Advertisement

“ಭಿನ್ನಮತ’ದ ಮಾತಲ್ಲ, “ಭಿನ್ನರಾಗ’ದ ನುಡಿ

01:29 PM Feb 09, 2020 | Team Udayavani |

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಲ್ಲಲ್ಲಿ “ಭಿನ್ನರಾಗ’ದ ಧ್ವನಿ ಮೂಡಿ ಬರುತ್ತಿದೆ. ಬಿಎಸ್‌ವೈ ಪ್ರಸ್ತುತ ಬಹಳ ಒತ್ತಡದಲ್ಲಿದ್ದು, ನಾನು ಡಿಸಿಎಂ ಹುದ್ದೆ ಕೇಳುವುದು ಸರಿಯಲ್ಲ ಎಂದು ಬಿ.ಶ್ರೀರಾಮುಲು ಕ್ಯಾತೆ ತೆಗೆದಿದ್ದಾರೆ. ಪಕ್ಷದಲ್ಲಿ ನಾವು ಹಿರಿಯರಿದ್ದರೂ, ಮಂತ್ರಿ ಸ್ಥಾನ ಕೊಟ್ಟಿಲ್ಲ. ಸ್ವಲ್ಪ ದಿನ ಕಾಯುತ್ತೇವೆ ಎಂದು ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಸಂಪುಟ ಅಸಮತೋಲನದಿಂದ ಕೂಡಿದ್ದು, 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ವಿಶ್ವನಾಥ್‌, ಎಂಬಿಟಿಗೆ ಸಚಿವ ಸ್ಥಾನ ನೀಡದಿದ್ದರೆ ಜೂನ್‌ ವೇಳೆಗೆ ಸರ್ಕಾರ ಪತನವಾಗಲಿದೆ ಎಂದು ವರ್ತೂರು ಪ್ರಕಾಶ್‌, ಮಧ್ಯಂತರ ಚುನಾವಣೆ ಖಚಿತ ಎಂದು ಪರಮೇಶ್ವರ್‌ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಯಡಿಯೂರಪ್ಪ, ಮಧ್ಯಂತರ ಚುನಾವಣೆ ಎಂಬ ಪರಮೇಶ್ವರ್‌ ಹೇಳಿಕೆ, ತಿರುಕನ ಕನಸು ಎಂದು ಕಿಡಿ ಕಾರಿದ್ದಾರೆ. ಸಂಪುಟ ವಿಸ್ತರಣೆ ಬೆನ್ನಲ್ಲೇ ಮೂಡಿ ಬರುತ್ತಿರುವ “ಭಿನ್ನರಾಗ’ದ ನುಡಿಗಳಿವು..

ಪರಂ “ಮಧ್ಯಂತರ ಕದನ’ ತಿರುಕನ ಕನಸು: ಬಿಎಸ್‌ವೈ : ಬನವಾಸಿ (ಶಿರಸಿ): ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಮಾಜಿ ಡಿಸಿಎಂ ಪರಮೇಶ್ವರ್‌ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟೀಕಿಸಿದ್ದಾರೆ. ಬನವಾಸಿಯ ಪಂಪನ ನಾಡಲ್ಲಿ ನಡೆಯುವ ಕದಂಬ ಉತ್ಸವಕ್ಕೆ ಚಾಲನೆ ನೀಡಲು ಬಂದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಕೆಲವರು ತಿರುಕನ ಕನಸು ಕಾಣುತ್ತಿದ್ದಾರೆ. ಅದಕ್ಕೆ ನಾನು ಹೆಚ್ಚು ಪ್ರತಿಕ್ರಿಯೆ ಕೊಡುವುದಿಲ್ಲ. ಪರಮೇಶ್ವರ್‌ ಹಿರಿಯ ವ್ಯಕ್ತಿ. ಮಧ್ಯಂತರ ಚುನಾವಣೆ ಎನ್ನುವ ಹೇಳಿಕೆ ಕೊಡುವ ಮೂಲಕ ಅವರ ಘನತೆ ಕಡಿಮೆ ಮಾಡಿಕೊಳ್ಳಬಾರದು. ಅವರು ಮೂರು ವರ್ಷ ವಿರೋಧ ಪಕ್ಷದಲ್ಲಿ ಕೂರಬೇಕೆಂದು ನಾನು ಸಲಹೆ ನೀಡುತ್ತೇನೆ. ಅಧಿಕಾರ ಇಲ್ಲದೇ ಹತಾಶೆಯಿಂದ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಅದು ಅವರ ಘನತೆಗೆ ತಕ್ಕುದಲ್ಲ’ ಎಂದು ಕಿಡಿ ಕಾರಿದರು.

