Advertisement

ನೆರೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫ‌ಲ

09:07 PM Feb 22, 2020 | Lakshmi GovindaRaj |

ತುಮಕೂರು: ರಾಜ್ಯ ಸರ್ಕಾರ ನೆರೆಪರಿಹಾರ ಒದಗಿಸುವಲ್ಲಿ ವಿಫ‌ಲವಾಗಿದ್ದು, ಜನವಿರೋಧಿ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದು ಬಡಿಗೆ ತೆಗೆದುಕೊಂಡು ಒಡೆಯುವ ಕಾಲ ದೂರವಿಲ್ಲ ಎಂದು ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ ವಾಗ್ಧಾಳಿ ನಡೆಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಕೋಟಿ ರೂ. ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರ ಒಂದೊಂದು ಬಾರಿ ನಾನಾ ಬಗೆಯ ಹೇಳಿಕೆ ನೀಡಿ ನಷ್ಟದ ಪ್ರಮಾಣ ತಿಳಿಸುತ್ತಿದೆ. ಒಂದು ಲಕ್ಷ ಕೋಟಿ ನಷ್ಟವಾಗಿದ್ದರೂ ಕೇಂದ್ರ ಸರ್ಕಾರ ಕೇವಲ 1,869 ಕೋಟಿ ಬಿಡುಗಡೆ ಮಾಡಿದೆ. ಪರಿಹಾರ ಸಿಗದ ದಿವ್ಯಾಂಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ದೂರಿದರು.

ಜೂಜುಕೇಂದ್ರವೇ ಬೇಕೆ?: ಸರ್ಕಾರ ಜೂಜಿಗೆ, ಹೆಂಡಕ್ಕೆ ಪ್ರೋತ್ಸಾಹಿಸುವ ಸರ್ಕಾರವಾಗಿದೆ. ಒಬ್ಬ ಸಚಿವ ಹಾದಿ-ಬೀದಿಯಲ್ಲಿ ಹೆಂಡ ಮಾರುವುದಾಗಿ ತಿಳಿಸುತ್ತಾರೆ. ಮತ್ತೂಬ್ಬರು ಆರ್ಥಿಕ ಪ್ರಗತಿಗೆ ಜೂಜಾಡಿಸುತ್ತೇವೆ ಎನ್ನುತ್ತಾರೆ. ಕರ್ನಾಟಕದ ಕರಾವಳಿ ತೀರ ಹಾಗೂ ಹಂಪಿ, ಸೋಮನಾಥಪುರ, ಬೇಲೂರು, ಹಳೇಬೀಡಿನಂತಹ ಭವ್ಯ ಕಲೆ ಪ್ರಕೃತಿ ಸಂಪತ್ತು ನಮ್ಮಲ್ಲಿ ಇರುವಾಗ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಂಡ, ಜೂಜುಕೇಂದ್ರವೇ ಬೇಕೆ?

ಸರ್ಕಾರ ಇದೇ ರೀತಿ ಮುಂದುವರಿದರೆ ಜನ ನಿಮ್ಮ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಎಚ್ಚರಿಸಿದರು. ಗುತ್ತಿಗೆ ಶಿಕ್ಷಕರಿಗೆ ವೇತನ ನೀಡಲು, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಈಗಾಗಲೇ ದೇಶದ ಮೇಲೆ 91.1ಲಕ್ಷ ಕೋಟಿ ಸಾಲವಿದೆ. ಮತ್ತೆ 8 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ. ಒಟ್ಟು 99 ಲಕ್ಷ ಕೋಟಿ ಸಾಲವಾಗುತ್ತದೆ. ದೇಶದ ಪ್ರತಿ ವ್ಯಕ್ತಿಯ ತಲೆ ಮೇಲೆ 28.200 ರೂ. ಸಾಲದ ಹೊರೆ ಹೊರಿಸಿದ್ದಾರೆ.

ವಿದೇಶಿ ಶೋಕಿ ಸಲುವಾಗಿ ದೇಶದ ತೆರಿಗೆ ಹಣ ಪೋಲಾಗುತ್ತಿದೆ. ಇದಕ್ಕೆಲ್ಲಾ ಮೋದಿಯವರ ತಪ್ಪು ಆರ್ಥಿಕ ನೀತಿಗಳೇ ಕಾರಣ. ಇದನ್ನು ಮರೆಮಾಚಲು ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಪಕ್ಷ. ರಾಷ್ಟ ವಿರೋಧಿಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಕಾಂಗ್ರೆಸ್‌ ಬಗ್ಗೆ ಆಧಾರ ರಹಿತ ಆರೋಪ ಎಂದಿಗೂ ಸಹಿಸಲಾಗದು ಎಂದರು.

Advertisement

ಇತ್ತೀಚೆಗೆ ಉತ್ತರಾಖಂಡ ಸರ್ಕಾರದ ಪ್ರಕರಣವೊಂದಕ್ಕೆ ಸಂಬಂಧಿಸಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಸಂವಿಧಾನದ ಕಲಂ 15ಎ ಗೆ ವಿರುದ್ಧವಾಗಿದೆ. ದೇಶದಲ್ಲಿ ಮನುವಾದ, ಅಂಬೇಡ್ಕರ್‌ ವಾದ, ಗಾಂಧಿ ವಾದ, ಗೂಡ್ಸೆ ವಾದದ ನಡುವೆ ಸಂಘರ್ಷ ಏರ್ಪಟ್ಟಿದೆ. ಕಾಂಗ್ರೆಸ್‌ ಅಂಬೇಡ್ಕರ್‌ ಮತ್ತು ಗಾಂಧಿ ವಾದ ಅನುಸರಿಸುತ್ತದೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಕೆಂಚಮಾರಯ್ಯ, ಕಾಂಗ್ರೆಸ್‌ ಮುಖಂಡರಾದ ನಿರಂಜನ್‌, ಹೆಚ್‌.ಸಿ.ಹನುಮಂತಯ್ಯ, ನರಸೀಯಪ್ಪ, ಮಂಜುನಾಥ್‌, ನಾಗರಾಜು ಇದ್ದರು.

ಇದೇನಾ ಬಿಜೆಪಿ ರಾಷ್ಟ್ರಪ್ರೇಮ?: ಜೂಜುಕೇಂದ್ರ, ಹೆಂಡ ಮಾರಾಟ ಹೆಚ್ಚಳದಿಂದ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಪ್ರವಾಸೋದ್ಯಮ ಇಲಾಖೆಯ ಸಂಪನ್ಮೂಲ ಕ್ರೋಢೀಕರಣದ ಹಿನ್ನೆಲೆಯಲ್ಲಿ ವಿದೇಶಿಯರ ಆಕರ್ಷಣೆಗೆ ಕ್ಯಾಸಿನೋದಂತಹ ಜೂಜು ಕೇಂದ್ರ ತೆರೆಯುವುದಾಗಿ ಸಚಿವ ಸಿ.ಟಿ.ರವಿ ಹೇಳುತ್ತಾರೆ. ಅಬಕಾರಿ ಸಚಿವರು ಹೆಂಡ ಮಾರಾಟ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಸಂಪನ್ಮೂಲ ಸಂಗ್ರಹಕ್ಕೆ ಯುವಜನರಿಗೆ ಮಾರಕವಾದ ಜೂಜು ಕೇಂದ್ರಗಳು ಅಗತ್ಯವೇ, ಇದೇನಾ ಬಿಜೆಪಿಯ ರಾಷ್ಟ್ರಪ್ರೇಮ ಎಂದು ವಿ.ಎಸ್‌ ಉಗ್ರಪ್ಪ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next