Advertisement

Pending ಟೆಂಡರ್‌ಗಳಿಗೆ ರಾಜ್ಯ ಸರಕಾರ ವೇಗ; ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

01:23 AM Jun 14, 2024 | Team Udayavani |

ಬೆಂಗಳೂರು: ಚುನಾವಣೆ ನೀತಿಸಂಹಿತೆ ಜಾರಿಯಾಗುವುದಕ್ಕೆ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದ 147 ಟೆಂಡರ್‌ಗಳ ಅನುಷ್ಠಾನಕ್ಕೆ ಗುರುವಾರ ಸಭೆ ನಡೆಸಲಾಗಿದೆ. ಸಿಎಂ ನೇತೃತ್ವದಲ್ಲಿ ನಡೆದ ಈ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ‌ ಪರಿಶೀಲನೆ ನಡೆಸಲಾಗಿದೆ.

Advertisement

ಟೆಂಡರ್‌ ಕರೆಯಲು ನೀಡಿರುವ ಆಡಳಿ ತಾತ್ಮಕ ಮಂಜೂರಾತಿಯ ಪೈಕಿ ಎಷ್ಟು ಟೆಂಡರ್‌ ಕರೆದು ಕೆಲಸ ಪ್ರಾರಂಭವಾಗಿದೆ ಎಂದು ಸಭೆಯಲ್ಲಿ ಅವಲೋಕಿಸಲಾಗಿದೆ. 94 ಪ್ರಸ್ತಾವಗಳಿಗೆ ಟೆಂಡರ್‌ ಆಹ್ವಾನಿಸಲಾಗಿದೆ. 19 ಪ್ರಸ್ತಾವನೆಗಳು ಪರಿಶೀಲನೆಯಲ್ಲಿದ್ದು, 18 ಪ್ರಸ್ತಾವನೆಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಕಾಮಗಾರಿಗಳು ಮುಕ್ತಾಯವಾಗಿವೆ. 53 ಪ್ರಸ್ತಾವನೆಗಳು ಟೆಂಡರ್‌ ಕರೆಯಲು ಬಾಕಿ ಇವೆ ಎಂದು ಸಭೆಯ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

ಸಚಿವ ಸಂಪುಟ ಇವುಗಳ ಬಗ್ಗೆ ಗಂಭೀರ ವಾಗಿ ಪರಿಗಣಿಸಿ, ಆಡಾಳಿತಾತ್ಮಕ ಮಂಜೂರಾತಿ ನೀಡಿರುವ ಎಲ್ಲ ಟೆಂಡರ್‌ಗಳಿಗೆ ಮುಂದಿನ ಒಂದು ತಿಂಗಳೊಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.

ಸಚಿವರು,ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿಸಿ
ಜನಪರ ಆಡಳಿತ ನೀಡುವುದು ಸರಕಾರದ ಗುರಿ ಆಗಬೇಕೆಂದು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಎಲ್ಲ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಕೆಲವು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಅಪಸ್ವರ ಕೇಳಿ ಬರುತ್ತಿರುವ ಬಗ್ಗೆ ಸಿದ್ದರಾಮಯ್ಯ ನೇರವಾಗಿ ಪ್ರಸ್ತಾವಿಸಿದ್ದು, ಮುಂದೆ ಉತ್ತಮ ಆಡಳಿತ ನೀಡುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಅಧಿಕಾರಿಗಳಿಗೂ ಜನತೆಗೆ ಸ್ಪಂದಿಸಲು ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.

ಜನತಾ ದರ್ಶನ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸುವಂತೆ ಸಲಹೆ ವ್ಯಕ್ತವಾಗಿದೆ. ಇದರಿಂದ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಜನರ ಕೆಲಸವನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಸಾಧ್ಯ. ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಜನರ ಸಮಸ್ಯೆಯನ್ನು ನೇರವಾಗಿ ತಲುಪಿಸುವುದಕ್ಕೆ ಸಾಧ್ಯವಿದೆ.

