Advertisement

ಐಎಂಎ ಹಗರಣದಲ್ಲಿ ರಾಜ್ಯ ಸರ್ಕಾರ ಶಾಮೀಲು: ಬಿಎಸ್‌ವೈ

11:26 PM Jun 15, 2019 | Team Udayavani |

ಬೆಂಗಳೂರು: ಐಎಂಎ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿ ಮುಸ್ಲಿಂ ನಿಯೋಗ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಅಬ್ದುಲ್‌ ಅಜೀಂ ನೇತೃತ್ವದ ಮುಸ್ಲಿಂ ನಿಯೋಗ, ಅಹೋರಾತ್ರಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಬಹುಕೋಟಿ ಅಂತರ್‌ ರಾಜ್ಯ ಹಗರಣ ಇದಾಗಿದ್ದು, ಪ್ರಧಾನಿ ಮೋದಿಯವರ ಗಮನಕ್ಕೆ ತಂದು ಇತರ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಐಎಂಎ ಬಹುಕೋಟಿ ಹಗರಣದಲ್ಲಿ ರಾಜ್ಯ ಸರ್ಕಾರ ನೇರವಾಗಿ ಶಾಮೀಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮನ್ಸೂರ್‌ ಖಾನ್‌ ಎರಡೂ ಪಕ್ಷಗಳಿಗೆ ಹಣ ಹಂಚಿಕೆ ಮಾಡಿದ್ದಾನೆ. ಈಗ ರಾಜ್ಯ ಸರ್ಕಾರವೇ ಆತನನ್ನು ವಿದೇಶಕ್ಕೆ ಕಳುಹಿಸಿದೆ ಎಂದು ದೂರಿದರು.

ಇದೊಂದು ಬೃಹತ್‌ ಹಗರಣವಾಗಿದೆ. ಸಾವಿರಾರು ಜನರಿಗೆ ಬಡ್ಡಿಯ ಆಮಿಷ ತೋರಿಸಿ, ಅವರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ್ದ ಐಎಂಎ ಸಂಸ್ಥೆ ಮಾಲೀಕ ಮನ್ಸೂರ್‌ ಖಾನ್‌, ಯಾರೊಬ್ಬರಿಗೂ ಹಣ ನೀಡದೆ ವಿದೇಶಕ್ಕೆ ಪರಾರಿ ಆಗಿದ್ದಾನೆ. ಆತ ಎಲ್ಲೆ ಅಡಗಿದ್ದರೂ ಕರ್ನಾಟಕಕ್ಕೆ ಹಿಡಿದು ತಂದು ನಿಮ್ಮೆಲ್ಲರ ಹಣವನ್ನು ಕೊಡಿಸುವ ಜವಾಬ್ದಾರಿ ನಮ್ಮದು ಎಂಬ ಭರವಸೆ ನೀಡಿದರು.

ಯಾರೊಬ್ಬರು ಆತಂಕಕ್ಕೆ ಒಳಗಾಗಬಾರದು. ಸಹನೆಯಿಂದ ವರ್ತಿಸಬೇಕು. ಅತಿ ಶೀಘ್ರದÇÉೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಐಎಂಎ ಸಂಸ್ಥೆಯ ವಂಚನೆ ಮಾಹಿತಿ ನೀಡಲಿದ್ದೇವೆ. ಸಿಬಿಐನಿಂದ ಮಾತ್ರ ನಿಪ್ಪಕ್ಷಪಾತ ತನಿಖೆ ಸಾಧ್ಯ ಎಂಬುದನ್ನು ಕೇಂದ್ರಕ್ಕೆ ಮನವಿ ಮಾಡಲಿದ್ದೇವೆ ಎಂದರು.

Advertisement

ಜಮೀರ್‌ ಪ್ರಕರಣದ ಪಾಲುದಾರ – ಶೋಭಾ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದ ಎಲ್ಲ ಸಂಸದರು ಜೂನ್‌ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡುತ್ತೇವೆ. ರಾಜ್ಯ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಹಾಗೂ ಐಎಂಎ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ಐಎಂಎ ಪ್ರಕರಣವನ್ನು ಮುಚ್ಚಿ ಹಾಕಲಿದೆ. ಹೀಗಾಗಿ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಲಿದ್ದೇವೆ. ಐಎಂಎ ಹಗರಣದಲ್ಲಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಪಾಲುದಾರರಾಗಿದ್ದಾರೆ. ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು. ಶಾಸಕ ರೋಷನ್‌ ಬೇಗ್‌ ಅವರ ಮೇಲೂ ಆರೋಪ ಕೇಳಿ ಬಂದಿದೆ. ಹೀಗಾಗಿ, ಈ ಇಬ್ಬರ ಮೇಲೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ನಿಯೋಗದ ನೇತೃತ್ವ ವಹಿಸಿದ್ದ ಅಬ್ದುಲ್‌ ಅಜೀಂ ಮಾತನಾಡಿ, ಹಗರಣದಲ್ಲಿ ಸಚಿವ ಜಮೀರ್‌ ಅಹಮ್ಮದ್‌ ಮತ್ತು ಶಿವಾಜಿನಗರದ ಶಾಸಕ ರೋಷನ್‌ ಬೇಗ್‌ ನೇರವಾಗಿ ಶಾಮೀಲಾಗಿದ್ದಾರೆ. ಎಸ್‌ಐಟಿ ತಂಡ ಈ ಇಬ್ಬರನ್ನು ಮೊದಲು ಬಂಧಿಸಿದರೆ ಎಲ್ಲ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು.

ಐಎಂಎ ಮೊದಲಾದ ವಂಚನೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ 2019ರ ಫೆಬ್ರವರಿಯಲ್ಲೇ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಜನರಿಗೆ ಈಗ ಆಗಿರುವ ಅನ್ಯಾಯಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next