ವಿಶಾಖಪಟ್ಟಣಂ: ಪೊಲೀಸರು ನಮ್ಮ ನಾಯಕರನ್ನು ಬಂಧಿಸಿದ್ದಾರೆ ಪಕ್ಷದ ಬೆಳವಣಿಗೆಯನ್ನು ತಡೆಯಲು ಬಯಸಿ ಈ ಕೆಲಸ ಮಾಡಲಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಆಕ್ರೋಶ ಹೊರ ಹಾಕಿದ್ದಾರೆ.
ವಿಶಾಖಪಟ್ಟಣಂ ವಿಮಾನ ನಿಲ್ದಾಣದ ಹೊರಗೆ ವೈಎಸ್‌ಆರ್‌ಸಿ ನಾಯಕಿ, ಸಚಿವೆ ಆರ್.ಕೆ. ರೋಜಾ ಅವರ ಕಾರಿನ ಮೇಲೆ ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ , ಜನರನ್ನು ತಲುಪುವ ನಮ್ಮ ಕಾರ್ಯಕ್ರಮಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಗದ್ದಲವನ್ನು ಸೃಷ್ಟಿಸಿದ್ದಾರೆ. ರಾಜ್ಯದ ರಾಜಕೀಯ ನಾಯಕತ್ವವು ಪ್ರತಿಯೊಂದು ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಪವನ್ ಕಲ್ಯಾಣ್ ಹೇಳಿಕೆ ನೀಡಿದ್ದಾರೆ.
ಸಿಎಂ ನೇತೃತ್ವದಲ್ಲಿ ನಮ್ಮ ಪ್ರೀತಿಯ ಆಂಧ್ರ ಪೊಲೀಸರು ಜನಸೇನಾ ಕಾರ್ಯಕ್ರಮಗಳು, ಯಾವುದೇ ರ್‍ಯಾಲಿಗಳು, ಯಾವುದೇ ಸಭೆಗಳನ್ನು ನಡೆಸದಂತೆ ನನ್ನನ್ನು ನಿರ್ಬಂಧಿಸಿದ್ದಾರೆ. ನನ್ನ ಕೋಣೆಯ ಕಿಟಕಿಯಿಂದ ಈ ಆಯ್ಕೆಯನ್ನು ಮಾತ್ರ ನನಗೆ ಬಿಟ್ಟುಕೊಟ್ಟಿದ್ದಾರೆ ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿರುವ ರೋಜಾ ಅವರು, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಸ್ತಾಪಿಸಿದ ಯೋಜನೆಯನ್ನು ಬೆಂಬಲಿಸುವ ರ್‍ಯಾಲಿಯಲ್ಲಿ ಭಾಗವಹಿಸಲು ಬರುತ್ತಿದ್ದ ವೇಳೆ ಪವನ್ ಕಲ್ಯಾಣ್ ಬೆಂಬಲಿಗರು ಕಾರಿನ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ರೋಜಾ ಅವರ ಚಾಲಕನ ತಲೆಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.