Advertisement

ಆಡಳಿತ ಯಂತ್ರಕ್ಕೂ ಇದರಿಂದ ಚುರುಕು ದೊರಕುತ್ತದೆ. ಹೀಗಾಗಿ ಆದಷ್ಟು ಬೇಗ ಜನತಾ ದರ್ಶನ ಕಾರ್ಯಕ್ರಮ ಪ್ರಾರಂಭಿಸುವಂತೆ ಸಲಹೆ ವ್ಯಕ್ತವಾಗಿದೆ.

ರಾಜ್ಯದ ಹಣಕಾಸು ಪರಿಸ್ಥಿತಿ ಹಾಗೂ ಆಡಳಿತ ಸುಧಾರಣೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದ್ದು, ಒಟ್ಟು 13 ಸಾವಿರ ಕೋಟಿ ರೂ. ವಿತ್ತೀಯ ಕೊರತೆ ಸೃಷ್ಟಿಯಾಗಿರುವ ವಿಚಾರ ಕಳವಳಕ್ಕೆ ಕಾರಣವಾಗಿದೆ.

ಸುಮಾರು ಮೂರು ತಿಂಗಳು ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಂಟು ಪ್ರಮುಖ ವಿಚಾರಗಳಿಗೆ ಒಪ್ಪಿಗೆ ನೀಡಲಾಗಿದೆ. ಆದರೆ ಅನೌಪಚಾರಿಕವಾಗಿ ಸುಮಾರು ಒಂದೂವರೆ ತಾಸು ಕಾಲ ನಡೆದ ಹಣಕಾಸು ಪರಿಸ್ಥಿತಿ ಹಾಗೂ ಆಡಳಿತ ಸುಧಾರಣೆ ವ್ಯವಸ್ಥೆ ಬಗೆಗಿನ ಚರ್ಚೆ ಮಹತ್ವ ಪಡೆದುಕೊಂಡಿದೆ. ಬಜೆಟ್‌ನಲ್ಲಿ ಪ್ರಸ್ತಾವಿಸಿರುವ “ನ್ಯಾಯ’ ಯೋಜನೆ ಬಗ್ಗೆ ಸಾಕಷ್ಟು ವಿಚಾರ ವಿನಿಮಯ ನಡೆದರೂ ಅನುಷ್ಠಾನ ವಿಧಾನದಲ್ಲಿ ಸ್ಪಷ್ಟತೆ ಸಿಗದ ಕಾರಣಕ್ಕಾಗಿ ಮುಂದೂಡಲಾಗಿದೆ.

ರಾಜ್ಯದ ಹಣಕಾಸು ಪರಿಸ್ಥಿತಿ, ತೆರಿಗೆ ಸಂಗ್ರಹಣೆ ಹಾಗೂ ಸಾಲ ಸಾಧ್ಯತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಬಕಾರಿ, ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ, ಗಣಿ- ಭೂ ವಿಜ್ಞಾನ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ನೀಡಿದ ಗುರಿ ಹಾಗೂ ಸಾಧನೆ ಬಗ್ಗೆ ಚರ್ಚೆ ನಡೆಸಲಾಗಿದೆ.

ಹಣಕಾಸು ಕೊರತೆ ಬಗ್ಗೆಯೂ ಸಭೆಯಲ್ಲಿ ಕಳವಳ ವ್ಯಕ್ತವಾಗಿದ್ದು, ಇದರಿಂದ ಅಭಿವೃದ್ಧಿ ಯೋಜನೆಗಳ ಮೇಲಾಗುವ ಪರಿಣಾಮದ ಬಗ್ಗೆ ಚರ್ಚಿಸಲಾಗಿದೆ. ಒಟ್ಟಾರೆಯಾಗಿ ಈ ವರ್ಷ 13 ಸಾವಿರ ಕೋಟಿ ರೂ. ವಿತ್ತೀಯ ಕೊರತೆ ಸೃಷ್ಟಿಯಾಗಬಹುದು ಎಂದು ಸಭೆಯಲ್ಲಿ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next