Advertisement

ಅಳಿವಿನಂಚಿನಲ್ಲಿ ರಾಜ್ಯ ಪೊಲೀಸ್‌ ಕಬಡ್ಡಿ ತಂಡ

06:15 AM Aug 07, 2018 | Team Udayavani |

ಬೆಂಗಳೂರು: ಅದೊಂದು ಕಾಲವಿತ್ತು. ರಾಜ್ಯ ಪೊಲೀಸ್‌ ಕಬಡ್ಡಿ ತಂಡಗಳ ಹೆಸರು ಕೇಳಿದರೆ ಅದೆಂತಹ ತಂಡಗಳಾದರೂ ಒಂದು ಕ್ಷಣ ಭಯ ಬೀಳುತ್ತಿದ್ದವು. ತಂಡಗಳಲ್ಲಿ ಅಂತಹ ದೈತ್ಯ ಹಾಗೂ ನಿಪುಣ ಆಟಗಾರರಿರುತ್ತಿದ್ದರು. ಕೇವಲ ಒಂದು ತಂಡವಾಗಿರದೆ ಇಲಾಖೆಯ ಗೌರವದ ಪ್ರತೀಕವಾಗಿತ್ತು ಪೊಲೀಸ್‌ ತಂಡ. ರಾಜ್ಯ,ರಾಷ್ಟ್ರ  ಸೇರಿದಂತೆ ಸುಮಾರು 134 ಹೆಚ್ಚು ಕೂಟಗಳಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿರುವ ಪೊಲೀಸ್‌ ತಂಡವೀಗ ಅಳಿವಿನತ್ತ ಸಾಗಿದೆ.

Advertisement

ರಾಜ್ಯ ಪೊಲೀಸ್‌ ತಂಡದಲ್ಲಿನ ಆಟಗಾರರ ವಯಸ್ಸೀಗ 45 ಮೀರಿದೆ! ಈ ತಂಡಕ್ಕೆ ಹೊಸ ತಲೆಮಾರು ಪ್ರವೇಶಿಸದಿರುವುದರಿಂದ, ಇರುವವರೇ ಆಡಬೇಕಾದ ದುಸ್ಥಿತಿ ಎದುರಾಗಿದೆ. 45 ಮೀರಿದ ಆಟಗಾರರಿಗೆ ದೈಹಿಕ ಸಾಮರ್ಥ್ಯವಾದರೂ ಎಲ್ಲಿರಲು ಸಾಧ್ಯ? ಯಾವುದೇ ವೃತ್ತಿಪರ ಕ್ರೀಡೆಯಲ್ಲಿ 40 ನಿವೃತ್ತಿಯ ವರ್ಷ. ಪೊಲೀಸ್‌ ತಂಡದ ಆಟಗಾರರೀಗ ದೈಹಿಕ ಅಸಾಮರ್ಥ್ಯ ಮತ್ತು ಕಬಡ್ಡಿ ಆಡಲೇಬೇಕಾದ ಅನಿವಾರ್ಯತೆ ಇವುಗಳ ನಡುವೆ ತೊಳಲಾಡುತ್ತಿದ್ದಾರೆ.

ಪ್ರತಿಭಾವಂತ ಕಬಡ್ಡಿ ಆಟಗಾರರಿಗೆ ನೌಕರಿ ನೀಡಿ ಜೀವನ ಪೊರೆದಿದ್ದ ತಂಡವೀಗ ಸಂಪೂರ್ಣ ನಶಿಸುವ ಆತಂಕ ಹೆಚ್ಚಿದೆ. 2005ರಿಂದ ಹೊಸ ಆಟಗಾರರನ್ನು ನೇಮಕಾತಿ ಮಾಡಿಕೊಳ್ಳುವ ಕ್ರಮ ನಿಂತುಹೋಗಿದೆ. ಆ ವರ್ಷದಿಂದ ವೃಂದ ಮತ್ತು ನೇಮಕಾತಿ ನಿಯಮ ಜಾರಿಯಾಗಿದ್ದೇ ಇದಕ್ಕೆ ಕಾರಣ ಎನ್ನುತ್ತಾರೆ ಪೊಲೀಸ್‌ ತಂಡದ ಹಿರಿಯ ಕೋಚ್‌.

