Advertisement

ರಾಜ್ಯಾದ್ಯಂತ 29,451 ಕೇಂದ್ರಗಳ ಮೂಲಕ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ: ಡಾ.ಕೆ.ಸುಧಾಕರ್

12:37 PM Nov 24, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

Advertisement

ಕೇಂದ್ರ ಸರ್ಕಾರದ ಸೂಚನೆಯಂತೆ, ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ರಾಜ್ಯ ಕೋವಿಡ್ ಕಾರ್ಯಪಡೆ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದ್ದು, ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಿದ್ದು, ಲಸಿಕೆ ವಿತರಣೆ ಮಾಡಲು 10,008 ವ್ಯಾಕ್ಸಿನೇಟರ್ ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಬಗೆಗಿನ ಮಾಹಿತಿಯನ್ನು ದಾಖಲಿಸಲಾಗಿದೆ. ಶೇ.80 ರಷ್ಟು ಖಾಸಗಿ ಆಸ್ಪತ್ರೆಗಳು ಮಾಹಿತಿ ಒದಗಿಸಿದ್ದು, ಇನ್ನೂ ಶೇ.20 ರಷ್ಟು ಆಸ್ಪತ್ರೆಗಳು ವಾರದೊಳಗೆ ಮಾಹಿತಿ ನೀಡಲಿವೆ  ಎಂದರು.

ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗೆ 2,855 ಕೋಲ್ಡ್ ಚೇನ್ ಕೇಂದ್ರ ಲಭ್ಯವಿದೆ. ಬೇಗನೆ ಲಸಿಕೆ ವಿತರಣೆ ಮಾಡಲು ಸಾಧ್ಯವಾಗುವಂತೆ ಹೊಸದಾಗಿ ಬೆಂಗಳೂರು ನಗರ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದೆ. ಈ ಕೇಂದ್ರಗಳಿಗೆ ವಾಕ್ ಇನ್ ಕೂಲರ್, ವಾಕ್ ಇನ್ ಫ್ರೀಜರ್ ಗಳನ್ನು ಕೂಡ ನೀಡುವ ಪ್ರಸ್ತಾಪವಿದೆ ಎಂದು ಹೇಳಿದರು.

ರಾಜ್ಯದಲ್ಲಿ 10 ವಾಕ್ ಇನ್ ಕೂಲರ್ ಮತ್ತು 4 ವಾಕ್ ಇನ್ ಫ್ರೀಜರ್ ಇದೆ. ಕೇಂದ್ರ ಆರೋಗ್ಯ ಸಚಿವಾಲಯವು 3 ವಾಕ್ ಇನ್ ಕೂಲರ್, 2 ವಾಕ್ ಇನ್ ಫ್ರೀಜರ್ ನೀಡಲಿದೆ. ಇದಕ್ಕಾಗಿ ಸಿವಿಲ್ ಕಾಮಗಾರಿ ಆರಂಭವಾಗಿದೆ. ಕೋಲ್ಡ್ ಸ್ಟೋರೇಜ್ ಮತ್ತು ಸಂಗ್ರಹಕ್ಕೆ ಸಂಬಂಧಿಸಿದಂತೆ, ಡೋಸ್ ಗಳು ಮತ್ತಿತರ ಮಾಹಿತಿ ಅಗತ್ಯವಿದೆ. ಈ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೋರಲಾಗಿದೆ. ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಡ್ರೈ ಸ್ಟೋರೇಜ್ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.

Advertisement

ಕೇಂದ್ರ ಸರ್ಕಾರ ಈಗಾಗಲೇ ಡೀಪ್ ಫ್ರೀಜರ್ ಹಾಗೂ ರೆಫ್ರಿಜರೇಟರ್ ಗಳನ್ನು ಮಂಜೂರು ಮಾಡಿದೆ. ಹೆಚ್ಚುವರಿ ಅಗತ್ಯಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಪಶು ಸಂಗೋಪನೆ ಇಲಾಖೆಯಲ್ಲಿ ಲಭ್ಯವಿರುವ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕಾರ್ಪೊರೇಟ್ ಖಾಸಗಿ ಆಸ್ಪತ್ರೆಗಳ ಕೋಲ್ಡ್ ಸ್ಟೋರೇಜ್ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ ಎಂದು ಸಚಿವ ಸುಧಾಕರ್ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next