ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳು “ಉಳಿಯಲಿ-ಬೆಳೆಯಲಿ ಮತ್ತು ಅವುಗಳು ನೆರೆಹೊರೆಯ ಸಮಾನ ಶಾಲೆಗಳಾಗಲಿ’ ಎಂಬ ಘೋಷಣೆಯೊಂದಿಗೆ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕೆಂಬ ಹಕ್ಕೊತ್ತಾಯ ಮಂಡಿಸಲು ಎರಡು ದಿನಗಳ ರಾಜ್ಯಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶ ಅ.30 ಹಾಗೂ 31ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿರುವ ಕನ್ನಡ ಅಭಿವದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಈ ಸಮಾವೇಶ ನಡೆಯಲಿದೆ. ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಈ ಸಮಾವೇಶವನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಮಗು ಮತ್ತು ಕಾನೂನು ಕೇಂದ್ರ ಸಂಘಟಿಸುತ್ತಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದಲ್ಲಿ ಸಮಾವೇಶ ನಡೆಯುತ್ತಿದೆ ಎಂದರು.
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕಳೆದ ಏಳು ವರ್ಷಗಳಿಂದ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ. ಈಗಾಗಲೇ ಪಂಚಾಯಿತಿ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಸಮಾವೇಶಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ರಾಜ್ಯಮಟ್ಟದ ಸಮಾವೇಶದಲ್ಲಿ 225 ಶೈಕ್ಷಣಿಕ ತಾಲೂಕುಗಳಿಂದ 500ಕ್ಕೂ ಹೆಚ್ಚು ಪ್ರಾತಿನಿಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ರಾಜ್ಯ ಮತ್ತು ಹೊರ ರಾಜ್ಯದ ಶಿಕ್ಷಣ ತಜ್ಞರು ವಿಷಯ ಮಂಡಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಮಾವೇಶದ ಮೊದಲ ದಿನವಾದ ಅ.30ರಂದು ಬೆಳಗ್ಗೆ 9ಕ್ಕೆ ಬೆಂಗಳೂರು ನಗರ ರೈಲು ನಿಲ್ದಾಣದಿಂದ ಶಿಕ್ಷಕರ ಸದನದವರೆಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12ಗಂಟೆಗೆ ಶಿಕ್ಷಣ ಸಚಿವ ತನ್ವೀರ್ ಸೇs… ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ರಾಜೇಂದ್ರಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ “ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸ್ಥಿತಿಗತಿ: ಆರ್ಥಿಕವಾಗಿ ಹಿಂದುಳಿದ ಮತ್ತು ಅವಕಾಶ ವಂಚಿತ ಮಕ್ಕಳ ಮೇಲೆ ಅದರ ಪರಿಣಾಮ’, “ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಅನುಷ್ಠಾನ: ಸಾಧಕ-ಬಾಧಕಗಳು’, ಕುರಿತು ಗೋಷ್ಠಿಗಳು ನಡೆಯಲಿವೆ.
ಅ.31ರಂದು “ಶಾಲಾ ಶಿಕ್ಷಣದಲ್ಲಿ ಖಾಸಗೀಕರಣ ಮತ್ತು ವ್ಯಾಪಾರೀಕರಣ: ಆತಂಕ ಮತ್ತು ಪರ್ಯಾಯ’, “ಗುಣಾತ್ಮಕ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಎಸ್‌ಡಿಎಂಸಿಗಳ ಪಾತ್ರ: ಸಾಧ್ಯತೆ-ಸವಾಲುಗಳು’, ” ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಶಾಲಾ ಶಿಕ್ಷಣ’ದ ಕುರಿತು ಪ್ರತ್ಯೇಕ ಗೋಷ್ಠಿಗಳು ನಡೆಯಲಿವೆ. ಅದೇ ದಿನ ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲ್ಲಿದ್ದು, ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯ ವರದಿ ಅನುಷ್ಠಾನಕ್ಕೆ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಮಗು ಮತ್ತು ಕಾನೂನು ಕೇಂದ್ರದ ಮುಖ್ಯಸ್ಥ ಡಾ. ವಿ.ಪಿ. ನಿರಂಜನಾರಾಧ್ಯ, ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಕಾರ್ಯಾಧ್ಯಕ್ಷ ಎಂ.ಎಂ. ದಿನೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಇದ್ದರು.