Advertisement

ರಾಜ್ಯದಲ್ಲಿ ಜೆಡಿಎಸ್‌ ಗೆ ಹೆಚ್ಚು ಶಕ್ತಿ ಬಂದಿದೆ

03:08 PM Mar 06, 2023 | Team Udayavani |

ಕೋಲಾರ: ರಾಜ್ಯಕ್ಕೆ ಪದೇ ಪದೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬರುತ್ತಿದ್ದಾರೆಂದರೆ, ರಾಜ್ಯಾದ್ಯಂತ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಚು ಓಡಾಡುತ್ತಿದ್ದಾರೆಂದರೆ ಜೆಡಿಎಸ್‌ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿರುವುದೇ ಕಾರಣ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.

Advertisement

ತಾಲೂಕಿನ ಅಮ್ಮನಲ್ಲೂರು ಗ್ರಾಪಂ ವ್ಯಾಪ್ತಿಯ ರಾಮಾಪುರ ಗ್ರಾಮದಲ್ಲಿ ಭಾನುವಾರ ಜೆಡಿಎಸ್‌ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ವಜ್ರದಂತಿರುವ ಮಾಜಿ ಪ್ರಧಾನಿ ದೇವೇಗೌಡ ಉತ್ತಮವಾಗಿ ಸಾಧನೆ ಮಾಡಿರುವುದರ ಜತೆಗೆ ಮಾಜಿ ಸಿಎಂ ಎಚ್‌ .ಡಿ.ಕುಮಾರಸ್ವಾಮಿ, ದಿನನಿತ್ಯವೂ ರೈತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪಂಚರತ್ನ ಯೋಜನೆಯ ಮೂಲಕ ಓಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುತ್ತದೆ ಎನ್ನುವುದಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದೇ ಸಾಕ್ಷಿ ಎಂದು ಹೇಳಿದರು.

ಸಿದ್ದುಗೆ ರಾಜಕೀಯ ಜೀವನ ನೀಡಿದ್ದು ನಾನು: ಚಾಮುಂಡೇಶ್ವರಿ ಉಪಚುನಾವಣೆ, ಕಳೆದ ಚುನಾವಣೆಯಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ ಸಿದ್ದರಾಮಯ್ಯರಿಗೆ ರಾಜಕೀಯ ಜೀವನ ನೀಡಿದ್ದು, ನಾನು. ನಾನಲ್ಲ ಎಂದು ನಿನಗೆ ಧೈರ್ಯವಿದ್ದರೆ ಬಂದು ಹೇಳು. ಕಳೆದ ಚುನಾವಣೆಯಲ್ಲಿ ಸೋಲುತ್ತೀಯ ಎಂದು ಮೊದಲೇ ಹೇಳಿದ್ದೆ. ಜತೆಗೆ ಮೈಸೂರಿನಿಂದ ಬೆಂಗಳೂರುವರೆಗೆ ಒಂದು ಸ್ಥಾನವೂ ಬರಲ್ಲ ಎಂದಿದ್ದೆ. ಸಾಬರ ಆಡಿದ ಮಾತು ತಪ್ಪಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ ಎಂದು ಪ್ರಶ್ನಿಸಿದರು.

ನಿನ್ನ ಜೊತೆ ಮಗನ ಭವಿಷ್ಯ ಹಾಳು ಮಾಡುತ್ತಿದ್ದೀಯ: ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರಿಗೆ 1994ರಲ್ಲಿ ಟಿಕೆಟ್‌ ನೀಡಿ ಶಾಸಕರನ್ನಾಗಿ ಮಾಡಿದ್ದು ದೇವೇಗೌಡರು. ಅದನ್ನೆಲ್ಲಾ ಮರೆತು ಕಾಂಗ್ರೆಸ್‌ ಜತೆ ಸೇರಿ ನೀನು ಹಾಳಾಗುವುದಲ್ಲದೆ, ನಿನ್ನ ಮಗನ ಭವಿಷ್ಯ ಹಾಳು ಮಾಡುತ್ತಿದ್ದೀಯ. ಈ ಬಾರಿ ಕುಮಾರಸ್ವಾಮಿ ಅವರು ಸಿಎಂ ಆಗುವುದು ಶತಃಸಿದ್ಧ. ಒಂದು ವೇಳೆ ಸಿಎಂ ಆಗದಿದ್ದರೆ ನಾನೇ ನಿನಗೆ 25 ಕೋಟಿ ರೂ. ಕೊಡುತ್ತೇನೆ. ಆದರೆ, ಬಿಜೆಪಿಯವರ ಬಳಿ ನೀನು ಪಡೆದಿರುವ 5 ಕೋಟಿ ರೂ. ಹಣವನ್ನು ನನಗೆ ತಂದು ಕೊಡಬೇಕು ಎಂದು ಷರತ್ತು ಹಾಕಿದರು. ಎಂಎಲ್ಸಿ ಇಂಚರ ಗೋವಿಂದರಾಜು, ಜೆಡಿಎಸ್‌ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ ಮಾತನಾಡಿದರು.

ಈ ವೇಳೆ ರಾಜ್ಯ ಜೆಡಿಎಸ್‌ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿಯಾಗಿ ಜೆಟ್‌ ಅಶೋಕ್‌, ಜಿಲ್ಲಾಧ್ಯಕ್ಷರಾಗಿ ಶಬರೀಶ್‌, ಕಾರ್ಯಾಧ್ಯಕ್ಷರಾಗಿ ರೋಟರಿ ಸುಧಾಕರ್‌, ಜಿಲ್ಲಾ ಕಾರ್ಯದರ್ಶಿಯಾಗಿ ಬಲಿಜ ಸಂಘದ ಅಶೋಕ್‌, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿಯಾಗಿ ತಿರುಮಲೇಶ್‌ ಆಯ್ಕೆಯಾಗಿದ್ದು, ಆದೇಶ ಪತ್ರ ವಿತರಿಸಲಾಯಿತು.

Advertisement

ಪಕ್ಷದ ರಾಜ್ಯ ಉಪಾಧ್ಯಕ್ಷ ಜಮೀರ್‌ ಅಹಮದ್‌, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್‌, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ನಗರಸಭೆ ಸದಸ್ಯ ಮಂಜುನಾಥ್‌, ಮುಖಂಡರಾದ ಸಿಎಂಆರ್‌ ಹರೀಶ್‌, ವಕ್ಕಲೇರಿ ರಾಮು, ಬಾಬು ಮೌನಿ, ಖಾಜಿಕಲ್ಲಹಳ್ಳಿ ಹರೀಶ್‌, ಕಲಾ ರಮೇಶ್‌, ಡಾಬಾ ಶಂಕರ್‌, ಲೋಕೇಶ್‌ ಮರಿಯಪ್ಪ, ಜಯರಾಮ್‌, ಗ್ರಾಪಂ ಅಧ್ಯಕ್ಷ ವೆಂಕಟೇಶ್‌, ಮದನಹಳ್ಳಿ ಶಶಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next