ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ವಿಧಾನಸಭೆ ಅಧಿವೇಶನಕ್ಕೂ ಮುನ್ನವೇ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಬೇಕು ಎಂದು ಎಪಿಎಂಸಿ ಅಧ್ಯಕ್ಷರ ರಾಜ್ಯ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಗರದ ಎಪಿಎಂಸಿ ಟೆಂಡರ್ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಎಪಿಎಂಸಿ ಅಧ್ಯಕ್ಷರು, ರಿಟ್ ಸಲ್ಲಿಸಿದ ಪ್ರತಿಯನ್ನು ಸಿಎಂ ಯಡಿ ಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವರಿಗೆ ನೀಡಿ ಎಪಿಎಂಸಿಯನ್ನು ಉಳಿಸಲು ಮನವಿ ಮಾಡಿಕೊಳ್ಳಬೇಕು. ಕೋವಿಡ್-19 ಸಮಯ ಆಗಿರುವು ದರಿಂದ ಹೋರಾಟ ಸ್ಥಗಿತಗೊಳಿಸಿ, ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪಕ್ಷಭೇದ ಮರೆತು ಚರ್ಚಿಸುವಂತೆ ಎಲ್ಲ ಶಾಸಕರಿಗೆ ಮನವಿ ಮಾಡಬೇಕು ಎಂಬ ನಿರ್ಧಾರ ಕೈಗೊಂಡರು.
ದಾವಣಗೆರೆ ಎಪಿಎಂಸಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಕಾಯ್ದೆ ರೈತರಿಗೆ ಮರಣ ಶಾಸನವಾಗಿದ್ದು, ಇದರ ವಿರುದ್ಧ ಸಿಡಿದೇಳಬೇಕು. ಈ ತಿದ್ದು ಪಡಿ ಪ್ರಶ್ನಿಸಿ ಕಾನೂನು ಹೋರಾಟಕ್ಕೂ ಮುಂದಾಗ ಬೇಕು. ಎಪಿಎಂಸಿ ಅಸ್ತಿತ್ವ ಉಳಿಸಿಕೊಳ್ಳಲು ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ದುರುದ್ದೇಶದ ಒತ್ತಡ: ಎಪಿಎಂಸಿ ಕಾಯ್ದೆಯ ಕಲಂ 9ರ ಮೇರೆಗೆ ಮಾರುಕಟ್ಟೆ ಸಮಿತಿಗಳು ಸ್ವಾಯತ್ತ ಸ್ಥಳೀಯಗಳಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಮಾರುಕಟ್ಟೆ ಶುಲ್ಕವನ್ನು ನಿಗದಿ ಮಾಡಲು ಸದರಿ ಕಾನೂನಿನ ಕಲಂ 65 (2) ಮೇರೆಗೆ ತಮ್ಮ ಉಪ ನಿಯಮಗಳನ್ನು ತಿದ್ದುಪಡಿ ಮಾಡಿಕೊಳ್ಳುವ ಪರಮಾಧಿಕಾರ ಹೊಂದಿವೆ. ಆದರೆ ರಾಜ್ಯ ಕೃಷಿ ಮಾರಾಟ ನಿರ್ದೇಶಕರು ಮಾರುಕಟ್ಟೆ ಸಮಿತಿಗಳ ರಚನೆಯ ಮೂಲ ಉದ್ದೇಶವನ್ನೇ ಲೆಕ್ಕಿಸದೆ, ಮಾರುಕಟ್ಟೆ ಸಮಿತಿ ಗಳ ಅಧ್ಯಕ್ಷರ ಅಭಿಪ್ರಾಯಗಳನ್ನೂ ಕೇಳದೆ ಹಾಲಿ ಇರುವ 1.50 ರೂ. ಮಾರುಕಟ್ಟೆ ಶುಲ್ಕವನ್ನು 0.35 ಪೈಸೆಗೆ ಇಳಿಸಿದೆ. ಸಮಿತಿಗಳ ಬೈಲಾ ಗಳನ್ನು ತಿದ್ದುಪಡಿ ಮಾಡಬೇಕೆಂದು ಏಕಪಕ್ಷೀಯವಾಗಿ ನಿರ್ದೇಶನ ನೀಡಿ ಒತ್ತಡ ಹೇರುತ್ತಿರುವುದರ ಹಿಂದೆ ದುರುದ್ದೇಶವಿರುವುದು ಕಂಡು ಬರುತ್ತದೆ ಎಂದು ದೂರಿದರು.
