Advertisement

ರಾಜೀನಾಮೆ ನೀಡುತ್ತೇನೆಂದ ಮಗನನ್ನು ಸಮಾಧಾನಪಡಿಸಿದ ದೊಡ್ಡಗೌಡರು!

09:19 AM Jul 15, 2019 | Hari Prasad |

ಬೆಂಗಳೂರು: ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆಗಳು ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಒಂದೆಡೆ ಕಾಂಗ್ರೆಸ್ ನ ಅತೃಪ್ತ ಶಾಸಕರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ತನ್ನ ಶಾಸಕರ ಮನ ಒಲಿಸಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಮಗದೊಂದು ಕಡೆ ವಿಧಾನಸಭಾಧ್ಯಕ್ಷರು ಶಾಸಕರ ರಾಜೀನಾಮೆ ಅಂಗೀಕಾರವನ್ನು ತಡೆಹಿಡಿದು ಕೂತಿದ್ದಾರೆ. ಇವೆಲ್ಲದರ ನಡುವೆ ‘ಹಮಾರಾ ನಂಬರ್ ಕಬ್ ಆಯೇಗಾ…?’ ಎಂದು ಪ್ರತಿಪಕ್ಷ ಬಿ.ಜೆ.ಪಿ. ಕಾದುಕುಳಿತಿದೆ. ಮೂರು ಪಕ್ಷಗಳ ರಾಜಕೀಯ ಚಟುವಟಿಕೆ ರೆಸಾರ್ಟ್ ಗಳಿಗೆ ಶಿಫ್ಟಾಗಿದೆ.

Advertisement

ಈತನ್ಮಧ್ಯೆ ಈ ಎಲ್ಲಾ ಗೊಂದಲಗಳು ಪ್ರಾರಂಭವಾದಾಗಿನಿಂದಲೂ ತನಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಕುಳಿತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮಿತ್ರಪಕ್ಷ ಕಾಂಗ್ರೆಸ್ ಮುಖಂಡರೇ ಈ ಬಿಕ್ಕಟ್ಟನ್ನು ಬಗೆಹರಿಸಲಿ ಎಂದು ಕುಳಿತಿದ್ದಾರೆ.

ಈ ನಡುವೆ ಆದಿತ್ಯವಾರದಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದೆ. ತಾಜ್ ವಿವಾಂತದಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್ ಶಾಸಕರನ್ನು ಮಾಜೀಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭೇಟಿಯಾಗಿ ಮಾತುಕತೆ ನಡೆಸಿದರು. ಇನ್ನು ನಿನ್ನೆ ತಾನೇ ಕಾಂಗ್ರೆಸ್ ಪಾಳಯಕ್ಕೆ ಮರಳುವ ಸೂಚನೆ ನೀಡಿದ್ದ ಅತೃಪ್ತ ಶಾಸಕ ಎಂ.ಟಿ.ಬಿ. ನಾಗರಾಜ್ ಅವರು ಇವತ್ತು ದಿಢೀರ್ ಆಗಿ ಮುಂಬಯಿಗೆ ತೆರಳುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.


ಇವೆಲ್ಲಕ್ಕಿಂತ ಪ್ರಮುಖ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ನಾಲ್ಕು ಗಂಟೆಗಳಿಗೂ ಅಧಿಕ ಸಮಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪುತ್ರನಿಗೆ ಸಮಾಧಾನ ಹೇಳಿದ ದೊಡ್ಡ ಗೌಡರು, ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ತಾಳ್ಮೆಯಿಂದ ಇರುವಂತೆ ಕಿವಿಮಾತು ಹೇಳಿದರು ಎನ್ನಲಾಗಿದೆ. ಮಾತ್ರವಲ್ಲದೇ ಸ್ಪೀಕರ್ ಅವರು ವಿಶ್ವಾಸಮತಕ್ಕೆ ದಿನನಿಗದಿ ಮಾಡಿದ ಮೇಲೆ ಮುಂದಿನ ಕಾರ್ಯತಂತ್ರಗಳನ್ನು ರೂಪಿಸುವಂತೆಯೂ ದೊಡ್ಡಗೌಡರು ತಮ್ಮ ಪುತ್ರನಿಗೆ ಸಲಹೆ ನೀಡಿದ್ದಾರಂತೆ.

ಒಂದು ಹಂತದಲ್ಲಂತೂ ‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಡುತ್ತೇನೆ’ ಎಂಬ ಮಾತನ್ನೂ ಸಹ ಕುಮಾರಸ್ವಾಮಿ ಅವರು ತಮ್ಮ ತಂದೆಯವರ ಎದುರು ಆಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕರ ವರ್ತನೆ ಹಾಗೂ ಎಂಟಿಬಿ ನಾಗರಾಜ್ ರಾಜೀನಾಮೆ ಪ್ರಹಸನ ಕುಮಾರಸ್ವಾಮಿ ಅವರನ್ನು ಈ ನಿರ್ಧಾರಕ್ಕೆ ಮನಸ್ಸು ಮಾಡಲು ಕಾರಣವೆನ್ನುತ್ತದೆ ಅವರ ಆಪ್ತವಲಯ.

ಆದರೆ ಬುಧವಾರದವರೆಗೆ ಕಾದು ನೋಡಿ ಆ ಬಳಿಕ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ದೊಡ್ಡಗೌಡರು ನೀಡಿದ ಸಲಹೆ ಕುಮಾರಸ್ವಾಮಿ ಅವರು ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಕಾರಣವಾಗಿದೆ.

Advertisement

ಏನೇ ಆದರೂ ಮುಂದಿನ ಎರಡು ದಿನಗಳಲ್ಲಿ ರಾಜ್ಯ ರಾಜಕಾರಣ ಇನ್ನಷ್ಟು ರಂಗೇರುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next