ಬೆಂಗಳೂರು: ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರ ನಿರ್ಧರಿಸಿದರೆ, ಅನಿರ್ದಿಷ್ಟಾವಧಿ ಸರಕು-ಸಾಗಣೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ದಕ್ಷಿಣ ವಲಯ ಮೋಟಾರು ಟ್ರಾನ್ಸ್‌ಪೊರ್ಟ್ ಕ್ಷೇಮಾಭಿವೃದ್ಧಿ ಸಂಘ (ಸಿಮ್ಟಾ) ನಿರ್ಧರಿಸಿದೆ.
ಅಧಿಕಾರಕ್ಕೆ ಬರುವ ರಾಜ್ಯ ಸರ್ಕಾರಗಳೆಲ್ಲವೂ ನಮ್ಮ ಸುಲಿಗೆಗೆ ನಿಂತಿವೆ. ಈಗ ಹೊಸ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹಿಸಲು ಮುಂದಾಗಿದೆ. ಹಾಗೊಂದು ವೇಳೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡರೆ, ಅನಿರ್ದಿಷ್ಟಾವಧಿ ಲಾರಿ ಸೇರಿದಂತೆ ಸರಕು ಸಾಗಣೆ, ವಾಣಿಜ್ಯ ವಾಹನಗಳ ಮುಷ್ಕರ ನಡೆಸಲಾಗುವುದು ಎಂದು ಸಿಮ್ಟಾ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಗಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 23ನೇ ಸಿಮ್ಟಾ ವ್ಯವಸ್ಥಾಪಕರ ಸಮಿತಿ ಸಭೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ಕರ್ನಾಟಕದ ಲಾರಿ ಹಾಗೂ ವಾಣಿಜ್ಯ ವಾಹನ ಮಾಲೀಕರ ಸಂಘಟನೆಗಳು ಟೋಲ್ ವಿರುದ್ಧ ಮುಷ್ಕರ ನಡೆಸುವ ಕುರಿತು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿವೆ. ಟೋಲ್ ಸಂಗ್ರಹಕ್ಕೆ ನಿರ್ಧರಿಸಿದ ದಿನದಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರ 19 ಕಡೆ ಟೋಲ್ ಸಂಗ್ರಹಿಸಲು ಸಿದ್ಧತೆ ನಡೆಸಿತ್ತು. ಆಗ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಆದೇಶದಿಂದ ಹಿಂತೆಗೆದುಕೊಂಡರು. ಈಗ ಮತ್ತೆ ಮೈತ್ರಿ ಸರ್ಕಾರ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಖಂಡನೀಯ. ಈ ಸಂಬಂಧ ಶೀಘ್ರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಇದರಿಂದ ಲಾರಿ ಮಾಲಿಕರು ಮತ್ತು ಏಜೆಂಟರಿಗೆ ಆಗಲಿರುವ ಹೊರೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಈ ಮಧ್ಯೆ ಹೆದ್ದಾರಿಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಿರುಕುಳ ಮಿತಿ ಮೀರಿದೆ. ಜಲ್ಕಿ ಚೆಕ್‌ಪೋಸ್ಟ್‌ನಲ್ಲಂತೂ ಪ್ರತಿ ಲಾರಿಯಿಂದ ಕನಿಷ್ಠ 1000-1,500 ರೂ. ವಸೂಲು ಮಾಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಅಧಿಕಾರಿಗಳ ಕಿರುಕುಳ ಹೆಚ್ಚಿದೆ.
ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ಅವರು, ನ.1ರಿಂದ ಯಾವುದೇ ಲಾರಿ ಮಾಲೀಕರು ಲೋಡಿಂಗ್ ಮತ್ತು ಅನ್‌ಲೋಡಿಂಗ್ ವೆಚ್ಚ ಭರಿಸಬಾರದು. ಸರಕು ಮಾಲೀಕರೇ ಈ ವೆಚ್ಚ ಭರಿಸಬೇಕು. ಇದರಿಂದ ಈಗಾಗಲೇ ನಷ್ಟದ ಸುಳಿಯಲ್ಲಿ ಉದ್ಯಮ ನಡೆಸುತ್ತಿರುವ ಮಾಲೀಕರಿಗೆ ಕೊಂಚ ಆದಾಯ ಹೆಚ್ಚಾಗಲಿದೆ ಎನ್ನುವ ನಿರ್ಧಾರವನ್ನೂ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಮಾಹಿತಿ ನೀಡಿದರು.