Advertisement
ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಈ ಸಂಬಂಧ ಕರಾವಳಿಯ ಎಲ್ಲ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಗಳ ಭೇಟಿಗೆ ಉದ್ದೇಶಿಸಿದೆ. ದ.ಕ.ಮತ್ತು ಉಡುಪಿ ಜಿಲ್ಲೆಯ ಒಟ್ಟು 13 ವಿಧಾನಸಭಾ ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಶಾಸಕರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ,ಸಂಸದ ನಳಿನ್, ಸಂಸದೆ ಶೋಭಾ, ಕೇಂದ್ರ ಸಚಿವ ಸದಾನಂದ ಗೌಡ ಕೂಡ ತುಳುವರೇ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಆಡಳಿತದಲ್ಲಿದೆ. ಕರಾವಳಿಗರ ಆಶೋತ್ತರ ಈಡೇರಿಸಲು ಇದಕ್ಕಿಂತ ಸಕಾಲ ಇನ್ನೊಂದು ಸಿಗದು ಎನ್ನುವುದೇ ಅಕಾಡೆಮಿ ಪ್ರಯತ್ನವನ್ನು ಮತ್ತೆ ಮುಂಚೂಣಿಗೆ ತರಲು ಕಾರಣ.
ತುಳುವನ್ನು ರಾಜ್ಯಭಾಷೆ ಮಾಡಲಾಗುವುದು ಎಂದು ಯಡಿಯೂ ರಪ್ಪ ಹೇಳಿ ಹತ್ತು ವರ್ಷಗಳು ಸಂದಿವೆ. ರಾಜ್ಯ ಸಭೆ, ಲೋಕಸಭೆಯಲ್ಲಿಯೂ ತುಳುವಿಗೆ ಸ್ಥಾನಮಾನದ ಬಗ್ಗೆ ಮಾತುಕತೆ ನಡೆದಿದೆ. ಸುಮಾರು 50ಕ್ಕೂ ಮಿಕ್ಕಿ ಪ್ರಶ್ನೆಗಳನ್ನೂ ಕೇಳಲಾಗಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆ, ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎ.ಸಿ. ಭಂಡಾರಿ ಒಳಗೊಂಡಂತೆ ನಿಯೋಗವೊಂದು 2016ರಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಕಳೆದ ವರ್ಷ ಪ್ರಧಾನಿ ಮೋದಿ ಉಜಿರೆಗೆ ಆಗಮಿಸಿದ್ದಾಗಲೂ ಡಾ| ಹೆಗ್ಗಡೆಯವರ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು. ತುಳು ಸಂಘಟನೆಗಳು ಟ್ವಿಟರ್ ಅಭಿಯಾನ ನಡೆಸಿದ್ದವು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಕ್ಕೊತ್ತಾಯ ಸಭೆ ನಡೆದಿತ್ತು.
Related Articles
ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು ಎಂಬ ಒತ್ತಾಯ ಅನೇಕ ಭಾಷೆಗಳಿಂದ ಬಂದ ಹಿನ್ನೆಲೆಯಲ್ಲಿ 1998ರಲ್ಲಿ ಎನ್‌ಡಿಎ ಸರಕಾರ ಆಡಳಿತದಲ್ಲಿರುವಾಗ ಅಂದಿನ ಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರು ಸೀತಾಕಾಂತ ಮಹಾಪಾತ್ರ ಅವರ ನೇತೃತ್ವದಲ್ಲಿ ಸಮಿತಿಯೊಂದರ ರಚನೆಗೆ ಸೂಚಿಸಿದ್ದರು.
Advertisement
ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ಭಾಷೆಗಳಿಗೆ ಯಾವೆಲ್ಲ ಮಾನದಂಡಗಳು ಇರಬೇಕು ಎನ್ನುವುದನ್ನು ನಿರ್ಧರಿಸುವುದಕ್ಕಾಗಿ ಇದನ್ನು ರಚಿಸಲಾಗಿತ್ತು. ಆದರೆ ಕಮಿಟಿಯ ವರದಿ ಈವರೆಗೂ ಬಹಿರಂಗವಾಗಿಲ್ಲ. ಹೀಗಿರುವಾಗಲೇ ವಾಜಪೇಯಿ ಪ್ರಧಾನಿಯಾಗಿದ್ದಾಗ ಡೋಗ್ರಿ, ಬೋಡೊ, ಸಂಥಾಲಿ, ಮೈಥಿಲಿ ಭಾಷೆಗಳು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡಿದ್ದವು.
ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎನ್ನುವುದು ಕರಾವಳಿಗರ ಅನೇಕ ವರ್ಷಗಳ ಬೇಡಿಕೆ. ಇಂಥ ಬೇಡಿಕೆ 30ಕ್ಕೂ ಹೆಚ್ಚು ಭಾಷೆಗಳಿಂದ ಇದೆ. ಇದೇ ಕಾರಣಕ್ಕೆ ಕೇಂದ್ರ ಸರಕಾರ ಜಾಣ ನಡೆ ಅನುಸರಿಸುತ್ತಿದೆ. ತುಳುವಿಗೆ ಖಂಡಿತವಾಗಿಯೂ ಮಾನ್ಯತೆ ಸಿಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ.– ಬಿ.ಎ. ವಿವೇಕ ರೈ, ಹಿರಿಯ ವಿದ್ವಾಂಸ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೂ ಮುನ್ನ ತುಳು ರಾಜ್ಯದ ಅಧಿಕೃತ ಭಾಷೆಯಾಗಬೇಕು. ಆ ನಿಟ್ಟಿನಲ್ಲಿ ಕರಾವಳಿಯ ಎಲ್ಲ ಶಾಸಕರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿಗಳ ಭೇಟಿ ನಡೆಸಲಿದೆ. ಜತೆಗೆ ತುಳುನಾಡಿನ ಇತಿಹಾಸ ಸೇರಿದಂತೆ ಮತ್ತಷ್ಟು ಪೂರಕ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
– ದಯಾನಂದ ಕತ್ತಲಸಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನಕ್ಕೆ ಪೂರಕವಾಗಿ ರಾಜ್ಯದ ಅಧಿಕೃತ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಚರ್ಚಿಸಿದ್ದಾರೆ. ಈ ವಿಚಾರವನ್ನು ಸಿಎಂ ಗಮನಕ್ಕೆ ತಂದು ಸಾಧಕ-ಬಾಧಕಗಳ ಚರ್ಚೆ ನಡೆಸಲಾಗುವುದು.
– ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಸಚಿವ