Advertisement

ಸರ್ಕಾರ ಔದಾರ್ಯ ಬಿಟ್ಟು ಕಾಂಗ್ರೆಸ್‌ ದೊಂಬರಾಟಕ್ಕೆ ಕಡಿವಾಣ ಹಾಕಲಿ: ಎಚ್‌ಡಿಕೆ

09:01 PM Jan 12, 2022 | Team Udayavani |

ಬೆಂಗಳೂರು: ಮೇಕೆದಾಟು ಪಾದಯಾತ್ರೆಯನ್ನು “ಓಮಿಕ್ರಾನ್‌ ಜಾತ್ರೆ’ಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯ ಹೈಕೋರ್ಟ್‌ ಛೀಮಾರಿ ಹಾಕಿದೆ. ಸೋಂಕನ್ನು ನಿರ್ಲಕ್ಷಿಸಿದ ಸರ್ಕಾರಕ್ಕೆ ಚಾಟಿ ಬೀಸಿದೆ. ಕೂಡಲೇ ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಕೋವಿಡ್‌ ವೇಗವಾಗಿ ಹರಡುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರೇ ಪಾಸಿಟವ್‌ ಆಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಸರಿಯಾಗಿ ಪರೀಕ್ಷೆ ನಡೆಸಿದರೆ ದೊಡ್ಡ ಸಂಖ್ಯೆಯ ಜನರು ಸೋಂಕಿತರಾಗಿರುವುದು ಬಯಲಾಗುತ್ತದೆ. ನ್ಯಾಯಾಲಯದಿಂದ ಮತ್ತೆ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಪರಿಸ್ಥಿತಿ ಕೈಮೀರಿದೆ. ಎಚ್ಚರ ತಪ್ಪಿದರೆ ಇರುವ ಆಸ್ಪತ್ರೆಗಳು, ವೈದ್ಯ ವ್ಯವಸ್ಥೆ ಸಾಲುವುದಿಲ್ಲ. ಮತ್ತೊಮ್ಮೆ ಸರ್ಕಾರ ಮುಜುಗರಕ್ಕೆ ಒಳಗಾಗುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಕಳೆದ 4 ದಿನಗಳಿಂದ ಜಿಲ್ಲೆ ಗಳಿಂದ ಬಸ್ಸುಗಳಲ್ಲಿ ಜನರಿಗೆ ಹಣ ಕೊಟ್ಟು ಕರೆಸಿಕೊಂಡು ನಡೆಸುತ್ತಿರುವ ಈ ಜಾತ್ರೆಯಿಂದ ಮೇಕೆದಾಟು ಸಾಕಾರ ಅಸಾಧ್ಯ. ಇದು “ಸೋಂಕಿನ ಸಮಾರಾಧನೆ’ಯಷ್ಟೇ ಹೊರತು ಹೋರಾಟವಲ್ಲ. ಸರ್ಕಾರ ಜಿಲ್ಲೆಗಳಿಂದ ಬರುವ ಜನರನ್ನು ಅಲ್ಲಲ್ಲಿಯೇ ತಡೆಯುವ ಕೆಲಸ ಮಾಡಬೇಕು. ಮೇಕೆದಾಟು ಬಗ್ಗೆ ಏನೇನು ಮಾಡಲಾಗಿದೆ ಎಂದು ಸರ್ಕಾರ ಜಾಹೀರಾತು ನೀಡಿದೆ. ಬಿಜೆಪಿ-ಕಾಂಗ್ರೆಸ್‌ ಪಕ್ಷಗಳೂ ಜಾಹೀರಾತು ಕೊಟ್ಟುಕೊಂಡು ಸಮಜಾಯಿಷಿ ನೀಡಿವೆ. ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವ ಲೆಕ್ಕವನ್ನು ನಾನು ಜನರ ಮುಂದೆ ಇಡುತ್ತೇನೆ. 1924ರಿಂದ ಕಾವೇರಿ ವಿಷಯದಲ್ಲಿ ಏನೆಲ್ಲಾ ನಡೆಯಿತು? ರಾಜ್ಯಕ್ಕೆಷ್ಟು ಅನ್ಯಾಯ ಆಯಿತು ಎಂಬುದನ್ನು ಮುಂದೆ ನಾನು ವಿವರವಾಗಿ ಚರ್ಚೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ:ಅಕಾಲಿಕ ಮಳೆಗೆ ತೊಗರಿ ಇಳುವರಿ ಕುಂಠಿತ : ಕನಿಷ್ಠ ಬೆಂಬಲ ಬೆಲೆ ನಿರೀಕ್ಷೆಯಲ್ಲಿ ರೈತ

