Advertisement

ರಾಜ್ಯ ಮಾನವ ಹಕ್ಕು ಆಯೋಗವೀಗ ಅಕ್ಷರಶಃ ಅನಾಥ!

09:52 AM Dec 04, 2017 | |

ಬೆಂಗಳೂರು: ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ ಅಕ್ಷರಶಃ ಅನಾಥವಾಗಿದೆ. ನಾಗರಿಕರ ಮಾನವ ಹಕ್ಕುಗಳ ಉಲ್ಲಂಘನೆ  ಯಾದರೆ ನ್ಯಾಯ ಕೊಡಿಸಬೇಕಾದ ಸ್ವಾಯತ್ತ ಸಂಸ್ಥೆಯೇ ಇಂದು ದಿಕ್ಕಿಲ್ಲದೆ ದಯನೀಯ ಸ್ಥಿತಿ ತಲುಪಿದೆ.

Advertisement

ನ್ಯಾ. ಎಸ್‌.ಆರ್‌. ನಾಯಕ್‌ ನಿವೃತ್ತರಾದ ಬಳಿಕ 2012ರಿಂದ ಆಯೋಗಕ್ಕೆ ಖಾಯಂ ಅಧ್ಯಕ್ಷರಿಲ್ಲ. ಕಳೆದ ಐದೂವರೆ ವರ್ಷ ಸದ ಸ್ಯರು ಮತ್ತು ಹಂಗಾಮಿ ಅಧ್ಯಕ್ಷರ ಮೂಲಕವೇ ಆಯೋಗ ತನ್ನ ಕಾರ್ಯಾ ಭಾರ ನಡೆಸಿತು. ಸದಸ್ಯರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಮೀರಾ ಸೆಕ್ಸೇನಾ ಹಾಗೂ ಜಿಲ್ಲಾ ನಿವೃತ್ತ ನ್ಯಾಯಾಧೀಶ ಸಿ.ಜಿ. ಹುನಗುಂದ ಅವರೂ ಕಳೆದ ತಿಂಗಳು ನಿವೃತ್ತ ರಾಗಿದ್ದು, ಆಯೋಗ ಪೂರ್ಣ ಪ್ರಮಾಣದಲ್ಲಿ ಖಾಲಿ ಆಗಿದೆ. ಕಾನೂನು ಪ್ರಕಾರ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅವರನ್ನು ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ನ್ಯಾ. ಎಸ್‌.ಆರ್‌. ನಾಯಕ್‌ ಅವಧಿ ಮುಗಿದ ಬಳಿಕ ಅಧ್ಯಕ್ಷರ ಹುದ್ದೆಗೆ ಅರ್ಹರಿದ್ದವರು ಸಾಕಷ್ಟು ಮಂದಿ ಇದ್ದರು. ಆದರೆ, ಸಾಮಾನ್ಯ ಜನರು ದಿನನಿತ್ಯ ಒಡನಾಟ ಇಟ್ಟುಕೊಳ್ಳುವ ಆಯೋಗಕ್ಕೆ ಅವರ ಭಾಷೆಯಲ್ಲಿ ವ್ಯವ  ಹರಿಸಲು ಸ್ಥಳೀಯರು ಹಾಗೂ ಕನ್ನಡಿಗರು ಬೇಕೆಂಬ ಹಿನ್ನೆಲೆಯಲ್ಲಿ ಅಧ್ಯಕ್ಷರ ನೇಮಕ ನನೆಗುದಿಗೆ ಬಿದ್ದಿತ್ತು.