ಸೋಮವಾರ ಖಾತೆ ಹಂಚಿಕೆ: ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು. ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಇದೆ. ಯಾವುದೇ ಸಮಸ್ಯೆ ಇಲ್ಲದೆ ಖಾತೆ ಹಂಚಿಕೆ ಮಾಡಲಾಗುವುದು. ಕೊಟ್ಟ ಮಾತಿನಂತೆ ಈಗಾಗಲೇ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ, ಖಾತೆ ಹಂಚಿಕೆ ಕೂಡ ಯಾವುದೇ ಸಮಸ್ಯೆ, ಗೊಂದಲ ಇಲ್ಲದೆ ನಡೆಯಲಿದೆ. ಸೋಮವಾರ ಎಲ್ಲದಕ್ಕೂ ತೆರೆ ಬೀಳಲಿದೆ ಎಂದರು.

Advertisement

 

13 ಜಿಲ್ಲೆಗಳಿಗೆ ಸಂಪುಟದಲ್ಲಿಪ್ರಾತಿನಿಧ್ಯವೇ ಸಿಕ್ಕಿಲ್ಲ: ಸಿದ್ದು

ಕಲಬುರಗಿ: ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪಗೆ ಸ್ವಾತಂತ್ರ್ಯವಿಲ್ಲ. ಸಚಿವ ಸಂಪುಟ ಅಸಮತೋಲನದಿಂದ ಕೂಡಿದೆ. ಇದು ಸರ್ಕಾರದಲ್ಲಿ ಅಸಮಾಧಾನಕ್ಕೆಕಾರಣವಾಗುತ್ತದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್‌ ಕೇಳಿಯೇ ನಿರ್ಧರಿಸಬೇಕಾದ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. 13 ಜಿಲ್ಲೆಗಳಿಗೆ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಕ್ಕಿಲ್ಲ. ಸಂಪುಟದಲ್ಲಿ ಸಾಮಾಜಿಕ ನ್ಯಾಯವೂ ಇಲ್ಲ ಎಂದರು. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬವಾಗಿದೆ. ಅಧ್ಯಕ್ಷರ ನೇಮಕದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿದ್ದೇವೆ. ಆಯ್ಕೆ ದಿನಾಂಕವನ್ನು ನಾವು ನಿಗದಿ ಮಾಡುವುದಕ್ಕೆ ಆಗುವುದಿಲ್ಲ. ಅಧ್ಯಕ್ಷರ ನೇಮಕ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

 

ಸಚಿವ ಸ್ಥಾನವನ್ನು ಬೇಡಿ ಪಡೆಯುವ ಅಗತ್ಯವಿಲ್ಲ : ಅಫಜಲಪುರ: ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ, ಬಿಜೆಪಿ ಸರ್ಕಾರ ಬರುವಲ್ಲಿ 17 ಶಾಸಕರ ತ್ಯಾಗ ಬಹಳ ದೊಡ್ಡದು. ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ಒಳ್ಳೆಯದೇ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ತಾಲೂಕಿನ ಚವಡಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಸಚಿವ ಸಂಪುಟದಲ್ಲಿ ಕ್ರಿಯಾಶೀಲ ವ್ಯಕ್ತಿಗಳು ಸಚಿವರಾಗಿದ್ದಾರೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಹುದ್ದೆಗಳು ತಾನಾಗೆ ಸಿಗಬೇಕು. ಅನೇಕ ಹುದ್ದೆಗಳನ್ನು ನಿಭಾಯಿಸಿದ ಅನುಭವ ಇರುವ ನನಗೆ, ಬೇಡಿ ಸಚಿವ ಸ್ಥಾನ ಪಡೆಯುವ ಅಗತ್ಯವಿಲ್ಲ. ಅವರಾಗೆ ಕೊಟ್ಟರೆ ನಿಭಾಯಿಸುವೆ” ಎಂದರು. ರಾಜ್ಯದ ಕಲ್ಯಾಣಕ್ಕಾಗಿ ಬಿಎಸ್‌ವೈ ಉತ್ತಮ ಬಜೆಟ್‌ ಮಂಡಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಸಾಕಷ್ಟು ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಉತ್ತಮ ಯೋಜನೆಗಳನ್ನು ತರುವ ಕೆಲಸ ಮಾಡಲಿದೆ. ಇನ್ನೂ ಆರು ಸಚಿವ ಸ್ಥಾನ ಬಾಕಿ ಇದ್ದು, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕಕ್ಕೆಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.