ಕಾಂಗ್ರೆಸ್‌ ಪಾದಯಾತ್ರೆಯಿಂದ ನಮ್ಮ ಪಕ್ಷಕ್ಕೇನು ಆತಂಕವಿಲ್ಲ. ಆದರೆ ಜನ ಆರೋಗ್ಯದ ಆತಂಕದಲ್ಲಿ¨ªಾರೆ. ಹಾಗಂತ, ಇವರ ಯಾತ್ರೆ ಬಗ್ಗೆ ಅಥವಾ ನಾಡಿನ ಪರ ದನಿಯೆತ್ತುವ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಕೋವಿಡ್‌ ಅಟ್ಟಹಾಸದ ಹೊತ್ತಿನಲ್ಲಿ ಇದು ಖಂಡಿತಾ ಬೇಕಿರಲಿಲ್ಲ. ಗಾಂಧೀಜಿ ಅವರ ಪಾದಯಾತ್ರೆ ಬಗ್ಗೆ ಓದಿದ್ದೇನೆ. ವಿನೋಬಾ ಭಾವೆ ಅವರ ಪಾದಯಾತ್ರೆ ಬಗ್ಗೆ ಅರಿತಿದ್ದೇನೆ. ದೇವೇಗೌಡರ ಪಾದಪಾತ್ರೆಯನ್ನು ಕಣ್ಣಾರೆ ಕಂಡಿದ್ದೇನೆ. ಆದರೆ, ಇಂಥ “ಹೈಟೆಕ್‌ ಪಾದಯಾತ್ರೆ’ಯನ್ನು ನೋಡಿರಲಿಲ್ಲ. ಇಂಥ ದೊಂಬರಾಟದಿಂದ ಕಾನೂನಿನ ವ್ಯಾಪ್ತಿಯಲ್ಲಿರುವ ಮೇಕೆದಾಟು ಯೋಜನೆ ಜಾರಿ ಸಾಧ್ಯವಿಲ್ಲ.

Advertisement

ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್‌ ಸಂಘಟನೆ ಮಾಡಿಕೊಳ್ಳಲಿ. ಕೋವಿಡ್‌ ಇಳಿಮುಖವಾದ ನಂತರ ಅದನ್ನು ಮಾಡಲಿ. ಅದನ್ನು ಬಿಟ್ಟು ಜನರ ಜೀವದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕಾಂಗ್ರೆಸ್‌ ಒಂದು ಜವಾಬ್ದಾರಿ ಪಕ್ಷವಾಗಿದ್ದರೆ ತಕ್ಷಣ ಪಾದಯಾತ್ರೆ ನಿಲ್ಲಿಸಲಿ. “ಗಂಡಸ್ತನ’ ತೋರಿಸುವುದಕ್ಕೆ ಹೋಗಿ “ಮೇಕೆದಾಟನ್ನು ಮಸಣ’ ಮಾಡುವುದು ಬೇಡ. ಕಳೆದ 4 ದಿನಗಳಿಂದ ಸರಕಾರ ತೋರಿದ ಉದಾರತೆ ಸಾಕು. ಇನ್ನೂ ಔದಾರ್ಯ ತೋರಿದರೆ ರಾಜ್ಯದ ಅವನತಿಗೆ ದಾರಿಯಾದೀತು. ಕೋವಿಡ್‌ ನಿಯಮ ಪಾಲಿಸುವಂತೆ ಜನರಿಗೆ ಹಿಂಸೆ ಕೊಟ್ಟು, ರಾಜಕಾರಣಿಗಳಿಗೆ ವಿನಾಯಿತಿ ಕೊಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಸರ್ಕಾರ ಕೆಚ್ಚೆದೆಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next