ದರ್ಬೆ : ಜ್ಞಾನ ಗಳಿಕೆಯೊಂದೇ ಮಾನವನನ್ನು ಉತ್ಕೃಷ್ಟ ಸ್ಥಾನಕ್ಕೆ ಕೊಂಡೊಯ್ಯಬಲ್ಲ ವಿಶಿಷ್ಟ ಪ್ರಕ್ರಿಯೆ. ಜ್ಞಾನ ಸಂಪತ್ತು ಮಾನವನನ್ನು ಆರ್ಥಿಕವಾಗಿ ಸುಭದ್ರಗೊಳಿಸಬಲ್ಲ ಶಕ್ತಿ, ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನದ ಪ್ರಗತಿಯಿಂದಾಗಿ ಮಾನವನು ಕ್ಷಿಪ್ರಗತಿಯಲ್ಲಿ ಜ್ಞಾನ ಸಂಪತ್ತನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ| ಚಿದಾನಂದ ಗೌಡ ಕೆ. ಅವರು ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಇ- ಸಂಪನ್ಮೂಲಗಳು, ಭೌದ್ಧಿಕ ಆಸ್ತಿ ಹಕ್ಕುಗಳು, ಕೃತಿ ಚೌರ್ಯ-ವಿಚಾರಗಳು ಮತ್ತು ಸವಾಲುಗಳು ಎನ್ನುವ ವಿಷಯದ ಕುರಿತು ಆಯೋಜಿಸಲಾದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಸೆ. 29ರಂದು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಉದ್ಘಾಟಿಸಿ, ಅವರು ಶಿಖರೋಪನ್ಯಾಸ ನೀಡಿದರು.
ಬೌದ್ಧಿಕ ಆಸ್ತಿಯು ಮಾನವನ ಸೃಜನಶೀಲತೆಯಿಂದ ಉತ್ಪನ್ನವಾದ ಒಂದು ಅಮೂರ್ತವಾದ ಆಸ್ತಿಯಾಗಿದೆ. ಇವುಗಳ ರಕ್ಷಣೆಯ ಉದ್ದೇಶದಿಂದ ಸರಕಾರವು ಕಾನೂನಿನಲ್ಲಿ ವಿಶೇಷ ರಕ್ಷಣೆಯನ್ನು ಒದಗಿಸಿದೆ ಎಂದರು.
ಗೌರವ ಅತಿಥಿಯಾಗಿದ್ದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಕಲಿಕೆಯು ಮಾನವನ ಒಂದು ನಿರಂತರ ಪ್ರಕ್ರಿಯೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯು ಮಾನವನ ಆಳವಾದ ಅಧ್ಯಯನಕ್ಕೆ ಸಹಕಾರಿಯಾಗಿದೆ ಎಂದರು.
ಈ ವಿಚಾರ ಸಂಕಿರಣದಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಇದರ ಜೆಆರ್‌ಡಿ ಟಾಟಾ ಸ್ಮಾರಕ ಗ್ರಂಥಾಲಯದ ಮುಖ್ಯಸ್ಥ ಡಾ| ಆನಂದ ಭೈರಪ್ಪ ಅವರು ಎಲೆಕ್ಟ್ರಾನಿಕ್ ಯುಗದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಅನ್ವಯಿಸುವಿಕೆ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ| ಕೆ. ಪ್ರಕಾಶ್ ಅವರು ಇ-ಸಂಪನ್ಮೂಲಗಳು, ಕೃತಿಸ್ವಾಮ್ಯ ಮತ್ತು ಕರ್ತೃತ್ವ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಮೈಸೂರಿನ ಎಸ್ ಡಿಎಂಐಡಿ ಸಂಸ್ಥೆಯ ಗೃಂಥಪಾಲಕ ಡಾ| ಎಂ.ವಿ. ಸುನಿಲ್ ಅವರು ಕೃತಿ ಚೌರ್ಯ ಮತ್ತು ಕೃತಿಸ್ವಾಮ್ಯ ಉಲ್ಲಂಘನೆ ಕುರಿತು ವಿಚಾರ ಮಂಡಿಸಿದರು. ವಿಚಾರಸಂಕಿರಣದಲ್ಲಿ ದೇಶದ ನಾನಾ ವಿಶ್ವವಿದ್ಯಾಲಯಗಳ ಸಂಶೋಧಕರು, ಪ್ರಾಧ್ಯಾಪಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಶಿಕ್ಷಣ ತಜ್ಞರು ಪ್ರತಿನಿಧಿಗಳಾಗಿ ಭಾಗವಹಿಸಿದರು.
ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಪ್ರಾರ್ಥಿಸಿದರು. ಕಾಲೇ ಜಿನ ಪ್ರಾಚಾರ್ಯ ಪ್ರೊ| ಲಿಯೋ ನೊರೊನ್ಹಾ ಸ್ವಾಗತಿಸಿದರು. ಐಕ್ಯೂಎಸಿ ಘಟಕದ ಸಂಯೋಜಕ ಡಾ| ಎ.ಪಿ. ರಾಧಾಕೃಷ್ಣ ವಂದಿಸಿದರು. ವಿಚಾರ ಸಂಕಿರಣದ ಸಂಯೋಜಕ ವಿನಯಚಂದ್ರ ಸಹಕರಿಸಿದರು. ಕಲಾ ವಿಭಾಗಗಳ ಡೀನ್ ಪ್ರೊ| ಗಣಪತಿ ಎಸ್. ಕಾರ್ಯಕ್ರಮ ನಿರೂಪಿಸಿದರು.
ಆವಿಷ್ಕಾರ
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ| ಆಲ್ಫ್ರೆಡ್ ಜೆ. ಪಿಂಟೊ ಮಾತನಾಡಿ, ಪ್ರಸ್ತುತ ಶಿಕ್ಷಣ ರಂಗದಲ್ಲಿ ತಂತ್ರಜ್ಞಾನದ ಬಳಕೆಯ ಪ್ರಮಾಣ ಬಹಳಷ್ಟು ಹೆಚ್ಚಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಕರು ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಕೈಗೊಂಡಾಗ ಜಾಗತಿಕ ಮನ್ನಣೆ ಗಳಿಸಲು ಸಹಕಾರಿಯಾಗುತ್ತದೆ ಎಂದರು.