ಬೆಂಗಳೂರು: ಗೋವಾ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಮಹಾದಾಯಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ನೀಡಿದ್ದ ಅನುಮತಿಯನ್ನು ತಡೆ ಹಿಡಿದಿರುವುದಕ್ಕೆ ರಾಜ್ಯ ಸರಕಾರ ವಿರೋಧ ವ್ಯಕ್ತ ಪಡಿಸಿದೆ.
ಕೇಂದ್ರ ಪರಿಸರ ಇಲಾಖೆಯ ತೀರ್ಮಾನವನ್ನು ವಾಪಸ್ ಪಡೆಯು ವಂತೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾಬ್ಡೇಕರ್ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅಲ್ಲದೆ ಮಹಾದಾಯಿ ನ್ಯಾಯ ಮಂಡಳಿ ಆದೇಶ ದಂತೆ ಕೇಂದ್ರದಿಂದ ಶೀಘ್ರ ಅಧಿಸೂಚನೆ ಹೊರಡಿಸಿ, ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿ ಕೊಂಡಿದ್ದಾರೆ.
ಪರಿಸರ ಇಲಾಖೆ ಯೋಜನೆ ಜಾರಿಗೆ ನೀಡಿರುವ ಅನುಮತಿಯನ್ನು ತಡೆ ಹಿಡಿದಿರುವುದಕ್ಕೆ ವಿಪಕ್ಷಗಳ ನಾಯಕರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯ ಸರಕಾರ ತತ್‌ಕ್ಷಣವೇ ಸರ್ವ ಪಕ್ಷಗಳ ಸಭೆ ಕರೆದು, ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಡಿ. 23: ಹುಬ್ಬಳ್ಳಿಯಲ್ಲಿ ಸಭೆ
ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಖಂಡಿಸಿ ಪ್ರತಿಭಟಿಸಲು ಡಿ. 23ರಂದು ಹುಬ್ಬಳ್ಳಿಯಲ್ಲಿ ಹೋರಾಟಗಾರರ ಸಭೆ ಕರೆಯಲಾಗಿದೆ ಎಂದು ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದ್ದಾರೆ.
ಮಹಾದಾಯಿ ವಿಷಯದಲ್ಲಿ ಕೇಂದ್ರ ಸರಕಾರ ಪ್ರತಿ ಬಾರಿಯೂ ಗೋವಾ ರಾಜ್ಯದ ಒತ್ತಡಕ್ಕೆ ಮಣಿದು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರ ಸರಕಾರದ ಮೇಲೆ ಯಾವುದೇ ಪ್ರಭಾವ ಬೀರದಿರುವುದರಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡಲು ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಬೇಕು ಎಂದರು.