Advertisement

18ಕ್ಕೆ ತಳವಾರರ ಪ್ರತಿಭಟನೆ

12:29 PM Apr 15, 2022 | Shwetha M |

ಸಿಂದಗಿ: ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿ ಖಂಡಿಸಿ ಏ. 18ರಂದು ಪಟ್ಟಣದಲ್ಲಿ ಅಹಿಂದ್‌ ಒಕ್ಕೂಟದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ತಳವಾರ, ಪರಿವಾರ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾಜಿ ಮೆಟಗಾರ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಂದಗಿ ವಿಧಾನಸಭೆ ಉಪಚುನಾವಣೆಯಲ್ಲಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಾಗಿ ಮುಖ್ಯಮಂತ್ರಿ, ಸಮಾಜಕಲ್ಯಾಣ ಇಲಾಖೆ ಸಚಿವರು, ಶಾಸಕರು ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಸ್ವತಃ ಮುಖ್ಯಮಂತ್ರಿ ಅವರೇ ತಿಳಿಸಿದ್ದರು. ಆದರೆ ಆರು ತಿಂಗಳಾದರೂ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಮತ ಪಡೆಯಲು ಸುಳ್ಳು ಭರವಸೆ ನೀಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಿಂದ ತಳವಾರ ಸಮುದಾಯವನ್ನು ತೆಗೆದು ಹಾಕಿ, ಕೇಂದ್ರ ಸರ್ಕಾರದ ಗೆಜೆಟ್‌ ಹಾಗೂ ರಾಜ್ಯ ಸರ್ಕಾರದ ಅಧಿ ಸೂಚನೆಯ ಪ್ರಕಾರ ಅಟಲ್‌ಜೀ ಜನಸ್ನೇಹಿ ತಂತ್ರಾಂಶದಲ್ಲಿ ಪರಿಶಿಷ್ಟ ಪಂಗಡ ಎಂದು ಸೇರಿಸಿದರೆ ಜಾತಿ ಪ್ರಮಾಣ ಸಿಗಲಿದೆ. ಈಗಾಗಲೇ ಕೋರ್ಟ್‌ ಆದೇಶದ ಮೇರೆಗೆ ತಳವಾರ ಸಮುದಾಯದ ಕೆಲವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ದೊರಕಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇದು ತಮಗೆ ನೀಡುವ ಕೊನೆಯ ಸಮಯಾವಕಾಶ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ, ಟಿಪ್ಪು ಕ್ರಾಂತಿ ಸೇನೆ ಅಧ್ಯಕ್ಷ ದಸ್ತಗೀರ ಮುಲ್ಲಾ, ಕುರುಬರ ಸಂಘದ ತಾಲೂಕಾ ಅಧ್ಯಕ್ಷ ನಿಂಗಣ್ಣ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸರಕಾರ ವಿಳಂಬನೀತಿ ಅನುಸರಿಸುತ್ತಿರುವುದನ್ನು ಖಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next