Advertisement
ಗಣೇಶ ವಿಗ್ರಹಗಳಿಗೆ ಮಣ್ಣು ಬಳಸುವುದರಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ. ನೈಸರ್ಗಿಕವಾಗಿ ಒಂದು ಇಂಚು ಮಣ್ಣು ರೂಪುಗೊಳ್ಳಲು ಸಾವಿರ ವರ್ಷ ಅವಶ್ಯ. ಜೇಡಿ ಮಣ್ಣು ಜೀವರಾಶಿಯ ಉಳಿವಿಗೆ ಮತ್ತು ಕೃಷಿಗೆ ಅತೀ ಮುಖ್ಯ. ವಿಗ್ರಹ ತಯಾರಿಸಲು ಫಲವತ್ತಾದ ಮಣ್ಣನ್ನು ವ್ಯರ್ಥ ಮಾಡಬಾರದು. ಕೋವಿಡ್ ನಿರೋಧಕ ಪ್ರತಿಮೆಗಳನ್ನು ತಯಾರಿಸಿ ಪರಿಸರಕ್ಕೆ ಕೊಡುಗೆ ನೀಡಬೇಕಾಗಿದೆ. ರೋಗನಿರೋಧಕ ಶಕ್ತಿಯುಳ್ಳ ಅರಿಶಿನ ಬಳಕೆಯಿಂದ ವಿಗ್ರಹವನ್ನು ತಯಾರಿಸಿ ಪೂಜಿಸಿ ವಿಸರ್ಜನೆ ಮಾಡುವುದರಿಂದ ಪರಿಸರಕ್ಕೆ ಕೊಡುಗೆ ನೀಡಬಹುದು ಎಂದು ಮಂಡಳಿ ಹೋದ ವರ್ಷ ಕರೆ ನೀಡಿತ್ತು. ಈ ಬಾರಿ ರೋಗನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತ ಗೋಧಿ/ಮೈದಾ/ಅಕ್ಕಿ/ ರಾಗಿಹಿಟ್ಟಿನಿಂದ ಗಣೇಶನ ವಿಗ್ರಹ ಮಾಡಿ ಪೂಜಿಸಬಹುದು. ಈ ವಿಗ್ರಹವನ್ನು ಜಲಸ್ತಂಭನ ಮಾಡಿದರೆ ಮಾಲಿನ್ಯ ತಪ್ಪಿಸಬಹುದು ಎಂದು ಹೇಳಿದೆ. ಮಂಡಳಿ ರಾಜ್ಯದಲ್ಲಿ 10 ಲಕ್ಷ ಅರಿಶಿನ ಗಣಪತಿ ಅಭಿಯಾನ ಹಮ್ಮಿಕೊಂಡಿದೆ. ಇಂತಹ ವಿಗ್ರಹ ಪೂಜಿಸಿ ಸೆಲ್ಫಿಯನ್ನು ಮಂಡಳಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ಬಂಪರ್ ಬಹುಮಾನ ಗೆಲ್ಲಲು ತಿಳಿಸಿದೆ.
Related Articles
Advertisement
ಕರಾವಳಿ ಭಾಗದಲ್ಲಿ ಗಣೇಶನ ವಿಗ್ರಹ ಮಾಡು ವುದು ಹೆಂಚಿನ ಕಾರ್ಖಾನೆಗಳ ಜೇಡಿ/ಆವೆ ಮಣ್ಣಿ ನಿಂದ. ಹತ್ತು ಅಡಿ ಆಳದಲ್ಲಿ ಸಿಗುವ ಇದನ್ನು ಸಂಸ್ಕರಿಸಿ ಅಂಟು ಮಣ್ಣು ಮಾಡಲಾಗುತ್ತದೆ ಎನ್ನುತ್ತಾರೆ ಉಡು ಪಿಯ ವಿಗ್ರಹ ಕಲಾವಿದ ರಮೇಶ್ ಕಿದಿಯೂರು.
6 ರೂ., 350 ರೂ. ಅಂತರ! :
ಒಂದು ಬ್ಲಾಕ್ ಆವೆಮಣ್ಣಿಗೆ 100 ರೂ. ಇದೆ. ಶ್ರೇಷ್ಠ ಗುಣಮಟ್ಟದ ನೂರು ಗ್ರಾಮ್ ಅರಿಶಿನದ ಬೆಲೆ 35 ರೂ. ಒಂದು ಕೆ.ಜಿ. ಅರಿಶಿನದ ಬೆಲೆ 350 ರೂ. ಒಂದು ಕೆ.ಜಿ. ಆವೆಮಣ್ಣಿನ ಬೆಲೆ 6 ರೂ.
ಜೇಡಿಮಣ್ಣು ಮೇಲ್ಭಾಗದ ಮಣ್ಣಲ್ಲವಾದ್ದರಿಂದ ಫಲಭರಿತ ಮಣ್ಣು ಪೋಲಾಗುತ್ತದೆ ಎನ್ನುವುದು ಅರ್ಥವಿಲ್ಲದ ವಾದ. ಆವೆಮಣ್ಣಿನ ಕೊರತೆ ಇದೆ ಎಂದಾದರೆ ಮಣ್ಣಿನ ಬೆಲೆ ದುಬಾರಿಯಾಗಬೇಕಿತ್ತು. ಘಟ್ಟದ ಮೇಲೆ ಕಪ್ಪು ಮಣ್ಣು, ಕರಾವಳಿಯಲ್ಲಿ ಕೆಂಪು ಮಣ್ಣು ಗುಣಮಟ್ಟದಲ್ಲಿ ಸಿಗುತ್ತದೆ. ಆಕಾರದಲ್ಲಿ ಹೇಳುವುದಾದರೆ ಮಣ್ಣಿನ ವಿಗ್ರಹವನ್ನು ಚಿಕ್ಕ ಆಕಾರದಲ್ಲಿ ಮಾಡಬಾರದೆಂದೇನಿಲ್ಲ.
