Advertisement

ಅನರ್ಹರಿಗೂ ವಸತಿ ನೀಡಿ ಅಕ್ರಮ: ಸಿಎಜಿ ವರದಿಯಲ್ಲಿ ಬಹಿರಂಗ

09:46 PM Sep 20, 2022 | Team Udayavani |

ಬೆಂಗಳೂರು: ಫ‌ಲಾನುಭವಿಗಳನ್ನು ಗುರುತಿಸುವುದು ಹಾಗೂ ಯೋಜನೆ ಅನುಷ್ಠಾನದಲ್ಲಿನ ವಿಳಂಬದಿಂದಾಗಿ ಕೇಂದ್ರ ಸರಕಾರ 2022ರಲ್ಲಿ ಎಲ್ಲರಿಗೂ ಸೂರು ಯೋಜನೆಗೆ ಹಿನ್ನಡೆಯಾಗಿದೆ. ಜತೆಗೆ ಅನರ್ಹ ಫ‌ಲಾನುಭವಿಗಳನ್ನು ಯೋಜನೆ ಫ‌ಲಾನುಭವಿ ಪಟ್ಟಿಗೆ ಸೇರಿಸಿ ನೈಜ ಫ‌ಲಾನುಭವಿಗಳನ್ನು ವಂಚಿತರನ್ನಾಗಿಸಲಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

Advertisement

ಕರ್ನಾಟಕದಲ್ಲಿ ನಗರ ಪ್ರದೇಶದ ಬಡವರಿಗೆ ವಸತಿ ಯೋಜನೆಗಳ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣೆ ಕುರಿತ ಲೆಕ್ಕಪರಿಶೋಧನಾ ವರದಿ ವಸತಿ ಯೋಜನೆಗಳ ಅನುಷ್ಠಾನದಲ್ಲಾಗಿರುವ ನ್ಯೂನತೆಗಳನ್ನು ಬಹಿರಂಗಪಡಿಸಲಾಗಿದೆ.

ರಾಜೀವ್‌ಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಕೈಗೆಟುಕುವ ಬೆಲೆಯಲ್ಲಿ ವಸತಿ (ಎಎಚ್‌ಪಿ) ಹಾಗೂ ಫ‌ಲಾನುಭವಿ ನೇತೃತ್ವದಲ್ಲಿ ವೈಯಕ್ತಿಕ ವಸತಿ ನಿರ್ಮಾಣ (ಬಿಎಲ್‌ಸಿ) ಯೋಜನೆ ಅಡಿಯಲ್ಲಿ ವಸತಿ ಅಗತ್ಯವಿರುವ 20.35 ಲಕ್ಷ ಜನರಿದ್ದರು. ಆದರೆ, ಅದರಲ್ಲಿ 13,71,592 ಫ‌ಲಾನುಭವಿಗಳನ್ನು ಗುರುತಿಸಲಾಗಿತ್ತು. ಆದರೆ, ಅದರಲ್ಲಿ 5,17,531 ಫ‌ಲಾನುಭವಿಗಳಿಗೆ ವಸತಿ ನೀಡುವ ಕುರಿತು ನಿರ್ಧರಿಸಲಾಗಿತ್ತು. ಅದರಲ್ಲಿ 3.43 ಲಕ್ಷ ಮಂದಿಯನ್ನು ಮಾತ್ರ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಬಳಸಿಕೊಂಡು ದೃಢೀಕರಿಸಲಾಗಿತ್ತು. ಅಲ್ಲದೆ, 2021ರ ಮಾರ್ಚ್‌ನಲ್ಲಿ ಕೇವಲ 88,395 ವಸತಿ ಘಟಕಗಳು ಪೂರ್ಣಗೊಂಡಿದ್ದವು.

ಉಳಿದಂತೆ 3,28,499 ವಸತಿ ಘಟಕಗಳ ನಿರ್ಮಾಣ ಕಾಮಗಾರಿ 2021ರ ವೇಳೆಗೆ ಇನ್ನೂ ಪ್ರಾರಂಭವಾಗಿರಲಿಲ್ಲ. ಈ ರೀತಿಯ ನಿರ್ಲಕ್ಷ್ಯ ಮತ್ತು ಫ‌ಲಾನುಭವಿಗಳನ್ನು ಗುರುತಿಸುವಲ್ಲಾಗಿರುವ ನ್ಯೂನತೆಯಿಂದಾಗಿ 2022ರ ವೇಳೆ ಎಲ್ಲರಿಗೂ ವಸತಿ ಯೋಜನೆ ಗುರಿ ಸಾಧಿಸುವುದರಲ್ಲಿ ಹಿನ್ನಡೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿಯಲ್ಲಿನ ಪ್ರಮುಖಾಂಶಗಳು:

Advertisement

* 3 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ಅನರ್ಹ ಫ‌ಲಾನುಭವಿಗಳ ಆಯ್ಕೆ

* ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚಿನ ಸದಸ್ಯರಿಗೆ ವಸತಿ ಘಟಕ ಹಂಚಿಕೆ

* ನಿಯಮ ಪಾಲಿಸದ ಕಾರಣ 1,003.55 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರಕಾರದಿಂದ ತಡೆ

* ಯೋಜನೆಯ ಮಾರ್ಗಸೂಚಿ ಅಡಿ ಸೂಚಿಸಲಾದ ಮೂಲಸೌಕರ್ಯ ಅನುಷ್ಠಾನದಲ್ಲೂ ಲೋಪ

* 111 ಫ‌ಲಾನುಭವಿಗಳಿಗೆ 1.30 ಕೋಟಿ ರೂ. ಎರಡು ಬಾರಿ ಸಹಾಯಧನ ಪಾವತಿ

* ಟೆಂಡರ್‌ ಪ್ರೀಮಿಯಂ ಮತ್ತು ಯೋಜನೆಗಳ ವೆಚ್ಚದ ಹೆಚ್ಚಳವನ್ನು ಫ‌ಲಾನುಭವಿಗಳಿಂದ ಪಡೆದಿದ್ದರಿಂದ ಫ‌ಲಾನುಭವಿಗಳಿಗೆ 186.17 ಕೋಟಿ ರೂ. ಹೆಚ್ಚುವರಿ ಹೊರೆ

* ನಕಲಿ ಜಿಯೋ ಟ್ಯಾಗ್‌ಗೂ ಆರ್ಥಿಕ ನೆರವು

Advertisement

Udayavani is now on Telegram. Click here to join our channel and stay updated with the latest news.

Next