Advertisement
ಹೌದು, ವಿಧಾನಸಭೆ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಶಾಸಕರು ಹೊಸದಾಗಿ ಆಯ್ಕೆಯಾಗಿದ್ದಾರೆ. ಬಂಟ್ವಾಳದ ರಾಜೇಶ್ ನಾಯಕ್, ಮೂಡಬಿದಿರೆಯ ಉಮಾನಾಥ್ ಕೋಟ್ಯಾನ್, ಸೇಡಂನ ರಾಜಶೇಖರ ಪಾಟೀಲ್, ಹಿರಿಯೂರಿನ ಪೂರ್ಣಿಮಾ, ಬೆಳಗಾವಿ ಗ್ರಾಮಾಂತರದ ಲಕ್ಷ್ಮಿ ಹೆಬ್ಟಾಳ್ಕರ್ ಹೊರತುಪಡಿಸಿದರೆ ಬಹುತೇಕ ನೂತನ ಶಾಸಕರು ಪ್ರಶ್ನೆ ಕೇಳಿಲ್ಲ. ಜತೆಗೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ, ಬಜೆಟ್ ಮೇಲಿನ ಚರ್ಚೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿಲ್ಲ.
Related Articles
Advertisement
10 ದಿನಗಳ ಅಧಿವೇಶನದಲ್ಲಿ ಕೊನೆಯ ಐದು ದಿನ ಮಾತ್ರ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಹಾಗೂ ಪ್ರತಿಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ತಲಾ 20 ಪ್ರಶ್ನೆಗಳನ್ನು ಕೇಳಿದ್ದು, ಅತಿ ಹೆಚ್ಚು ಪ್ರಶ್ನೆ ಕೇಳಿದವರಾಗಿದ್ದಾರೆ. ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ್ ಹಾಗೂ ಬಿಜೆಪಿಯ ಅಪ್ಪಚ್ಚು ರಂಜನ್ ನಂತರದ ಸ್ಥಾನದಲ್ಲಿದ್ದು ತಲಾ 19 ಪ್ರಶ್ನೆಗಳನ್ನು ಕೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದಲ್ಲಿ ಸುಮಾರು 19 ಜನ ಹೊಸ ಶಾಸಕರು ಪ್ರಶ್ನೋತ್ತರ ಕಲಾಪದಲ್ಲಿ ಸಕ್ರಿಯರಾಗಿ ಪ್ರಶ್ನೆಗಳನ್ನು ಕೇಳಿದ್ದು, ಉಮಾನಾಥ ಕೋಟ್ಯಾನ್ 18 ಪ್ರಶ್ನೆಗಳನ್ನು ಕೇಳಿ ಅತಿ ಹೆಚ್ಚು ಪ್ರಶ್ನೆ ಕೇಳಿರುವ ಮೊದಲ ಬಾರಿ ಆಯ್ಕೆಯಾಗಿರುವ ಶಾಸಕರಾಗಿದ್ದಾರೆ. ಉಳಿದಂತೆ ರಾಜೇಶ್ ನಾಯಕ್, ಬಸವರಾಜ್ ಮತ್ತಿಮೂಡ, ಹಾಲಪ್ಪ ಆಚಾರ್ ಸೇರಿದಂತೆ ಹೊಸಬರು ಹತ್ತು, ಹನ್ನೆರಡು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ.
ಇನ್ನು 8 ಶಾಸಕರು ಅತಿ ಕಡಿಮೆ ಅಂದರೆ ಕೇವಲ ಒಂದೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಬಳ್ಳಾರಿ ವಿರೂಪಾಕ್ಷಪ್ಪ, ರಾಜಾ ವೆಂಕಟಪ್ಪ ನಾಯಕ್, ಜಿ.ಎಚ್.ತಿಪ್ಪಾರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಬಿ.ಸಿ. ಗೌರಿ ಶಂಕರ್, ಸುನಿಲ್ ನಾಯ್ಕ, ದಿನಕರ್ ಶೆಟ್ಟಿ, ಶಿವರಾಮ್ ಹೆಬ್ಟಾರ್ ಒಂದೇ ಪ್ರಶ್ನೆ ಕೇಳಿ ತೃಪ್ತಿ ಪಟ್ಟಿದ್ದಾರೆ.