 

ಡಿಸಿಎಂ ಸ್ಥಾನದ ಆಸೆ ಇದೆ, ಆದ್ರೆ ಈಗ ಕೇಳಲ್ಲ :

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಸ್ತುತ ಬಹಳ ಒತ್ತಡದಲ್ಲಿದ್ದಾರೆ. ಇಂತಹ ಸಂದರ್ಭ ದಲ್ಲಿ ನಾನು ಉಪ ಮುಖ್ಯ ಮಂತ್ರಿ ಸ್ಥಾನ ಕೇಳುವುದು ಸರಿಯಲ್ಲ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, “ನನಗೆ ಉಪ ಮುಖ್ಯಮಂತ್ರಿ ಆಗಬೇಕೆಂಬ ಇಚ್ಛೆ ಇದೆ. ಇಲ್ಲ ಎಂದು ಹೇಳುವುದಿಲ್ಲ. ಆದರೆ, ಯಡಿಯೂರಪ್ಪ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಬೇಕಿದೆ. ಅವರು ತೀರಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಡಿಸಿಎಂ ಸ್ಥಾನ ಕೇಳಲ್ಲ’ ಎಂದರು. ಯಡಿಯೂರಪ್ಪ ನವರು ಈಗಾಗ ಲೇ ಅನೇಕ ಬಾರಿ ಹಿಂದುಳಿದ ಸಮಾಜದವರಿಗೆ ನ್ಯಾಯ ಒದಗಿಸಿದ್ದಾರೆ. ಮುಂದೆ ಅವಕಾಶ ಬಂದಾಗ ನನಗೆ ನ್ಯಾಯ ಒದಗಿಸಲಿದ್ದಾರೆ ಎಂಬ ವಿಶ್ವಾಸ ಇದೆ. ನಾನು ಉಪ ಮುಖ್ಯಮಂತ್ರಿ ಆಗಬೇಕೆಂಬುದು ಜನರ ಭಾವನೆಯಾಗಿತ್ತು. ಎಲ್ಲಾ ಜನಾಂಗಕ್ಕೂ ಅನುಕೂಲ ಮಾಡಿಕೊಟ್ಟಿರುವ ಬಿಎಸ್‌ವೈ, ಮುಂದೆ ವಾಲ್ಮೀಕಿ ಜನಾಂಗಕ್ಕೂ ನ್ಯಾಯ ಒದಗಿಸುತ್ತಾರೆ ಎಂದರು. ನೀವು ಡಿಸಿಎಂ ಆಗುವ ನಂಬಿಕೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇವರ ಇಚ್ಚೆ. ಪಕ್ಷದ ಹೈಕಮಾಂಡ್‌ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಮಾರ್ಚ್‌ನಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ನಮ್ಮ ಇಲಾಖೆ ಸಂಬಂಧ ಚರ್ಚಿಸಲು ನಾಡಿದ್ದು ಮುಖ್ಯಮಂತ್ರಿಯನ್ನು ಭೇಟಿ ಮಾಡುವೆ ಎಂದರು.

 

ಪಕ್ಷದಲ್ಲಿ ನಾವು ಹಿರಿಯರು: ಆರಗ ಜ್ಞಾನೇಂದ್ರ :

