Advertisement

Vitla: ಆನೆಕಲ್ಲು; ನದಿಯಲ್ಲಿ ಶಿವಲಿಂಗ ಪತ್ತೆ

11:34 PM Nov 10, 2024 | Team Udayavani |

ವಿಟ್ಲ: ಆನೆಕಲ್ಲು ಪಡ್ಪು ಶ್ರೀ ಜಲದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಾಡಿ ವಿಧಾನದ ಮೂಲಕ ನಡೆಯುತ್ತಿದ್ದ ಪ್ರಶ್ನಾಚಿಂತನೆ ಸಂದರ್ಭ ದೇವಸ್ಥಾನದ ಮುಂಭಾಗ ಹರಿಯುವ ನದಿಯಲ್ಲಿ ಶಿವಲಿಂಗ ಇರುವ ವಿಚಾರ ತಿಳಿದು ಬಂದಿದ್ದು, ಅದನ್ನು ಪತ್ತೆ ಮಾಡುವ ಕಾರ್ಯ ಶನಿವಾರ ಸಂಜೆ ನಡೆದಿದೆ.

Advertisement

ಪಡ್ಪು ತೋಟದಲ್ಲಿ ದಶಕದ ಹಿಂದೆ ದೇವಸ್ಥಾನದ ಕುರುಹು ಪತ್ತೆಯಾದ ಸಂದರ್ಭದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಜಲದುರ್ಗೆಯ ಜತೆಗೆ ಶಿವನ ಸಾನಿಧ್ಯವೂ ಇದೆ ಎಂಬುದು ಕಾಣಿಸಿತ್ತು. ಜಲದುರ್ಗಾ ಪರಮೇಶ್ವರೀ ನೀರಿನಲ್ಲಿ ನಿಂತು ಶಿವನಿಗೋಸ್ಕರ ತಪಸ್ಸು ಮಾಡಿರುವ ಬಗ್ಗೆ ತಿಳಿದುಬಂದಿದೆ ಮತ್ತು ಶಿವ ಲಿಂಗ ಸಿಗುವ ಮೂಲಕ ದೇವಿಯ ತಪಸ್ಸು ಸಾಕಾರಗೊಂಡಿದೆ. ನದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಶಿವ ಯೋಗೇಶ್ವರ ಎಂದು ಕರೆಯಲ್ಪಡುತ್ತಿದ್ದು, ಪ್ರತಿಯೊಬ್ಬ ಭಕ್ತರೂ ಪುರೋಹಿತ ಸಹಾಯದಲ್ಲಿ ಅರ್ಚನೆ ಮಾಡುವ ರೀತಿ ಶಿವಾಲಯವನ್ನು ನಿರ್ಮಾಣ ಮಾಡಲಾಗುವುದು ಎನ್ನಲಾಗಿದೆ.

ನಾಡಿ ಶೋಧನೆಯನ್ನು ಕರೂರು ಪಂಚಮದೇವಿ ಕಲಿಪಾಳ್ಯಮ್‌ ಶ್ರೀ ನಂದೀಶ್ವರರ್‌ ಜ್ಞಾನಪೀಠಂನ ಸ್ವಾಮಿ ಸಿದ್ಧ ಗುರೂಜಿಯವರು ನಡೆಸಿದ್ದಾರೆ. ಆನೆಕಲ್ಲು ಶ್ರೀ ಜಲದುರ್ಗಾ ಪರಮೇಶ್ವರೀ ಟ್ರಸ್ಟ್‌ ಗೌರವಾಧ್ಯಕ್ಷ ಒ. ಶ್ಯಾಮ್‌ ಭಟ್‌, ಜ್ಞಾನಪೀಠಂನ ಕಾರ್ಯನಿರ್ವಾಹಕ ಧರ್ಮದರ್ಶಿ ನಂದಿನಿ ಕೃಷ್ಣಕುಮಾರ್‌, ಟ್ರಸ್ಟಿ ಶಿವರಾಮನ್‌, ವೆಂಕಟ್‌, ಮಾತಾ ಅಮೃತಾನಂದಮಯೀ ಆಶ್ರಮದ ಎ.ಪಿ. ಲಲಿತಾ, ಶ್ರೀ ಜಲದುರ್ಗಾ ಪರಮೇಶ್ವರೀ ಕ್ಷೇತ್ರದ ಸಂಚಾಲಕ ಸುರೇಶ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುಷ್ಪರಾಜ್‌, ನೆಲಜಲ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಲಿಗೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next