ಧಾರವಾಡ: ಕರ್ನಾಟಕ ವ್ಯಂಗ್ಯಚಿತ್ರ ಸಾಹಿತ್ಯ ಮಾಧ್ಯಮ ಸಂಸ್ಥೆಯ ಉದ್ಘಾಟನೆ ಹಾಗೂ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು, ನುಡಿ, ಭಾಷೆ ಆಧಾರಿತ ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನವನ್ನು ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ವ್ಯಂಗ್ಯಚಿತ್ರಗಳು ಕೆಲವೇ ಗೆರೆಗಳ ಮೂಲಕ ಸಮಾಜದ ಅಂಕುಡೊಂಕನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಹಿರಿಯ ವ್ಯಂಗ್ಯಚಿತ್ರಕಾರ ಮೇಗರವಳ್ಳಿ ಸುಬ್ರಹ್ಮಣ್ಯ ಮಾತನಾಡಿ, ಈ ಸಂಸ್ಥೆಯಿಂದ ರಾಜ್ಯದ ಎಲ್ಲೆಡೆಯೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದರು. ಸರಕಾರಿ ಕಲಾ ವಿದ್ಯಾಲಯದ ಮುಖ್ಯಸ್ಥ ಬಸವರಾಜ ಕುರಿ ಮಾತನಾಡಿ, ಎಲ್ಲ ಕಲೆಗಳ ಪ್ರಕಾರವನ್ನು ಇಂದು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಪ್ರಶಾಂತ ನಾಯಕ ಮಾತನಾಡಿ, ಪ್ರತಿವರ್ಷ ಧಾರವಾಡ ವ್ಯಂಗ್ಯಚಿತ್ರ ಹಬ್ಬ ಆಚರಿಸಲಾಗುವುದು. ಈ ಸಂಸ್ಥೆಯಲ್ಲಿ ಸಾಹಿತ್ಯ ಕಲೆಗೂ ಅವಕಾಶ ನೀಡಲಾಗುವುದು ಎಂದರು.
ಅಶೋಕ ಜೋಶಿ ಅಧ್ಯಕ್ಷತೆ ವಹಿಸಿದ್ದರು. ವ್ಯಂಗ್ಯಚಿತ್ರಕಾರರಾದ ಸುಬ್ರಹ್ಮಣ್ಯ ಎಂ.ಎನ್., ಅಶೋಕ ಜೋಶಿ, ಪ್ರಶಾಂತ ಭಾರತ, ಶರಣು ಚಟ್ಟಿ, ರಂಗನಾಥ ಸಿದ್ಧಾಪುರ, ಆರ್.ಜಿ. ಕುಲಕರ್ಣಿ, ವಿಜಯಾನಂದ ಕಾಲವಾಡ, ಮಧುಕರ ಯಕ್ಕೇರಿ, ಕೆ.ಆರ್. ಸ್ವಾಮಿ, ನಿರ್ನಳ್ಳಿ ಗಣಪತಿ, ಗುಜ್ಜಾರಪ್ಪ ಬಿ.ಜಿ., ಬಿ.ವಿ. ಪಾಂಡುರಂಗರಾವ್, ಜೀವನ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ವಿಶ್ವ ವಿನ್ಯಾಸ, ಗೊರವರ ಯಲ್ಲಪ್ಪ ಪಾಲ್ಗೊಂಡಿದ್ದರು. ಶ್ರೀನಿವಾಸ ಹುದ್ದಾರ ನಿರೂಪಿಸಿದರು. ವಿಜಯ ಇನಾಮದಾರ ವಂದಿಸಿದರು.
ರಾಜ್ಯದ 50 ವ್ಯಂಗ್ಯಚಿತ್ರಕಾರರು ಪ್ರದರ್ಶನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ದ.ರಾ. ಬೇಂದ್ರೆ, ಆರ್.ಕೆ. ಲಕ್ಷ್ಮಣ, ಕಣಿ, ವಿಶ್ವೇಶ್ವರಯ್ಯ, ಕುವೆಂಪು, ಮಾಸ್ತಿ, ಹೀಗೆ ನಾಡಿನ ಅನೇಕ ಕಲಾವಿದರ ವ್ಯಂಗ್ಯಚಿತ್ರಗಳು ಜನರನ್ನು ಆಕರ್ಷಿಸಿದವು. ಕಾವ್ಯ ವಾಚನ ಕಾರ್ಯಕ್ರಮವನ್ನು ವಿಜಯ ಇನಾಮದಾರ, ಬಸವರಾಜ ಸುರಪುರ, ವೆಂಕಟೇಶ ಕಳಸಾಪುರ, ಪ್ರಹ್ಲಾದ ಯಾವಗಲ್ ನಡೆಸಿಕೊಟ್ಟರು.