ಪೊಲೀಸ್‌ ತಂಡ ಆಗ ಹೇಗಿತ್ತು?
“1977ರಲ್ಲಿ ಬಿಸಿಪಿ (ಬೆಂಗಳೂರು ನಗರ ಪೊಲೀಸ್‌) ತಂಡವನ್ನು ಅಂದಿನ ಕ್ರೀಡಾ ಇಲಾಖೆ ನಿರ್ದೇಶಕ ಎ.ಜೆ.ಆನಂದನ್‌ ಅಧಿಕಾರದಲ್ಲಿದ್ದಾಗ ಕಟ್ಟಲಾಯಿತು. ಉತ್ತಮ ಕಬಡ್ಡಿ ಆಟಗಾರನಿಗೆ ನೇರವಾಗಿ ಪೊಲೀಸ್‌ ಇಲಾಖೆಯಲ್ಲಿ ನೌಕರಿ ನೀಡುವ ವ್ಯವಸ್ಥೆ ಜಾರಿಗೆ ತರಲಾಯಿತು. ಅದರಂತೆ ಬೆಂಗಳೂರು ನಗರ ಪೊಲೀಸ್‌ ತಂಡವನ್ನು ಮೊದಲು ಕಟ್ಟಲಾಯಿತು. ಇದು ಯಶಸ್ವಿ ತಂಡವಾಗಿ ರೂಪುಗೊಂಡ ಬೆನ್ನಲ್ಲೇ 10 ವರುಷದ ಬಳಿಕ (1987ರಲ್ಲಿ) ರಾಜ್ಯ ಪೊಲೀಸ್‌ ತಂಡ (ಕೆಎಸ್‌ಪಿ)ವನ್ನೂ ಕಟ್ಟಲಾಯಿತು. ಎರಡೂ ತಂಡಗಳು ಕೂಡ ಬಲಿಷ್ಠವಾಗಿದ್ದವು. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಅನೇಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು. ಐಟಿಐ ಆಲ್‌ ಇಂಡಿಯಾ ವಿನ್ನರ್,  ಗುಬ್ಬಿ ವೀರಣ್ಣ ಕಬಡ್ಡಿ ವಿನ್ನರ್ , ಬಿ.ಎಲ್‌. ಆಲ್‌ ಇಂಡಿಯಾ ರನ್ನರ್‌ಅಪ್‌ ಸೇರಿದಂತೆ ವಿವಿಧ ರಾಜ್ಯ, ರಾಷ್ಟ್ರ ಮಟ್ಟದ ಕೂಟಗಳಲ್ಲಿ ಪೊಲೀಸ್‌ ತಂಡಗಳು ಕಪ್‌ ಗೆದ್ದವು, ಮನೆ-ಮನೆ ಮಾತಾದವು. ತಮ್ಮ ಇಲಾಖೆಗೆ ಹೆಸರನ್ನೂ ತಂದುಕೊಟ್ಟವು’

ಪೊಲೀಸ್‌ ತಂಡ ಈಗ ಹೇಗಿದೆ?
“2000ನೇ ಇಸವಿ ಬಳಿಕ ಪೊಲೀಸ್‌ ತಂಡಗಳ ಬಲ ಕುಸಿಯಲಾರಂಭಿಸಿತು. ಆಟಗಾರರು ಕರ್ತವ್ಯದ ಒತ್ತಡದ ಜತೆಗೆ ಕಬಡ್ಡಿಯನ್ನೂ ನಡೆಸಿಕೊಂಡು ಹೋಗುವ ಅನಿವಾರ್ಯತೆಗೆ ಸಿಲುಕಿದರು. ಹಗಲಿಡೀ ಡ್ನೂಟಿ, ಸಂಜೆಯಾಗುತ್ತಲೆ ಅಭ್ಯಾಸ. ಮತ್ತೆ ಕೆಲವು ಸಲ ಅಭ್ಯಾಸಕ್ಕೂ ಸಮಯ ಸಿಗುತ್ತಿರಲಿಲ್ಲ. ಇದರಿಂದ ಆಟಗಾರರು ಕಂಗಾಲಾದರು. ಜತೆಗೆ ಕಬಡ್ಡಿ ತಂಡಕ್ಕೆ ಆಟಗಾರರ ಹೊಸ ಆಯ್ಕೆ ಪ್ರಕ್ರಿಯೆಯನ್ನೂ ಗೃಹ ಇಲಾಖೆ ಮಾಡಿಕೊಳ್ಳಲಿಲ್ಲ. ಪೊಲೀಸ್‌ ತಂಡ ತನ್ನ ಬಲ ಕಳೆದುಕೊಂಡು ಹೋಯಿತು. ಅನೇಕ ಕೂಟಗಳಲ್ಲಿ ಸೋಲು ಅನುಭವಿಸಿತು. ಇದೆಲ್ಲದರ ಬಳಿಕ ಅಂದರೆ ಸುಮಾರು 5 ವರ್ಷದ ಬಳಿಕ 2005ರಲ್ಲಿ ಇಲಾಖೆ ಕಬಡ್ಡಿ ಆಟಗಾರರನ್ನು ನೇಮಕ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿತು. ಇದರಿಂದಾಗಿ ಬಳಿಕ ಹೊಸ ಪ್ರತಿಭೆಗಳಿಗೆ ವೇದಿಕೆ ಸಿಗಲಿಲ್ಲ. ಈಗ ಹಳೆಯ ಆಟಗಾರರೇ ತಂಡದಲ್ಲಿದ್ದಾರೆ’.

