ಗಂಗಾವತಿ: ಹಿಂದಿನ ಸರಕಾರ ಜಾರಿ ಮಾಡಿದ್ದ ಪಹಣಿ ಇರುವ ರೈತರು 3ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರಿ ಸಂಸ್ಥೆ ಮತ್ತು ಬ್ಯಾಂಕುಗಳ ಮೂಲಕ ಸಾಲ ಪಡೆಯುವ ಯೋಜನೆಯನ್ನು ಬಿ.ಎಸ್.ವೈ ಸರಕಾರ ರದ್ದು ಮಾಡಿ ಹೊಸ ಸುತ್ತೋಲೆಯನ್ನು ಹೊರಡಿಸಿತ್ತು.
ಮೇ 14ರಂದು ಹೊರಡಿಸಲಾಗಿದ್ದ ಈ ಹೊಸ ಸುತ್ತೋಲೆಯ ಪ್ರಕಾರ ಒಂದು ಕುಟುಂಬಕ್ಕೆ ಮಾತ್ರ ಈ ಯೋಜನೆ ಅನ್ವಯಿಸುವಂತೆ ಸರಕಾರ ಆದೇಶ ಹೊರಡಿಸಿತ್ತು.
ರಾಜ್ಯ ಸರಕಾರದ ಈ ಹೊಸ ಸುತ್ತೊಲೆ ವಿರುದ್ದ ರಾಜ್ಯದ ರೈತರು, ಸಂಘಸಂಸ್ಥೆಗಳ ಮುಖಂಡರು ಮತ್ತು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ ಈ ಹೊಸ ಸುತ್ತೋಲೆ ಕುರಿತು ಉದಯವಾಣಿ ವೆಬ್‌ನಲ್ಲಿ ವ್ಯಾಪಕ ಪ್ರಚಾರವಾಗಿತ್ತು.
ಇದನ್ನು ಗಮನಿಸಿದ ಸರಕಾರ ಮೇ.21 ರಂದು ಜಾರಿ ಮಾಡಿದ್ದ ಸುತ್ತೋಲೆ ವಾಪಸ್ ಪಡೆದು ಭೂ ಪಹಣಿ ದಾಖಲೆ ಇರುವ ಎಲ್ಲಾ ರೈತರು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯುವ ಅರ್ಹತೆ ಪಡೆದಿರುವ ನಿಯಮದೊಂದಿಗೆ ಇತರೆ ಅರ್ಹತಾ ಮಾನದಂಡಗಳನ್ನು ಸೇರಿಸಿ ಹೊಸ ಸುತ್ತೋಲೆ ಪ್ರಕಟಿಸಿ ರೈತರಿಗೆ ಸಾಲ ನೀಡುವಂತೆ ಸೂಚನೆ ನೀಡಿದೆ.
ಅಭಿನಂದನೆ: ಸರಕಾರ ಹೊರಡಿಸಿದ್ದ ಕುಟುಂಬಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲ ಸುತ್ತೋಲೆ ವಾಪಸ್ ಪಡೆದಿರುವುದು ಸ್ವಾಗತಾರ್ಹವಾಗಿದೆ. ಸರಕಾರದ ಸುತ್ತೋಲೆಯಿಂದ ರೈತರಿಗೆ ಅನ್ಯಾಯವಾಗುತ್ತಿತ್ತು. ಹೊಸ ಸುತ್ತೋಲೆಗೆ ವಿರೋಧ ವ್ಯಕ್ತವಾಗಿದ್ದರಿಂದ ಪ್ರತಿಯೊಬ್ಬ ರೈತ ಸಾಲ ಪಡೆಯಲು ಮೇ21 ರಂದು ನೂತನ ಸುತ್ತೋಲೆ ನೆರವಾಗಲಿದೆ ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಉದಯವಾಣಿಗೆ ತಿಳಿಸಿದ್ದಾರೆ