Advertisement

ಕಾಂಗ್ರೆಸ್‌ ಮಾಜಿ ಶಾಸಕರಿಗೆ ರಾಜ್ಯ ನಾಯಕರ ಶ್ರೀರಕ್ಷೆ

11:36 AM May 04, 2019 | Team Udayavani |

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ದ್ರೋಹವೆಸಗಿದವರಿಗೆ ಹಳ್ಳ ತೋಡಲು ಮುಂದಾಗಿದ್ದ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರ ಕಾರ್ಯತಂತ್ರಕ್ಕೆ ಹಿನ್ನಡೆಯಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದ ರೆಬಲ್ ನಾಯಕರ ವಿಡಿಯೋ ಬಹಿರಂಗಪಡಿಸಿ ಕಾಂಗ್ರೆಸ್‌ನಿಂದ ಶಿಸ್ತು ಕ್ರಮದ ನಿರೀಕ್ಷೆಯಲ್ಲಿದ್ದ ಸಿಎಂಗೆ ಈಗ ತೀವ್ರ ನಿರಾಸೆಯಾಗಿದೆ. ಕಾಂಗ್ರೆಸ್‌ನ ಅತೃಪ್ತ ಮಾಜಿ ಶಾಸಕರ ಕ್ರಮಕ್ಕೆ ಈಗ ರಾಜ್ಯ ಕಾಂಗ್ರೆಸ್‌ ನಾಯಕರು ಹಿಂದೇಟು ಹಾಕುತ್ತಿರುವುದು ಸಿಟ್ಟನ್ನು ನೆತ್ತಿಗೇರಿಸಿದೆ.

Advertisement

ಪಕ್ಷೇತರ ಅಭ್ಯರ್ಥಿ ಸುಮಲತಾ ಆಯೋಜಿಸಿದ್ದರೆನ್ನಲಾದ ಔತಣಕೂಟದಲ್ಲಿ ಅತೃಪ್ತ ಮಾಜಿ ಶಾಸಕರಾದ ಎನ್‌.ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ಎಸ್‌.ಶಿವಣ್ಣ ಭಾಗವಹಿಸಿದ್ದಕ್ಕೆ ಸಿಎಂ ಕುಮಾರಸ್ವಾಮಿ ಆಕ್ರೋಶಗೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡಿರುವುದನ್ನು ರಾಜ್ಯ ನಾಯಕರಿಗೆ ಮನದಟ್ಟು ಮಾಡಿಕೊಟ್ಟು ಶಿಸ್ತು ಕ್ರಮ ಜರುಗಿಸಲು ಸಂಚು ನಡೆಸಿದ್ದರು.

ಇದೇ ಸಮಯಕ್ಕೆ ಸಚಿವ ಜಿ.ಟಿ.ದೇವೇಗೌಡರು ಮೈಸೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿ ಪರವಾಗಿ ಕೆಲಸ ಮಾಡಿರುವ ಸತ್ಯವನ್ನು ಬಾಯ್ಬಿಟ್ಟರು. ಈಗ ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್‌ನ ರಾಜ್ಯನಾಯಕರು ಮಂಡ್ಯ ಕಾಂಗ್ರೆಸ್‌ ಮಾಜಿ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕಾದರೆ ಜೆಡಿಎಸ್‌ನವರು ಜಿ.ಟಿ.ದೇವೇಗೌಡರ ವಿರುದ್ಧವೂ ಕ್ರಮ ಜರುಗಿಸಬೇಕು. ಔತಣಕೂಟದಲ್ಲಿ ಪಾಲ್ಗೊಂಡಿರುವುದೆಲ್ಲಾ ಮಹಾ ಅಪರಾಧವೇನಲ್ಲ. ಅದನ್ನು ಅಶಿಸ್ತು ಎನ್ನಲಾಗದು ಎಂದು ಹೇಳಿ ಪ್ರಕರಣವನ್ನು ತಳ್ಳಿಹಾಕುತ್ತಿದ್ದಾರೆ. ಇದು ಸಿಎಂ ಕುಮಾರಸ್ವಾಮಿ ಆಕ್ರೋಶವನ್ನು ಹೆಚ್ಚಿಸಿದೆ.

