Advertisement

ಜೂನ್ 4 ರಂದು ಶಿರಸಿಯಲ್ಲಿ ಅರಣ್ಯವಾಸಿಗಳ ರಾಜ್ಯ ಮಟ್ಟದ ಚಿಂತನ ಕೂಟ

02:32 PM Jun 03, 2022 | Team Udayavani |

ಶಿರಸಿ: ಅನಧಿಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವಿಕೆಯ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ನಿರ್ಣಾಯಕ ತೀರ್ಮಾನ ವಿಚಾರಣೆ ಜುಲೈನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೂನ್ 4 ರಂದು ಶಿರಸಿಯಲ್ಲಿ ಜರಗುವ ಅರಣ್ಯ ಭೂಮಿ ಹಕ್ಕು ಸುಪ್ರೀಂ ಕೋರ್ಟ್ ವಿಚಾರಣೆ ರಾಜ್ಯ ಮಟ್ಟದ ಚಿಂತನ ಕೂಟದಲ್ಲಿ ಕಾನೂನು ಹೋರಾಟದ ನಿರ್ಣಾಯಕ ತೀರ್ಮಾನದ ನಿರೀಕ್ಷೆಯಲ್ಲಿ ಅರಣ್ಯವಾಸಿಗಳು ಇದ್ದಾರೆ.ದೇಶದ ಏಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ಅನರ್ಹ ಅರಣ್ಯವಾಸಿಗಳನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿ, ಅತಿಕ್ರಮಣ ಪ್ರದೇಶವನ್ನ ಅರಣ್ಯೀಕೃತ ಮಾಡಬೇಕೆಂದು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಜುಲೈನಲ್ಲಿ ಅಂತಿಮ ತೀರ್ಮಾನ ಹೊರಹೊಮ್ಮಲಿದೆ.

Advertisement

ಈ ಹಿಂದೆ ಹರಿಯಾಣ ರಾಜ್ಯದ ಹತ್ತು ಸಾವಿರ ಅರಣ್ಯವಾಸಿಗಳನ್ನು ಅನಧೀಕೃತ ಒತ್ತುದಾರರೆಂದು ಪರಿಗಣಿಸಿ ಆರು ವಾರದಲ್ಲಿ ಸಂಪೂರ್ಣ ಒಕ್ಕಲೆಬ್ಬಿಸಿದ್ದು, ಅರಣ್ಯ ಭೂಮಿ ಹಕ್ಕು ನಿರೀಕ್ಷೆಯಲ್ಲಿರುವ ಅರಣ್ಯವಾಸಿಗಳು ಸುಪ್ರೀಂ ಕೋರ್ಟಿನ ಮುಂದಿನ ತೀರ್ಮಾನದ ಭೀತಿ ಮತ್ತು ಆತಂಕದಲ್ಲಿ ಇದ್ದಾರೆ. ಸುಪ್ರೀಂ ಕೋರ್ಟನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಅರಣ್ಯವಾಸಿಗಳ ವಿರೋಧಿ ನೀತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಪರ ನಿರಂತರ 31 ವರ್ಷ ಹೋರಾಟ ಮಾಡಿರುವ ಹೋರಾಟಗಾರರ ವೇದಿಕೆಯು ಹಿರಿಯ ಕಾನೂನು ತಜ್ಞ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಚಿಂತನ ಕೂಟ ಏರ್ಪಡಿಸಿರುವುದು ವಿಶೇಷವಾಗಿದೆ.

ಕೇಂದ್ರ ಸರಕಾರ ಅರ್ಜಿಗಳನ್ನ ಪುನರ್ಪರಿಶೀಲಿಸಲಾಗುವುದೆಂಬ ಸುಫ್ರೀಂ ಕೋರ್ಟಿಗೆ ಪ್ರಮಾಣ ಪತ್ರದಲ್ಲಿ ವಾಗ್ದಾನ ನೀಡಿದ್ದು ಇರುತ್ತದೆ. ಅದರಂತೆ, ರಾಜ್ಯ ಸರಕಾರ ಜುಲೈ8,2019 ರಂದು ಸುಫ್ರೀಂ ಕೋರ್ಟ್ ನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳನ್ನ 18 ತಿಂಗಳುಗಳಲ್ಲಿ ವಿಲೇಮಾಡುವುದಾಗಿ ಪ್ರಮಾಣಿಕರಿಸಿತ್ತು. ಆದರೆ, ಈ ಕಾಲಮಾನದಂಡ ಕಳೆದ ವರ್ಷ ಜನವರಿಯಲ್ಲಿ ಅಂತ್ಯವಾಗಿದ್ದರೂ ಇಂದಿನವರೆಗೂ ಅರ್ಜಿಗಳ ವಿಲೇವಾರಿ ಶೇ 5 ರಷ್ಟು ಮಾತ್ರವಾಗಿದೆ. ರಾಜ್ಯ ಸರಕಾರ ಸುಫ್ರೀಂ ಕೋರ್ಟಿನಿಂದ ನ್ಯಾಯಾಂಗ ನಿಂದನೆಗೆ ಒಳಪಡುವ ಪ್ರಸಂಗ ಬಂದೊದಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ಬುಡಕಟ್ಟು ಜನಾಂಗ 68,432 ಅರ್ಜಿಗಳನ್ನು ಸಲ್ಲಿಸಿದ್ದರೇ, 2,27,014 ಅರ್ಜಿಗಳನ್ನ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು ಇರುತ್ತದೆ. ಅಲ್ಲದೇ, ಬುಡಕಟ್ಟು ಜನಾಂಗಗಳ 35,521 ಹಾಗೂ 1,41,019 ಪಾರಂಪರಿಕ ಅರ್ಜಿಗಳು ತಿರಸ್ಕರಿಸಲಾಗಿದ್ದು ಇರುತ್ತದೆ. ತಿರಸ್ಕೃತ ಅರ್ಜಿದಾರರನ್ನ ನ್ಯಾಯಾಲಯದ ಮುಂದಿನ ವಿಚಾರಣೆ ಒಳಗೆ ಒಕ್ಕಲೆಬ್ಬಿಸುವ ಬಗ್ಗೆ ಗಂಭೀರವಾಗಿ ಕ್ರಮ ಜರುಗಿಸಲಾಗುವುದೆಂದು ರಾಜ್ಯ ಸರಕಾರ ಇಗಾಗಲೇ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಪ್ರಸ್ತಾಪವಾಗಿರುವುದು ವಿಷಾದಕರ ಎಂದು ರವೀಂದ್ರ ನಾಯ್ಕ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next