ಉಡುಪಿ: ಉಡುಪಿ ಜಿಲ್ಲೆ ಸದ್ಯ ಕೋವಿಡ್-19 ಮುಕ್ತವಾಗಿದ್ದರೂ ಅಧಿಕೃತವಾಗಿ ಪ್ರಕಟವಾಗುವುದು ಪಾಸಿಟಿವ್ ಪ್ರಕರಣಗಳು ದಾಖಲಾಗದೆ 28 ದಿನಗಳಾದ ಬಳಿಕ. ಮಾ. 29ರಂದು ಜಿಲ್ಲೆಯಲ್ಲಿ ಮೂರನೇ ಪ್ರಕರಣ ದಾಖಲಾಗಿತ್ತು. ಅನಂತರ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಸೋಂಕಿತ ಮೂವರೂ ಗುಣಮುಖ ರಾಗಿ ಬಿಡುಗಡೆಗೊಂಡಿದ್ದಾರೆ.
ಪಾಸಿಟಿವ್ ಪ್ರಕರಣ ದಾಖಲಾಗದೆ ಇದುವರೆಗೆ 24 ದಿನಗಳು ಆಗಿವೆ. ಇನ್ನೂ ನಾಲ್ಕು ದಿನ ಪ್ರಕರಣ ಕಂಡು ಬಾರದೆ ಇದ್ದರೆ ಉಡುಪಿ ಜಿಲ್ಲೆ ಕೋವಿಡ್-19 ಮುಕ್ತವಾಗಲಿದೆ.
ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಗರ್ಭಿಣಿಯ ಗಂಟಲ ದ್ರವ ಮಾದರಿಯ ವರದಿ ಬುಧವಾರವೂ ಕೈ ಸೇರಿಲ್ಲ. ಜಿಲ್ಲೆಯಲ್ಲಿ ಬುಧವಾರ 13 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಬಂದ ಒಂದು ವರದಿ ನೆಗೆಟಿವ್ ಆಗಿದೆ. ಇದುವರೆಗೆ 993 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 110 ಮಾದರಿಗಳ ವರದಿ ಬರಬೇಕಾಗಿದೆ.
ಬುಧವಾರ 78 ಮಂದಿ ಹೆಸರು ನೋಂದಣಿ ಮಾಡಿಸಿದ್ದಾರೆ. 29 ಮಂದಿ 28 ದಿನಗಳ, 65 ಮಂದಿ 14 ದಿನಗಳ ನಿಗಾವಣೆ ಮುಗಿಸಿದ್ದು 697 ಮಂದಿ ನಿಗಾ ದಲ್ಲಿದ್ದಾರೆ. ಒಬ್ಬರು ಆಸ್ಪತ್ರೆ ಕ್ವಾರಂಟೈನ್‌ಗೆ ಸೇರಿದ್ದು ಒಬ್ಬರು ಬಿಡುಗಡೆಗೊಂಡಿದ್ದಾರೆ. 26 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 11 ಮಂದಿ ಆಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ಸೇರಿದ್ದು ನಾಲ್ವರು ಬಿಡುಗಡೆಗೊಂಡಿದ್ದಾರೆ. 52 ಮಂದಿ ವಾರ್ಡ್‌ನಲ್ಲಿದ್ದಾರೆ.
ಕೋವಿಡ್-19 ಸೋಂಕಿನ ಭೀತಿ ಆವರಿಸಿದ ಬಳಿಕ ಇದೇ ಮೊದಲ ಬಾರಿ ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಎ. 23ರಂದು ನಗರಕ್ಕೆ ಆಗಮಿಸಲಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುವರು. ಜಿಲ್ಲೆ ಸೋಂಕುಮುಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಹೆಚ್ಚು ಸೋಂಕು ಪೀಡಿತ ಪ್ರದೇಶವಾದ ಬೆಂಗಳೂರಿನಿಂದ ಸಚಿವರು ಆಗಮಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.