ವಿಧಾನ ಪರಿಷತ್ತು: ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಆಗುತ್ತಿರುವ ವಿಳಂಬ ಧೋರಣೆ ಬಗ್ಗೆ ಸ್ವತಃ ಬೃಹತ್ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ, ಮೇಲ್ಮನೆಯಲ್ಲಿ ಬಹಿರಂಗವಾಗಿ ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗ ಮಂಗಳವಾರ ನಡೆಯಿತು. ಸಚಿವರ ಈ “ಅಸಮಾಧಾನ’ ಕೋಲಾಹಲ ಸೃಷ್ಟಿಸಿತು.
“ನನ್ನದೇ ಕಾರ್ಖಾನೆಯೊಂದರ ಲೀಸ್‌ಗೆ ಸಂಬಂಧಿಸಿದ ಫೈಲ್ (ಕಡತ) ಎರಡು ವರ್ಷಗಳಾದರೂ ವಿಲೇವಾರಿ ಮಾಡಿಲ್ಲ. ಆ ಇಲಾಖೆ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಕೂಡ ಇದೇ ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತಿದ್ದಾರೆ’ ಎಂದು ಅಸಹಾಯಕತೆ ತೋಡಿಕೊಂಡರು.
ಮಂಗಳವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಸುನೀಲ್ ವಲ್ಯಾಪುರ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ಉಪ ಉತ್ಪನ್ನಗಳಿಂದ ತಯಾರಿಸುವ ವಿದ್ಯುತ್, ಎಥೆನಾಲ್ ಇತ್ಯಾದಿಗಳಿಂದ ಗಳಿಸುವ ಲಾಭಾಂಶವನ್ನು ರೈತರಿಗೆ ನೀಡುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಲಕ್ಷ್ಮಣ ಸವದಿ, “ಎಥೆನಾಲ್ ಉತ್ಪಾದಿಸಿ ಮೂರು ತಿಂಗಳಾದರೂ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಕಂಟನಿಗಳು ಒಡಂಬಡಿಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಗಮನ ಸೆಳೆದರು.
ಈ ವೇಳೆ ದನಿಗೂಡಿಸಿದ ಸಚಿವ ಮುರುಗೇಶ್ ನಿರಾಣಿ, “ನನ್ನದೇ ಕಾರ್ಖಾನೆಯ ಲೀಸ್‌ಗೆ ಸಂಬಂಧಿಸಿದ ಫೈಲ್ ಎರಡು ವರ್ಷಗಳಾದರೂ ವಿಲೇವಾರಿ ಆಗಿಲ್ಲ. ಆ ಅಧಿಕಾರಿಯೂ ಇಲ್ಲಿಯೇ ಇದ್ದಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಆಗ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ಮೇಲೆ ಮುಗಿಬಿದ್ದರು. ಮುಖ್ಯ ಸಚೇತಕ ಪ್ರಕಾಶ್ ರಾಠೊಡ್ ಮಾತನಾಡಿ, “ಸರ್ಕಾರದಲ್ಲಿ ಸಚಿವರ ಸ್ಥಿತಿಯೇ ಹೀಗಿರುವಾಗ, ಸಾಮಾನ್ಯರ ಗತಿ ಏನು? ಸರ್ಕಾರ ನಡೆಯುತ್ತಲೇ ಇಲ್ಲ ಎನ್ನುವುದಕ್ಕೆ ಇದೇ ಉದಾಹರಣೆಯಾಗಿದೆ. ಕೂಡಲೇ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಅಥವಾ ಸಂಬಂಧಪಟ್ಟ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು. ಜೆಡಿಎಸ್‌ನ ಭೋಜೇಗೌಡ ಮಾತನಾಡಿ, “ಇದೊಂದು ಗಂಭೀರ ಸಮಸ್ಯೆ. ಇಲ್ಲಿ ಸಚಿವರು ಸುಳ್ಳಾಗಿರಬೇಕು ಅಥವಾ ಅಧಿಕಾರಿ ತಪ್ಪಾಗಿರಬೇಕು. ಸರ್ಕಾರದ ಮೌನ ಏನು ಸೂಚಿಸುತ್ತಿದೆ? ಕೂಡಲೇ ಪೀಠವು ಮಧ್ಯಪ್ರವೇಶಿಸಬೇಕು’ ಎಂದು ಮನವಿ ಮಾಡಿದರು.
ಮಧ್ಯಪ್ರವೇಶಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, “ಕಾರ್ಯಾಂಗದಲ್ಲಿನ ಲೋಪಗಳನ್ನು ಉಲ್ಲೇಖೀಸಿ ಸಚಿವರು ಹಾಗೆ ಹೇಳಿದ್ದಾರೆ. ಈ ಹಿಂದೆಯೂ ಸೇರಿ ಕಾರ್ಯಾಂಗದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಅದನ್ನು ಸರಿಪಡಿಸಿಕೊಂಡು ಮುಂದೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂಬುದು ಸಚಿವರ ಹೇಳಿಕೆಯ ಒಟ್ಟು ತಾತ್ಪರ್ಯ’ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, “ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸಚಿವ ಮುರುಗೇಶ್ ನಿರಾಣಿ ಅವರ ಮಾಲೀಕತ್ವದ ನಿರಾಣಿ ಉದ್ಯಮ ಸಮೂಹ ಗುತ್ತಿಗೆ ಪಡೆದಿದೆ. ಲೀಸ್ ಒಡಂಬಡಿಕೆಗೆ ಸಚಿವರು ಮುದ್ರಾಂಕ ಶುಲ್ಕ ವಿನಾಯ್ತಿ ಕೇಳಿದ್ದಾರೆ. ಆದರೆ, ಈ ಬಗ್ಗೆ ಆರ್ಥಿಕ ಇಲಾಖೆ ಹಲವು ಮಾಹಿತಿಗಳನ್ನು ಕೇಳಿದೆ. ಜತೆಗೆ ಮುಖ್ಯಮಂತ್ರಿಗಳ ಜತೆಗೂ ಚರ್ಚೆ ನಡೆದಿದೆ. ಸಚಿವ ಸಂಪುಟದಲ್ಲಿ ತೆಗೆದುಕೊಂಡು ಹೋಗಬೇಕಿದೆ. ಈ ಎಲ್ಲ ಕಾರಣಗಳಿಂದ ತುಸು ವಿಳಂಬವಾಗಿದೆ. ಆದರೆ, ಅಧಿಕಾರಿಗಳು ನೀತಿ-ನಿಯಮ ಪಾಲನೆ ಮಾಡಬೇಕಾಗುತ್ತದೆ’ ಎಂದು ಸೂಚ್ಯವಾಗಿ ಹೇಳಿದರು.
“ಲೀಸ್‌ನಲ್ಲಿ ವಿಳಂಬವಾಗಿದ್ದರೂ ಕ್ರಷಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಬಿಲ್ ಕೂಡ ಪಾವತಿಸಲಾಗುತ್ತಿದೆ. ಇದು ಸೇರಿದಂತೆ ಯಾವುದಕ್ಕೂ ಅಡತಡೆ ಉಂಟುಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.