ಜಿಲ್ಲೆಯೊಳ ಗೆ ಪ್ರಬಲ ಶಕ್ತಿ: ಜೆಡಿಎಸ್‌ ಶಕ್ತಿಕೇಂದ್ರದೊಳಗೆ ಕಾಂಗ್ರೆಸ್‌ನ ಪ್ರಬಲ ಶಕ್ತಿಗಳೆನಿಸಿರುವ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡರನ್ನು ಕಳೆದುಕೊಳ್ಳುವುದಕ್ಕೆ ಕಾಂಗ್ರೆಸ್‌ರಾಜ್ಯ ನಾಯಕರೂ ಸಿದ್ಧರಿಲ್ಲ. ಇದರ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ ಅವರನ್ನೂ ದೂರವಿಡುವ ಮನಸ್ಥಿತಿಯನ್ನೂ ಯಾರೊಬ್ಬರೂ ಪ್ರದರ್ಶಿಸುತ್ತಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾದ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಅನಿವಾರ್ಯವಾಗಿ ಜೆಡಿಎಸ್‌ಗೆ ಬಿಟ್ಟುಕೊಡಬಹುದಾದ ಪರಿಸ್ಥಿತಿ ಸೃಷ್ಟಿಯಾಯಿತು. ಈ ಕಾರಣದಿಂದ ಸುಮಲತಾ ಅಂಬರೀಶ್‌ ಅವರಿಗೆ ಟಿಕೆಟ್ ಕೈ ತಪ್ಪುವಂತಾಯಿತು.

Advertisement

ಸುಮಲತಾ ರಾಜಕೀಯ ಪ್ರಬುದ್ಧತೆಗೆ ಫಿದಾ: ಚುನಾವಣಾ ಪೂರ್ವ ಹಾಗೂ ನಂತರದಲ್ಲಿ ಸುಮಲತಾಗೆ ಜಿಲ್ಲೆಯಲ್ಲಿ ದೊರೆತ ಜನಮನ್ನಣೆ ಹಾಗೂ ಅವರ ರಾಜಕೀಯ ಪ್ರಬುದ್ಧತೆಯನ್ನು ಕಂಡು ಬೆರಗಾಗಿರುವ ಕಾಂಗ್ರೆಸ್‌ ರಾಜ್ಯ ನಾಯಕರು ಭವಿಷ್ಯದಲ್ಲಿ ಉತ್ತಮ ರಾಜಕೀಯ ನಾಯಕಿಯಾಗಿ ಬೆಳೆಯುವ ಎಲ್ಲಾ ಗುಣಗಳು ಸುಮಲತಾ ಅವರಲ್ಲಿರುವುದನ್ನು ಕಂಡುಕೊಂಡಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಮಂಡ್ಯ ಕ್ಷೇತ್ರದೊಳಗೆ ಗೆಲುವಿನ ವಾತಾವರಣವಿರುವುದರಿಂದ ಗೆಲ್ಲುವ ಕುದುರೆ ಸುಮಲತಾ ಅವರನ್ನು ಉಳಿಸಿಕೊಂಡು ಪಕ್ಷಕ್ಕೆ ಮತ್ತಷ್ಟು ಬಲ ತುಂಬುವುದಕ್ಕ್ಕೆ ತೆರೆ-ಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.

ಸುಮಲತಾ ಟಾರ್ಗೆಟ್ ಆಗಲಿಲ್ಲ: ಚುನಾವಣಾ ಸಮಯದಲ್ಲಾಗಲಿ, ಪ್ರಚಾರದ ವೇಳೆಯಲ್ಲಾಗಲಿ ಸುಮಲತಾ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ರಾಜ್ಯಮಟ್ಟದ ಯಾವುದೇ ನಾಯಕರೂ ಸುಮಲತಾ ಅವರನ್ನು ಗುರಿಯಾಗಿಸಿಕೊಂಡು ವಾಗ್ಧಾಳಿ ನಡೆಸಲೇ ಇಲ್ಲ. ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಮಾರಂಭಕ್ಕೆ ಸಚಿವ ಡಿ.ಕೆ.ಶಿವಕುಮಾರ್‌ ಹೊರತುಪಡಿಸಿದಂತೆ ಯಾವೊಬ್ಬ ಕಾಂಗ್ರೆಸ್‌ ಪ್ರಭಾವಿ ನಾಯಕರೂ ಮಂಡ್ಯ ಕಡೆ ಮುಖ ಮಾಡಲಿಲ್ಲ. ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರ್‌, ಕೆ.ಸುಧಾಕರ್‌ ಸೇರಿದಂತೆ ಹಲವು ನಾಯಕರು ಸುಮಲತಾ ಪರವಾಗಿಯೇ ಬ್ಯಾಟಿಂಗ್‌ ನಡೆಸಿದ್ದರು.

