Advertisement

ಕರ್ನಾಟಕ ಅಭಿವೃದ್ಧಿಯಲ್ಲಿ ಮುಂಚೂಣಿ ರಾಜ್ಯ: ಚವ್ಹಾಣ

05:35 PM Jan 27, 2021 | Team Udayavani |

ಬೀದರ: ಭಾರತದಲ್ಲಿಯೇ ಕರ್ನಾಟಕ ಅಭಿವೃದ್ಧಿಯ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನಪರ ಮತ್ತು ಅಭಿವೃದ್ಧಿಪರ ಒಳ್ಳೆಯ ಆಡಳಿತವನ್ನು ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಕವಾಯಿತು ಮೈದಾನದಲ್ಲಿ ಮಂಗಳವಾರ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಕ್ಕಾಗಿ ಹೊಸ ಆಯಾಮ ನೀಡುತ್ತಿದೆ. ಪ್ರಾದೇಶಿಕ ಅಸಮತೋಲನವನ್ನು ತೊಡೆದು ಸಮಗ್ರ ಕರ್ನಾಟಕವನ್ನು ಸಮೃದ್ಧ ಕರ್ನಾಟಕವನ್ನು ರೂಪಿಸುವತ್ತ ಹೆಜ್ಜೆ ಹಾಕಿದೆ ಎಂದು ತಿಳಿಸಿದರು.

ಬೀದರ ಜಿಲ್ಲೆ ಪ್ರಗತಿ ಪಥದಲ್ಲಿದೆ. ಈ ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಪಶು ಪಾಲನೆ ಮಾಡುವಂತಹ ವಾತಾವರಣ ಇಲ್ಲಿದೆ. ಕೃಷಿಯ ಜತೆಗೆ ತೋಟಗಾರಿಕೆ ಮತ್ತು
ಹೈನುಗಾರಿಕೆಗೆ ಆದ್ಯತೆ ನೀಡಲಾಗಿದೆ. ಯುವ ಸಮೂಹಕ್ಕೆ ಉದ್ಯೋಗವಕಾಶ ಕಲ್ಪಿಸಬೇಕಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಅದಕ್ಕಾಗಿ ಬದ್ಧವಾಗಿದೆ. ಸರ್ಕಾರ ರೂಪಿಸುತ್ತಿರುವ ಅನೇಕ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಜನರು ಮುಂದೆ ಬರಬೇಕು ಎಂದರು.

ಪೊಲೀಸ್‌, ಅಗ್ನಿಶಾಮಕ ಮತ್ತು ವಿಪತ್ತು ತುರ್ತು ಸೇವೆಗಾಗಿ ದೇಶಾದ್ಯಂತ ಜಾರಿಗೊಳಿಸುತ್ತಿರುವ 112 ತುರ್ತು ಸಹಾಯವಾಣಿ ಸೇವೆಯನ್ನು ಬೀದರ ಜಿಲ್ಲೆಯಲ್ಲೂ ಅನುಷ್ಠಾನಗೊಳಿಸುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ ವಾಹನಗಳ ಬೀದರಗೆ ಬಂದಿವೆ. ತುರ್ತು ಸೇವೆಯೂ ದಿನದ 24 ಗಂಟೆಯೂ ಲಭ್ಯವಾಗಲಿದೆ ಎಂದು ಹೇಳಿದರು.

ಸಚಿವ ಪ್ರಭು ಚವ್ಹಾಣ ಅವರು ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಕ್ಷೇತ್ರಗಳಲ್ಲಿ  ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಶಾಸಕ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಖಾಶೆಂಪೂರ, ರಘುನಾಥರಾವ್‌ ಮಲ್ಕಾಪುರೆ, ವಿಜಯಸಿಂಗ್‌, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನಗೋಪಾಳೆ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಕೆಆರ್‌ಐಐಡಿಬಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಡಿಸಿ ರಾಮಚಂದ್ರನ್‌ ಆರ್‌., ಎಸ್‌ಪಿ ನಾಗೇಶ ಡಿ.ಎಲ್‌, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್‌ ಇದ್ದರು.

Advertisement

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದ್ದು, ಈ ಕಾಯ್ದೆಯಂತೆ ಆಕಳು, ಎತ್ತು ಹಾಗೂ 13 ವರ್ಷದೊಳಗಿನ ಎಮ್ಮೆಗಳನ್ನು ಹತ್ಯೆ ಮಾಡುವುದನ್ನು ನಿಷೇಧಿಸಿದೆ. ವಯಸ್ಸಾದ ಜಾನುವಾರುಗಳ ಸಾಕಾಣಿಕೆಗಾಗಿ ರಾಜ್ಯ ಪ್ರತಿ ತಾಲೂಕಿಗೆ 2 ಹೊಸ ಗೋ ಶಾಲೆಗಳನ್ನು ತೆರೆಯಲಾಗುವುದು. ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ಜಾನುವಾರುಗಳಿಗೆ 3 ವರ್ಷಗಳ ಅವಧಿಗೆ ಉಚಿತ ವಿಮೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋ ಶಾಲೆಗಳಿಗೆ ಮೂಲ ಸೌಕರ್ಯ, ಜಾನುವಾರುಗಳ ನಿರ್ವಹಣೆಗಾಗಿ 27.98 ಲಕ್ಷ ರೂ. ಅನುದಾನ ನೀಡಲಾಗಿದೆ.
ಪ್ರಭು ಚವ್ಹಾಣ,
ಪಶು ಸಂಗೋಪನಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next