ನಿರ್ದೇಶಕರು ಮಾರುಕಟ್ಟೆ ಸಮಿತಿಗಳ ಹಿತ ಕಾಯುವ ಬದಲು ಬಹುರಾಷ್ಟ್ರೀಯ ಕಂಪನಿಗಳ ವಕ್ತಾರರಂತೆ ವರ್ತಿಸುತ್ತಿರುವುದು ಅನುಮಾನಾಸ್ಪದವಾಗಿದೆ. ಹಾಲಿ ಕಾನೂನಿನಂತೆ ಬೈಲಾಗಳಲ್ಲಿರುವ 1. 50 ರೂ. ಆಕರಿಸಿ ವಸೂಲು ಮಾಡಬಾರದೆಂದು ರಾಜ್ಯದ ಎಲ್ಲಾ ಮಾರುಕಟ್ಟೆ ಸಮಿತಿಗಳಿಗೆ ಆದೇಶ ನೀಡಿ ರುವುದರಿಂದ ಸಮಿತಿಗಳಿಗೆ ಬರುತ್ತಿದ್ದ ಕೋಟ್ಯಂ ತರ ರೂ. ನಷ್ಟವಾಗುತ್ತಿದೆ. ಕಾನೂನು ಬಾಹಿರ ನಿರ್ದೇಶನಗಳಿಗೆ ಅವರನ್ನೇ ಹೊಣೆಗಾರರರನ್ನಾಗಿಸಲು ಮತ್ತು ಮಾರುಕಟ್ಟೆ ಸಮಿತಿಗಳ ಉಳಿವಿಗೆ ಮಾರಕವಾ ಗಿರುವ ನಿಯಮಗಳಲ್ಲಿ 0.35 ಶುಲ್ಕದ ತಿದ್ದುಪಡಿ ಮಾಡುವುದ ರಿಂದ ಮಾರುಕಟ್ಟೆ ಸಮಿತಿಗಳು ನಾಮಾ ವಶೇಷವಾಗುತ್ತವೆ. ಆದ್ದರಿಂದ ತಿದ್ದುಪಡಿಗಳನ್ನು ಎಲ್ಲಾ ಮಾರುಕಟ್ಟೆ ಸಮಿತಿಗಳು ವಿರೋಧಿಸಿ ನಿರ್ಣಯ ಸ್ವೀಕಾರ ಮಾಡಬೇಕಿದೆ ಎಂದರು
20 ಲಕ್ಷ ಜನರಿಗೆ ಸಂಕಷ್ಟ: ರಾಜ್ಯದ ಯಾವುದೇ ಎಪಿಎಂಸಿ ಅಧ್ಯಕ್ಷರ ಗಮನಕ್ಕೂ ತರದೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಎಪಿಎಂಸಿಯನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ವಿಲೀನಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಎಪಿಎಂಸಿಯನ್ನು ನಂಬಿಕೊಂಡು ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಬದುಕುತ್ತಿದ್ದು ಈಗ ತಿದ್ದುಪಡಿ ಮೂಲಕ ಎಪಿಎಂಸಿಯನ್ನು ಕಾರ್ಪೊರೇಟ್ ವಲಯಗಳಿಗೆ ಮಾರಾಟ ಮಾಡಲು ಸರ್ಕಾರ ಹೊರಟಿದೆ. ಇದರಿಂದ ಮುಂದಿನ ದಿನಗಳಲ್ಲಿರೈತರಿಗೆ ಸಂಕಷ್ಟ ಎದುರಾಗಲಿದೆ ಎಂದರು. ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಮಾತನಾಡಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಇದರಿಂದ ಸಮಸ್ಯೆಗಳನ್ನು ಸುಲಭವಾಗಿ ಹೇಳಿಕೊಳ್ಳಬಹುದು ಎಂದರು.