ಈ ಮಧ್ಯೆ, 2013ರಲ್ಲಿ ತಮಿಳುನಾಡು ಮೂಲದ ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಡಿ. ಮುರಗೇಶನ್‌ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಅವರ ತಮಿಳು ಹಿನ್ನೆಲೆಗೆ ಅಪಸ್ವರ ಕೇಳಿ ಬಂದಿದ್ದರಿಂದ ಹುದ್ದೆ ವಹಿಸಿಕೊಳ್ಳಲು ನ್ಯಾ. ಮುರಗೇಶನ್‌ ನಿರಾಕರಿಸಿದರು.  ಅದಾದ ಬಳಿಕ ಕನ್ನಡಿಗರೇ ಆದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌ .ವಿ. ರವೀಂದ್ರನ್‌ ಅವರನ್ನು ನೇಮಿಸಲು ಸರ್ಕಾರ ಮನಸ್ಸು ಮಾಡಿತ್ತಾದರೂ ಇದಕ್ಕೆ ಅವರು ಒಪ್ಪಿಕೊಂಡಿಲ್ಲ. ನಂತರ ಅಧ್ಯಕ್ಷರ
ನೇಮಕದ ಬಗ್ಗೆ ಸರ್ಕಾರದಿಂದ ಗಂಭೀರ ಪ್ರಯತ್ನ ನಡೆದಿಲ್ಲ. ಈಗ ಗುಜರಾತ್‌ ಮೂಲದ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಅವರ ಹೆಸರು ಚಾಲ್ತಿಯಲ್ಲಿದ್ದು, ಈ ಸಂಬಂಧ ಕಳೆದ ಆಗಸ್ಟ್‌ 31ಕ್ಕೆ ಸಭೆ ನಿಗದಿಪಡಿಸಲಾಗಿತ್ತು. ಆದರೆ, ಮುಖ್ಯ  ಮಂತ್ರಿಯವರ ಕಾರ್ಯದೊತ್ತಡದಿಂದ ಸಭೆ ರದ್ದಾಗಿತ್ತು.

10 ಸಾವಿರ ದೂರುಗಳ ಕತೆ ಕೇಳ್ಳೋರಿಲ್ಲ: ಆಯೋಗದಲ್ಲಿ ಈವರೆಗೆ 67 ಸಾವಿರ ದೂರುಗಳು ದಾಖಲಾಗಿದ್ದು, ಈವರೆಗೆ
58 ಸಾವಿರ ದೂರುಗಳನ್ನು ಇತ್ಯರ್ಥ ಪಡಿಸ ಲಾಗಿದೆ. ಇನ್ನೂ 9ರಿಂದ 10 ಸಾವಿರ ದೂರುಗಳು ಇತ್ಯರ್ಥಕ್ಕೆ ಬಾಕಿ ಇದ್ದು,
ದೂರುಗಳ ಗೋಳು ಕೇಳುವವರಿಲ್ಲದಂತಾಗಿದೆ. ಪ್ರತಿ ವರ್ಷ ಆಯೋಗದಲ್ಲಿ ಸರಾಸರಿ 6 ಸಾವಿರ ದೂರು ದಾಖಲಾಗುತ್ತವೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ. ಆದರೆ, ಖಾಯಂ ಅಧ್ಯಕ್ಷ ರಿಲ್ಲದ 5 ವರ್ಷಗಳಲ್ಲಿ ಆಯೋಗಕ್ಕೆ ಸಲ್ಲಿಕೆಯಾಗುವ ದೂರುಗಳ ಪ್ರಮಾಣದಲ್ಲಿ ಗಣನೀಯ ಇಳಿಮುಖವಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸುತ್ತವೆ.

ಅಧ್ಯಕ್ಷರ ನೇಮಕಕ್ಕೆ ಡಿ.10ರ ಗಡುವು
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನವಾದ ಡಿ.10ಕ್ಕೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರ ನೇಮಕಕ್ಕೆ ಗಡುವು ಕೊಟ್ಟಿರುವ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು, ತಪ್ಪಿದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಸಿಎಂ ಕಚೇರಿಗೆ ಮನವಿ ಸಲ್ಲಿಸಿರುವ ಮಾನವ ಹಕ್ಕು ಹೋರಾಟಗಾರರು, ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

Advertisement

ಮಾನವ ಹಕ್ಕುಗಳ ರಕ್ಷಣೆ ಮಾಡುವ ಸ್ವಾಯತ್ತ ಸಂಸ್ಥೆ ಈ ರೀತಿ ಅನಾಥವಾಗಿರುವುದು ನಾಚಿಕೆಗೇಡಿನ ಸಂಗತಿ. ಸ್ಥಳೀಯರು ಅಥವಾ ಕನ್ನಡಿಗರು ಬೇಕು ಎಂದಾದರೆ, ಕರ್ನಾಟಕದವರೇ ಆಗಿರುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಹೆಸರನ್ನು ಸರ್ಕಾರ ಪರಿಗಣಿಸಲಿ.
 ●ಟಿ. ನರಸಿಂಹಮೂರ್ತಿ, ಮಾನವಹಕ್ಕು ಹೋರಾಟಗಾರ

●ರಫಿಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next