ಜೆಡಿಎಸ್‌ ಕಟ್ಟಿಹಾಕಲು ಕಾಂಗ್ರೆಸ್‌ ಪ್ರಯತ್ನ: ಜೆಡಿಎಸ್‌ ಭದ್ರಕೋಟೆಯೊಳಗೆ ಕಾಂಗ್ರೆಸ್‌ ಪಕ್ಷವನ್ನು ಮುಂದೆ ಬಲಿಷ್ಠವಾಗಿ ಬೆಳೆಸುವುದು ಹಾಗೂ ಜೆಡಿಎಸ್‌ ಶಕ್ತಿಯನ್ನು ಜಿಲ್ಲೆಯೊಳಗೆ ಕುಂದುವಂತೆ ಮಾಡಿ ಕಟಿrಹಾಕುವುದು ರಾಜ್ಯಮಟ್ಟದ ನಾಯಕರ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಮೇ 23ರ ಫ‌ಲಿತಾಂಶವನ್ನೇ ಎಲ್ಲರೂ ಕುತೂಹಲದಿಂದಲೇ ಎದುರು ನೋಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲೆಯೊಳಗೆ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೈತನ್ಯ ತುಂಬುವುದಕ್ಕೆ ಸುಮಲತಾ ಅಂಬರೀಶ್‌ ಅವರನ್ನೊಳಗೊಂಡಂತೆ ಅತೃಪ್ತ ಕಾಂಗ್ರೆಸ್‌ನ ಮಾಜಿ ಶಾಸಕರೆಲ್ಲರ ಅಗತ್ಯವಿದೆ. ಅದಕ್ಕಾಗಿ ಅವರನ್ನು ರಕ್ಷಣೆ ಮಾಡಿಕೊಳ್ಳುವುದೂ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಅನಿವಾರ್ಯವಾಗಿದೆ. ಇವರನ್ನು ಹೊರತುಪಡಿಸಿ ಜಿಲ್ಲೆಯೊಳಗೆ ಪರ್ಯಾಯ ನಾಯಕತ್ವವೇ ಇಲ್ಲ. ಹೊಸ ನಾಯಕತ್ವದಲ್ಲಿ ಪಕ್ಷವನ್ನು ಕಟ್ಟುವುದೂ ಅಸಾಧ್ಯದ ಕೆಲಸವಾಗಿದೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲ: ನಾವು ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಊಟ ಮಾಡಿದ ವಿಚಾರಕ್ಕೆ ಏಕೆ ಇಷ್ಟೊಂದು ಮಹತ್ವ ಸಿಕ್ಕಿದೆಯೋ ತಿಳಿಯುತ್ತಿಲ್ಲ. ನಾವು ಚುನಾವಣೆ ಮುಗಿದ ಮೇಲೆ ಭೇಟಿ ಮಾಡಿದ್ದೇವೆ. ಚುನಾವಣೆ ಪೂರ್ವದಿಂದಲೂ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದೇವೆ. ಅದನ್ನು ಪಕ್ಷದ ನಾಯಕರಿಗೂ ತಿಳಿಸಿದ್ದೇವೆ. ಹೀಗಿರುವಾಗ ಪಕ್ಷ ವಿರೋಧಿ ಚಟುವಟಿಕೆ ಹೇಗಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿ ಔತಣಕೂಟದ ವಿವರಣೆ ನೀಡಿ ಬಂದಿದ್ದಾರೆ.

ಮುಖ್ಯಮಂತ್ರಿಗೆ ಮಗ ನಿಖೀಲ್ ಸಮಾಧಾನ:

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫ‌ಲಿತಾಂಶದ ತಲೆಕೆಡಿಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪುತ್ರ ಹಾಗೂ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಸಮಾಧಾನದ ಮಾತುಗಳನ್ನಾಡಿದ್ದಾರೆ ಎಂದು ತಿಳಿದು ಬಂದಿದೆ. ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಬೇಡಿ. ಮೊದಲು ಆರೋಗ್ಯದ ಬಗ್ಗೆ ಗಮನಕೊಡಿ. ರಾಜಕೀಯ ಮಾಡುವುದಕ್ಕೆ ಮುಂದೆ ಅವಕಾಶಗಳಿವೆ. ಇಲ್ಲಿಗೇ ಎಲ್ಲವೂ ಮುಗಿದು ಹೋಗುವುದಿಲ್ಲ. ಚಿಂತಿಸದೆ ವಿಶ್ರಾಂತಿ ಪಡೆಯುವಂತೆ ನಿಖೀಲ್ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
● ಮಂಡ್ಯ ಮಂಜುನಾಥ್‌
Advertisement

Udayavani is now on Telegram. Click here to join our channel and stay updated with the latest news.

Next