ಹುಳುಕು ಹುಡುಕುವವರಿಗೆ ಆಹಾರ:
ಹಾಲು, ತುಪ್ಪ ಇತ್ಯಾದಿಗಳನ್ನು ಅಭಿಷೇಕ ಮಾಡಿ ವೇಸ್ಟ್ ಮಾಡುತ್ತಿದ್ದಾರೆಂದು (ಭಕ್ತರಿಗೆ ವಿತರಿಸಿಯೂ) ಟೀಕೆ ಕೇಳಿಬರುತ್ತಿರುವ ನಡುವೆ ಮುಂದೊಂದು ದಿನ ದುಬಾರಿಯಾದ ಅರಿಶಿನವನ್ನು ಗಣೇಶನ ವಿಗ್ರಹ ತಯಾರಿಸಲು ಮುಂದಾದ ಕಾರಣ ಸಮಾಜದಲ್ಲಿ ಅರಿಶಿನದ “ಹಾಹಾಕಾರ’ ಉಂಟಾಯಿತು ಎನ್ನಲೂ ಬಹುದು. ಇದನ್ನೇ ಭಾಷಣಕಾರರು ಬಳಸಿಕೊಳ್ಳಬಹುದು. ಇನ್ನು ಕೆಲವು ವರ್ಷಗಳ ಬಳಿಕ, “ಮಣ್ಣಿನ ಬೆಲೆ ಬಹಳ ಕಡಿಮೆ. ಮನುಷ್ಯರು ತಿನ್ನುವ ಆಹಾರವಸ್ತುಗಳಿಂದ ವಿಗ್ರಹ ತಯಾರಿಸಿ ವ್ಯರ್ಥ ಮಾಡುವ ಬದಲು ನೈಸರ್ಗಿಕವಾಗಿ ಪುಕ್ಕಟೆಯಾಗಿ ಸಿಗುವ ಮಣ್ಣಿನ ವಿಗ್ರಹವನ್ನೇ ತಯಾರಿಸಿ’ ಎಂದು ಮಂಡಳಿ ಮರು ಆದೇಶ ಹೊರಡಿಸಬಹುದು. ಆಯಾ ಕಾಲಘಟ್ಟದ ಅಧಿಕಾರಸ್ಥರು, ಜನರಿಗೆ ಇದೆಲ್ಲ ಹೊಸ ಸುದ್ದಿ. ಬುದ್ಧಿವಂತರೆನಿಸಿದ ಅಧಿಕಾರಿಗಳು ವರ್ಷವರ್ಷ ಏನಾದರೂ ಒಂದು ಮಾಡಲು ಸುತ್ತೋಲೆ ಹೊರಡಿಸುತ್ತಾರೆ. ಜನರ ತೆರಿಗೆ ಹಣ ಅಧಿಕಾರಸ್ಥರನ್ನು ಪೋಷಿಸುವುದಲ್ಲದೆ ಅರ್ಥವಿಲ್ಲದ ಯೋಜನೆಗಳ ಅನುಷ್ಠಾನಕ್ಕಾಗಿಯೂ ಪೋಲಾಗುತ್ತಿದೆ, ಜನರಿಂದಲೂ ಪೋಲು ಮಾಡಿಸುತ್ತಿದೆ ಎಂಬುದು ಸಾಬೀತಾಗುತ್ತದೆ. ಮೇಲಾಗಿ ಮೈದಾ ಆರೋಗ್ಯಕ್ಕೆ ಹಾನಿ ಎಂದು ಗೊತ್ತಿಲ್ಲವೆ? 10 ಲಕ್ಷ ಅರಿಶಿನದ ವಿಗ್ರಹಕ್ಕೆ ಎಷ್ಟು ಪೋಲು ಮಾಡಿದಂತಾಗುವುದಿಲ್ಲ? ಇವು ಜಲಮೂಲಕ್ಕೆ ಸೇರಿ ಪರಿಸರವನ್ನು ಶುದ್ಧಿ ಮಾಡುತ್ತವೆ ಎಂದು ವಾದಿಸಿದರೂ ಲಾಗಾಯ್ತಿನ ನಾಗರಪಂಚಮಿ ತಂತ್ರ ಇದುವೇ ಅಲ್ಲವೆ?
ನಿಮಗೆ ಕೈಗೆಟಕುವ ಉತ್ತಮ ಮಣ್ಣಿನಿಂದ ನೀವೇ ಸಾಮಾನ್ಯ ವಿಗ್ರಹಗಳನ್ನು ತಯಾರಿಸಿ ಪೂಜಿಸಿ ಸೆಲ್ಫಿ ಕಳುಹಿಸಿ ಎಂದು ಮಂಡಳಿ ಕರೆ ಕೊಟ್ಟಿದ್ದರೆ ಎಷ್ಟು ಅರ್ಥಪೂರ್ಣವಾಗಿರುತ್ತಿತ್ತು.
-ಮಟಪಾಡಿ ಕುಮಾರಸ್ವಾಮಿ