ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ನಷ್ಟವಾದರೂ ಜಿಲ್ಲಾಡಳಿತ ಬಳಿ ಹಣ ಇಲ್ಲ. ಇದು ಬಿಜೆಪಿ ಸರಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪ ಮಾಡಿದರು.
ನಗರದ ಆರ್ ಟಿಒ ವೃತ್ತದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಅತೀ ಹೆಚ್ಚು ಸಚಿವರಿದ್ದರೂ ಯಾರ ಕೈಗೆ ಸಿಗುತ್ತಿಲ್ಲ.ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಕೇಂದ್ರ ಸರಕಾರ ಅನುದಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿರಾ ಹಾಗೂ ಆರ್ ಆರ್ ನಗರದ ಉಪಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ ಅವರು ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ. ರಾಜ್ಯ ಸರಕಾರದ ವಿರುದ್ದ ಇರುವ ಸಿಟ್ಟನ್ನು ಈ ಚುನಾವಣೆಯಲ್ಲಿ ಜನರು ತೋರಿಸುತ್ತಾರೆ ಎಂದರು.
ಇದನ್ನೂ ಓದಿ:ಅ.21ರಂದು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಬಿಎಸ್ ವೈ ವೈಮಾನಿಕ ಸಮೀಕ್ಷೆ
ಬೆಳಗಾವಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕ್ಯಾಂಟೀನ್ ಉದ್ಘಾಟಿಸಿದ ಅವರು ಕಾಂಗ್ರೆಸ್ ಕಚೇರಿಗೆ ಬರುವ ಕಾರ್ಯಕರ್ತರಿಗೆ ಹಾಗೂ ಸಾಮಾನ್ಯ ಜನರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕ್ಯಾಂಟೀನ್ ಆರಂಭಿಸಿದೆ ಎಂದರು.
ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಉಪಸ್ಥಿತರಿದ್ದರು.