Advertisement

ಸಿಎಂ ಡ್ನೂಟಿ ಜತೆಗೆ ಕಬಡ್ಡಿ ಟೂರ್ನಿ
ಪ್ರಸ್ತುತ ಕೆಲವು ವರುಷಗಳಿಂದ ಮುಖ್ಯಮಂತ್ರಿಗಳ ಬೆಂಗಾವಲು ಪಡೆಯಲ್ಲಿ ಕಬಡ್ಡಿ ಪಟುಗಳು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಬೆಂಗಳೂರು ನಗರ ಪೊಲೀಸ್‌ ತಂಡ ಮತ್ತು ಕರ್ನಾಟಕ ಪೊಲೀಸ್‌ ತಂಡದ 10ಕ್ಕೂ ಹೆಚ್ಚು ಆಟಗಾರರು ಮುಖ್ಯಮಂತ್ರಿಗಳ ಬೆಂಗಾವಲು ಪಡೆಯಲ್ಲಿದ್ದಾರೆ. ಕಬಡ್ಡಿಯಲ್ಲಿ ಪೊಲೀಸ್‌ ತಂಡಗಳು ಪಾಲ್ಗೊಳ್ಳುವುದು ಕಡಿಮೆ ಆಗಿದೆ. ಹೀಗಾಗಿ ಇವರು ವರುಷಕ್ಕೊಂದು ಕೂಟ ಆಡಿದರೂ ಹೆಚ್ಚೆ. ಉಳಿದ ಸಮಯಗಳಲ್ಲಿ ಆಟಗಾರರು ಮುಖ್ಯಮಂತ್ರಿಗಳ ಬೆಂಗಾವಲು ಪಡೆಯಲ್ಲೇ ಕೆಲಸ ನಿರ್ವಹಿಸಬೇಕಾಗಿದೆ.

40 ವರುಷ ಮೀರಿದವರಿಂದ ಹೇಗೆ ಕಬಡ್ಡಿ ಆಡಿಸಲಿ?
ಕಬಡ್ಡಿ ತಂಡ ಅಳಿವಿನಂಚಿನಲ್ಲಿರುವ ಕುರಿತು ಎಡಿಜಿಪಿ ಭಾಸ್ಕರ್‌ ರಾವ್‌ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. “ಆಗಿನ ಮಟ್ಟಕ್ಕೆ ಈಗಿರುವ ಪೊಲೀಸ್‌ ತಂಡಗಳ ಕಬಡ್ಡಿ ಪ್ರದರ್ಶನವಿಲ್ಲ. 40 ವರುಷ ಮೀರಿದವರಿಂದ ಹೇಗೆ ಕಬಡ್ಡಿ ಆಡಿಸಲಿ? ಗಟ್ಟಿಮುಟ್ಟಾದ ಕ್ರೀಡಾಪಟುಗಳ ಕೊರತೆ ಇಲಾಖೆಯಲ್ಲಿದೆ. ಹಿಂದಿನ ಮಾದರಿಯಲ್ಲೇ ಮತ್ತೆ ಕಬಡ್ಡಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ’ ಎಂದು ಅವರು ಹೇಳುತ್ತಾರೆ.

“ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ವೃಂದ ನೇಮಕಾತಿಯಲ್ಲಿ ಬದಲಾವಣೆ ಬಂದ ಬಳಿಕ 2005ರಿಂದ ಕಬಡ್ಡಿ ಆಟಗಾರರನ್ನು ಇಲಾಖೆಗೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕಬಡ್ಡಿ ತಂಡಕ್ಕೆ ನೇರ ನೇಮಕಾತಿಯನ್ನು ಮಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅದಕ್ಕಿನ್ನೂ ಸದನದಲ್ಲಿ ಅನುಮೋದನೆ ಸಿಗಬೇಕಿದೆ. ಹರ್ಯಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ ಇಲಾಖೆಯ ಕ್ರೀಡಾಪಟುಗಳಿಗೆ ಬಡ್ತಿ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲ.

ವೃಂದ ನೇಮಕಾತಿಯಲ್ಲಿ ತಿದ್ದುಪಡಿಯಾದರೆ ಕಿರಿಯ ವಯಸ್ಸಿನ ಆಟಗಾರರನ್ನು ಡಿಎಸ್‌ಪಿ ಮಟ್ಟದವರೆಗೆ ಕ್ರೀಡಾಕೋಟಾದಡಿ ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ರಾಜ್ಯದಲ್ಲಿ ಒಟ್ಟಾರೆ ಜನಸಂಖ್ಯೆ 6.50 ಕೋಟಿ. ಕರ್ತವ್ಯ ನಿರತ ಪೊಲೀಸರ ಸಂಖ್ಯೆ 1 ಲಕ್ಷ 7 ಸಾವಿರ. ಇವರಲ್ಲಿ 77 ಸಾವಿರ ಪೊಲೀಸರು ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ಕ್ರೀಡಾ ಕೋಟಾದಡಿಯಲ್ಲಿ ಇರುವವರು ಕೂಡ ಕರ್ತವ್ಯ ನಿರ್ವಹಿಸಬೇಕಾಗಿರುವುದು ಅನಿವಾರ್ಯವಿದೆ ಎಂದು ತಿಳಿಸಿದರು.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next