ಶಿವಮೊಗ್ಗ: ಸಚಿವ ಸ್ಥಾನಕ್ಕೆ 10 ಜನರ ಆಯ್ಕೆ ಸಮಂಜಸವಾಗಿದೆ. ಇವರೆಲ್ಲ ಮೈತ್ರಿ ಸರ್ಕಾರದಿಂದ ಹೊರಬರದೇ ಇದ್ದರೆ ಬಿಜೆಪಿ ಸರ್ಕಾರ ರಚನೆಯಾಗುತ್ತಿ ರಲಿಲ್ಲ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಬೇಸರ ಇಲ್ಲ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು. ಶನಿವಾರ ಸುದ್ದಿಗಾರ ರೊಂದಿಗೆ ಮಾತ ನಾಡಿ, ನನಗೆ ಸಚಿವ ಸ್ಥಾನ ನೀಡಿ ಎಂದು ಮನವಿ ಮಾಡಿಲ್ಲ. ಆದರೆ, ಪಕ್ಷದಲ್ಲಿ ನಾವು ಹಿರಿಯರಿದ್ದೇವೆ. ಒಂದು ವೇಳೆ ನನಗೆ ಸಚಿವ ಸ್ಥಾನ ನೀಡಲು ಮುಂದಾದರೆ ಈ ಬಗ್ಗೆ ಪಕ್ಷದಲ್ಲಿ ಹಾಗೂ ನಾಯಕರಲ್ಲಿ ವಿರೋಧವಿಲ್ಲ. ಮುಖ್ಯಮಂತ್ರಿಗಳು ಹಾಗೂ ನಾನು ಜತೆಯಲ್ಲಿ  ಬೆಳೆದವರು. ಅವರು, ನಾನು ಬಹಳ ಆತ್ಮೀಯರಾಗಿದ್ದು, ನನ್ನ ಬಗ್ಗೆ ಪ್ರೀತಿ ಮತ್ತು ಕಾಳಜಿ ಹೊಂದಿದ್ದಾರೆ. ಹೀಗಾಗಿ, ಸ್ವಲ್ಪ ಕಾಲ ಕಾಯಿರಿ ಎಂದು ಹೇಳಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡುತ್ತಾ ಇದ್ದೇನೆ. ಅದು ನಮ್ಮ ಪಕ್ಷದ ಸಿದ್ಧಾಂತ ಎಂದರು.

 

ಸಿಎಂರಿಂದ ಅಸಮಾಧಾನ ನಿವಾರಣೆ: ಜೋಶಿ : ಹುಬ್ಬಳ್ಳಿ: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ತಮ್ಮ ಸ್ಥಾನಗಳನ್ನೇ ತ್ಯಾಗ ಮಾಡಿ, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಅವುಗಳನ್ನು ನೀಡಿ ಯಾಗಿದೆ. ಪಕ್ಷಕ್ಕೆ ಹೊಸಬರು ಎಂಬುದು ಇಲ್ಲಿ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿನ ಅನೇಕ ಹಿರಿಯ ಶಾಸಕರಿಗೂ ಸಚಿವ ಸ್ಥಾನ ಸಿಗಬೇಕಾಗಿದೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಹಾಗೂ ಯಡಿಯೂರಪ್ಪ ಕ್ರಮ ಕೈಗೊಳ್ಳಲಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಣ್ಣಪುಟ್ಟ ಅಸಮಾಧಾನಗಳಿದ್ದರೆ ರಾಜ್ಯ ಘಟಕ ಹಾಗೂ ಮುಖ್ಯಮಂತ್ರಿ ಸರಿಪಡಿಸ ಲಿದ್ದಾರೆ ಎಂದರು.

ಕಾಂಗ್ರೆಸ್‌ನಿಂದ ಹತಾಶ ವರ್ತನೆ: ಇದೇ ವೇಳೆ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ಪಕ್ಷದ ವರ್ತನೆ ಹಾಗೂ ಆ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಕಾಂಗ್ರೆಸ್‌ ಪಕ್ಷ ಹತಾಶೆಗೊಂಡಿದೆ ಎಂಬುದು ವ್ಯಕ್ತವಾಗುತ್ತಿದೆ. ಸಂಸತ್‌ ಅಧಿವೇಶನದಲ್ಲಿ ವಿನಾಕಾರಣ ಗಲಾಟೆ ಮಾಡುವುದು, ಸಚಿವರ ಮೇಲೆ ಹಲ್ಲೆಗೆ ಮುಂದಾಗಿರುವ ಕಾಂಗ್ರೆಸ್‌ನವರ ವರ್ತನೆ ಗಮನಿಸಿದರೆ ನೈತಿಕವಾಗಿ ಅಧ:ಪತನಗೊಂಡು, ಹತಾಶರಾಗಿದ್ದಾರೆ ಎಂದೆನಿಸುತ್ತಿದೆ. ದೇಶದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್‌ ದಯನಿಯ ಸ್ಥಿತಿಯಲ್ಲಿದೆ. ಮಹಾರಾಷ್ಟ್ರ, ಜಾರ್ಖಂಡ್‌ ಇನ್ನಿತರ ಕಡೆಗಳಲ್ಲಿ ಅತ್ಯಂತ ಸಣ್ಣ ಪಕ್ಷಗಳಿಗೆ ಬೆಂಬಲ ನೀಡಿ

ಸರ್ಕಾರದಲ್ಲಿ ಎರಡು-ಮೂರನೇ ಪಾಲುದಾರ ಪಕ್ಷವಾಗುವ ಸ್ಥಿತಿ ಅದಕ್ಕೆ ಬಂದೊದಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next