ತುಮಕೂರು: ಪ್ರಜಾಪ್ರಭುತ್ವದಲ್ಲಿ ಪಂಚೇಂದ್ರಿಯ ಜಾಗೃತಾವಸ್ಥೆ ಬಹುಮುಖ್ಯ, ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ, ಅಸಹಿಷ್ಣುಗಳಿಗೆ ಪ್ರತಿರೋಧ ಒಡ್ಡುವ ಪಂಚೇಂದ್ರಿಯಗಳು ನಮ್ಮವಾಗಬೇಕು ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಬಂಡಾಯ ಸಾಹಿತ್ಯ ಸಂಘಟನೆ-ಕರ್ನಾಟಕ, ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮತಾ ಸೌಹಾರ್ದ ಗೀತ ಗಾಯನದಲ್ಲಿ ಆಶಯ ಭಾಷಣ ಮಾಡಿ, ನಮ್ಮ ಕಿವಿಗಳು ನಮ್ಮದೇ ಆಗಿದ್ದರೆ ಅನರ್ಥಕಾರಿ ಆಳುವ ವರ್ಗಕ್ಕೆ ಕಿವಿಗೊಡುವುದಿಲ್ಲ ಎಂದರು. ನಮ್ಮ ಕಣ್ಣುಗಳು ದುಷ್ಟಕೂಟದದೃಷ್ಟಿಕೋನವಾಗುವುದಿಲ್ಲ. ನಮ್ಮ ನಾಲಗೆ ಆಯತಪ್ಪಿ ಸೌಹಾರ್ದ ಹಾಳು ಮಾಡುವವರ ಆಳಾಗುವುದಿಲ್ಲ ಎಂದರು.
ಕೇಂದ್ರ ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾಯಕ ಡಾ.ಲಕ್ಷ್ಮಣದಾಸ್ ವೆಬಿನಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜನರಲ್ಲಿ ವಿವೇಕ ಹೋಗಿ ಇಂದು ನಾಡಿನಾದ್ಯಂತ ಅವಿವೇಕವಿಜೃಂಭಿಸುತ್ತಿದೆ. ಸಾಂಸ್ಕೃತಿಕ ಲೋಕ ದುರಂತದ ಸ್ಥಿತಿ ತಲುಪಿದೆ ಎಂದರು.
ಮಹಾಮಾರಿ ಕೋವಿಡ್ ದಿಂದ ನಾಟಕ, ಸಂಗೀತ, ನೃತ್ಯ, ಜನಪದ ಸೇರಿದಂತೆ ಸಾಂಸ್ಕೃತಿಕ ಲೋಕ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ನಾವು ಸಾಂಸ್ಕೃತಿಕ ಎಚ್ಚರ ತಪ್ಪದೆ ಹಾಡು, ಸಂಗೀತ, ನೃತ್ಯ, ಸಾಹಿತ್ಯ ಓದು, ಕವಿತೆ ಓದು, ಸಂಗೀತದ ಮೂಲಕ ಸಾಂಸ್ಕೃತಿಕ ಲೋಕ ಎಚ್ಚರಗೊಳಿಸಬೇಕಿದೆ. ಸೌಹಾರ್ದ, ಸಮತೆ, ಶ್ರದ್ಧೆ ಕಲಿಯೋಣ, ನಾಡಿನ ಸಾಂಸ್ಕೃತಿಕ ಉಳಿಸಿ ಬೆಳೆಸೋಣ ಎಂದರು.
ಕುವೆಂಪು ಅವರಿಂದ ಹಿಡಿದು ಸಮಕಾಲೀನ ಸಾಹಿತಿಗಳ ಕವಿತೆಗಳನ್ನು ನಾಡಿನ ಹಲವಾರು ಗಾಯಕರು ಹಾಡಿದರು. ಭೂಮಿ ಬಳಗದ ಜಿ.ಎಸ್.ಸೋಮಶೇಖರ್, ಬಂಡಾಯ ಸಂಘಟನೆ ಜಿಲ್ಲಾ ಸಂಚಾಲಕರಾದ ಡಾ.ಒ.ನಾಗರಾಜು, ಡಾ.ನಾಗಭೂಷಣ ಬಗ್ಗನಡು ಇದ್ದರು. ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆಮಲ್ಲಿಕಾ ಬಸವರಾಜು ಕಾರ್ಯಕ್ರಮ ನಿರ್ವಹಿಸಿದರು.