ಆಡಳಿತ ಪಕ್ಷದವರೇ ಹೆಚ್ಚು:ಸಾಮಾನ್ಯವಾಗಿ ಸರ್ಕಾರದ ವಿರುದ್ಧ ಹಾಗೂ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳುವುದು ಪ್ರತಿಪಕ್ಷದ ಸದಸ್ಯರು. ಆದರೆ, ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷದವರಿಗಿಂತ ಆಡಳಿತ ಪಕ್ಷದ ಸದಸ್ಯರೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದಾರೆ. 104 ಪ್ರತಿ ಪಕ್ಷದ ಸದಸ್ಯರಲ್ಲಿ 40 ಜನ ಮಾತ್ರ ಪ್ರಶ್ನೆಗಳನ್ನು ಕೇಳಿದ್ದಾರೆ. 53 ಜನ ಆಡಳಿತ ಪಕ್ಷದ ಸದಸ್ಯರು ಪ್ರಶ್ನೆಗಳನ್ನು ಕೇಳಿದ್ದಾರೆ. ವಿಧಾನಸಭೆಗೆ ಎಂಟು ಜನ ಮಹಿಳೆಯರು ಆಯ್ಕೆಯಾಗಿದ್ದು, ಎರಡನೇ ಬಾರಿ ಆಯ್ಕೆಯಾಗಿರುವ ಬಿಜೆಪಿಯ ಶಶಿಕಲಾ ಜೊಲ್ಲೆ 9 ಪ್ರಶ್ನೆಗಳನ್ನು ಕೇಳಿದ್ದು, ಉಳಿದವರೆಲ್ಲರೂ ಹೊಸ ಶಾಸಕಿಯರಾಗಿದ್ದು, ಪ್ರಶ್ನೆ ಕೇಳುವ ಗೋಜಿಗೆ ಹೋಗಿಲ್ಲ. ಗಮನ ಸೆಳೆದವರು ಯಾರಾರು?
ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ಹಾಗೂ ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಕೆಲವು ಹೊಸ ಶಾಸಕರು ಸಕ್ರಿಯವಾಗಿ ಭಾಗವಹಿಸಿ, ಸದನ ಹಾಗೂ ರಾಜ್ಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೇಶ್ ನಾಯಕ್, ಉಮಾನಾಥ ಕೋಟ್ಯಾನ್, ರಾಜಕುಮಾರ್ ಪಾಟೀಲ್, ಮಹಿಳಾ ಸದಸ್ಯೆಯರಾದ ಬಿಜೆಪಿಯ ಆರ್. ಪೂರ್ಣಿಮಾ, ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಟಾಳ್ಕರ್ ಗಮನ ಸೆಳೆದು ನಾಯಕರ ಮೆಚ್ಚುಗೆಯನ್ನೂ ಪಡೆದಿದ್ದಾರೆ. 10 ದಿನಗಳ ಕಾಲ ನಡೆದಿತ್ತು ಅಧಿವೇಶನ (ಜು.5ರಿಂದ 13)
93 ಜನ ಪ್ರಶ್ನೆ ಕೇಳಿದ ಸದಸ್ಯರು.
104 ಪ್ರಶ್ನೆ ಕೇಳದ ಸದಸ್ಯರು
28 ಜನ ಸಚಿವರು ಮತ್ತು ಸಭಾಧ್ಯಕ್ಷ ಮತ್ತು ಉಪಸಭಾಧ್ಯಕ್ಷ.
19 ಜನ ಪ್ರಶ್ನೆ ಕೇಳಿದ ಹೊಸ ಶಾಸಕರು.
20 ಪ್ರಶ್ನೆ ಕೇಳಿರುವ ಹ್ಯಾರಿಸ್ ಮತ್ತು ಸುನಿಲ್ ಕುಮಾರ್
8 ಜನ ಒಂದೇ ಪ್ರಶ್ನೆ ಕೇಳಿದವರು.
7 ಜನ ಪ್ರಶ್ನೆ ಕೇಳದ ಮಹಿಳಾ ಶಾಸಕಿಯರು – ಶಂಕರ ಪಾಗೋಜಿ