ಆನಂದಪುರ: ಮಾಜಿ ಸಚಿವರು, ಹಿರಿಯ ರಾಜಕೀಯ ಮತ್ಸದ್ಧಿ ಕಾಗೋಡು ತಿಮ್ಮಪ್ಪನವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ಜು 13 ರಂದು ಶನಿವಾರ ಬೀದರ್‌ನ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಡಿ.ರವಿಕುಮಾರ್ ತಿಳಿಸಿದರು.
ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ. ಹುಲಿಕಲ್ ನಟರಾಜ್ ರವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಯಶಸ್ವಿ 4 ವರ್ಷಗಳಾಗಿದ್ದು, ಸಂಸ್ಥೆಯು ರಾಜ್ಯಾದ್ಯಂತ ಸಂಘಟಿಸಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದ್ದು, 50 ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ ಹೆಗ್ಗಳಿಕೆ ಸಂಸ್ಥೆಗಿದೆ.
ಸಂಸ್ಥೆಯಲ್ಲಿ ಅನೇಕ ಗಣ್ಯ ಚಿಂತಕರು, ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಅರಿವುಳ್ಳ ಬರಹಗಾರರ ಮಾರ್ಗದರ್ಶನದಲ್ಲಿ ನಡೆಯುತ್ತ ಬಂದಿದೆ. ಪ್ರತಿ ವರ್ಷ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನಗಳನ್ನು, ನಾಯಕತ್ವ ಶಿಬಿರಗಳನ್ನು, ವಿಚಾರ ಸಂಕಿರಣ, ಸಾಧಕರಿಗೆ ಹೆಚ್.ಎನ್.ಪ್ರಶಸ್ತಿ ಹಾಗೂ ಶ್ರಮಿಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರಧಾನ, ಸಾಹಿತಿ, ಚಿಂತಕರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು ಮೌಢ್ಯಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶ ನಮ್ಮ ಸಂಸ್ಥೆಗಿದ್ದು, ಆನ್‌ಲೈನ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಬೀದರ್‌ನ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿದ್ದು ಕಾರ್ಯಕ್ರಮದಲ್ಲಿ ಸಾಗರದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದೇವರ ಸಾನ್ನಿಧ್ಯ ವಹಿಸಲಿದ್ದಾರೆ.