊಮ್ಮಾಯಿ ಸಹ ಜನತಾ ಪರಿವಾರದಿಂದಲೇ ಬಂದವರು ಎಂಬುದು ಗಮನಿಸಬೇಕಾದ ಸಂಗತಿ.

ಈಗ ಕೇವಲ ಜಿಲ್ಲಾಮಟ್ಟದ ಉತ್ಸವಕ್ಕೆ ಸೀಮಿತವಾಗಿರುವುದರಿಂದ ಅನುದಾನ ಬಹಳ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಹೀಗಾಗಿ ಪ್ರತಿ ವರ್ಷ ಹೆಚ್ಚಿನ ಅನುದಾನಕ್ಕೆ ಸರ್ಕಾರದ ಮುಂದೆ ಗೋಗರೆಯಬೇಕಾದ ಸ್ಥಿತಿ ಇದೆ. ಒಂದು ವೇಳೆ ರಾಜ್ಯಮಟ್ಟದ ಉತ್ಸವವನ್ನಾಗಿ ಮಾಡಿದರೆ ಆಗ 3ರಿಂದ 5 ಕೋಟಿ ಅನುದಾನ ಬರುತ್ತದೆ. ಉತ್ಸವವನ್ನು ಇನ್ನೂ ಅದ್ಧೂರಿಯಾಗಿ ಮಾಡಬಹುದು ಎಂಬುದು ಉತ್ಸವ ಸಮಿತಿ ಸದಸ್ಯರ ಅಭಿಪ್ರಾಯ.

“ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವನ್ನಾಗಿ ಮಾಡ ಬೇಕೆಂದು ಈಗಾಗಲೇ ಸಿಎಂಗೆ ಮನವ ರಿಕೆ ಮಾಡಿಕೊಡಲಾಗಿದೆ. ಸಾಧ್ಯವಾದರೆ ಈ ಉತ್ಸವದಲ್ಲಿ ನಮ್ಮ ಬೇಡಿಕೆ ಈಡೇರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ನಮ್ಮ ಬೇಡಿಕೆಗೆ ಸ್ಪಂದನೆ ಸಿಗುವ ವಿಶ್ವಾಸ ಇದೆ.” „ ಮಹಾಂತೇಶ ದೊಡ್ಡಗೌಡರ, ಕಿತ್ತೂರು ಶಾಸಕ.

 ●ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next